ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಗಣನೀಯ ಪ್ರಮಾಣದಲ್ಲಿ ಏರಿಕೆ

KannadaprabhaNewsNetwork |  
Published : Feb 25, 2025, 12:50 AM ISTUpdated : Feb 25, 2025, 12:29 PM IST
ಮ | Kannada Prabha

ಸಾರಾಂಶ

ಕಳೆದ ಗುರುವಾರ (ಫೆ. 20) 2 ಲಕ್ಷದ ಗಡಿ ದಾಟಿದ್ದ ಆವಕ ಸೋಮವಾರವೂ 2.33 ಲಕ್ಷ ಚೀಲಗಳು ಆವಕವಾಗುವ ಮೂಲಕ ಕಳೆದ ವಾರದ ದಾಖಲೆ ಆವಕನ್ನು ಅಳಿಸಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಗಣನೀಯ ಪ್ರಮಾಣದಲ್ಲಿ ಏರಿಕೆ ಮುಂದುವರಿದಿದ್ದು, ಸೋಮವಾರ ಮಾರುಕಟ್ಟೆಗೆ 2.33 ಲಕ್ಷ ಚೀಲ ಮಾರಾಟಕ್ಕೆ ಬರುವ ಮೂಲಕ ಪ್ರಸಕ್ತ ವರ್ಷದ ಸೀಸನ್‌ನಲ್ಲಿ ಮೂರನೇ ಬಾರಿಗೆ 2 ಲಕ್ಷದ ಗಡಿಯನ್ನು ದಾಟಿದೆ.

ಕಳೆದ ಗುರುವಾರ (ಫೆ. 20) 2 ಲಕ್ಷದ ಗಡಿ ದಾಟಿದ್ದ ಆವಕ ಸೋಮವಾರವೂ 2.33 ಲಕ್ಷ ಚೀಲಗಳು ಆವಕವಾಗುವ ಮೂಲಕ ಕಳೆದ ವಾರದ ದಾಖಲೆ ಆವಕನ್ನು ಅಳಿಸಿದೆ. ಮಾರುಕಟ್ಟೆ ಪ್ರಾಂಗಣದೆಲ್ಲೆಡೆ ಕೆಂಪು ಮೆಣಸಿನಕಾಯಿ ಚೀಲಗಳು ಕಂಡುಬಂದವು. ಆವಕ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಅಂಗಡಿಗಳಲ್ಲಿ ಚೀಲಗಳು ರಸ್ತೆಗೆ ಬಂದಿದ್ದವು. ಆದರೆ ಪೊಲೀಸರು ಮತ್ತು ಎಪಿಎಂಸಿ ಸಿಬ್ಬಂದಿ ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂತು.

ದರದಲ್ಲಿ ಸ್ಥಿರತೆ: ಆವಕ ಹೆಚ್ಚಾಗಿದ್ದರೂ ಕಳೆದ ಮೂರು ವಾರಗಳಿಗೆ ಹೋಲಿಸಿದರೆ ದರದಲ್ಲಿ ಮಾತ್ರ ಗಮನಾರ್ಹ ವ್ಯತ್ಯಾಸ ಕಂಡುಬರಲಿಲ್ಲ. ಮಾರುಕಟ್ಟೆಯಲ್ಲಿ ಸೀಡ್‌ ವೆರೈಟಿ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಬಂದಿದ್ದು, ಇನ್ನುಳಿದಂತೆ ಗುಣಮಟ್ಟದ ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಪ್ರಮಾಣ ಕಡಿಮೆ ಇದ್ದುದರಿಂದ ವರ್ತಕರು ಇಂತಹ ಚೀಲಗಳ ಖರೀದಿಗೆ ಪೈಪೋಟಿ ನಡೆಸಿದರು. 

ಮುಂದುವರಿದ ಬಿಗಿ ಭದ್ರತೆ: ದರ ಕುಸಿತವಾಗಿದೆ ಎಂದು ಆರೋಪಿಸಿ ಕಳೆದ ವರ್ಷ ಮಾ. 11ರಂದು ರೈತರು ನಡೆಸಿದ್ದ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್‌ ಮತ್ತು ಕೃಷಿ ಮಾರಾಟ ಇಲಾಖೆಯು ಪ್ರಸಕ್ತ ವರ್ಷದ ಸೀಸನ್ ಆರಂಭದಿಂದಲೂ ಬಿಗಿ ಭದ್ರತೆ ಏರ್ಪಡಿಸಿದೆ.

ಸೋಮವಾರದ ದರ: ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ ₹2689 ಗರಿಷ್ಠ ₹30689, ಡಬ್ಬಿತಳಿ ಕನಿಷ್ಠ ₹3109, ಗರಿಷ್ಠ ₹36119, ಗುಂಟೂರು ಕನಿಷ್ಠ ₹989, ಗರಿಷ್ಠ ₹16109 ಗಳಿಗೆ ಮಾರಾಟವಾಗಿವೆ. 

ನಾಳೆ ಬ್ಯಾಡಗಿಯಲ್ಲಿ ಶಿವನ ಅದ್ಧೂರಿ ಮೆರವಣಿಗೆ

ಬ್ಯಾಡಗಿ: ಶಿವರಾತ್ರಿ ಹಬ್ಬದಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವತಿಯಿಂದ ಫೆ. 26ರಂದು ಪಟ್ಟಣದಲ್ಲಿ ಪರಶಿವನ ಮಹಾರಥೋತ್ಸವ ಹಾಗೂ ಮೆರವಣಿಗೆ ಮತ್ತು ಶಿವಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಶಿವನ ಆರಾಧನೆ ನಡೆಯಲಿದೆ. ಮುಪ್ಪಿನೇಶ್ವರ ಮಠದಿಂದ ಬೆಳಗ್ಗೆ 9 ಗಂಟೆಗೆ ಶಿವನ ಮೆರವಣಿಗೆ ಆರಂಭವಾಗಲಿದೆ. ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ತಲುಪಲಿದೆ. ಬಳಿಕ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಶಿವಸ್ಮರಣೆ ಕರ‍್ಯಕ್ರಮದಲ್ಲಿ ಸಕಲ ಭಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''