ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮಹಾಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ಗುಂಪು ಬರಲಾರಂಭಿಸಿವೆ. ಬುಧವಾರ ಶಿವರಾತ್ರಿ ಇದ್ದು ಸಹಸ್ರ-ಸಹಸ್ರ ಸಂಖ್ಯೆಯ ಪಾದಯಾತ್ರಿಗಳು ಅಂದು ಕ್ಷೇತ್ರದಲ್ಲಿ ನಡೆಯುವ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.ಬೆಂಗಳೂರು, ತುಮಕೂರು, ಹಾಸನ, ರಾಮನಗರ, ಮಂಡ್ಯ, ಬೇಲೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ನೂರಾರು ತಂಡಗಳಲ್ಲಿ ಸಹಸ್ರಾರು ಪಾದಯಾತ್ರಿಗಳು ಚಾರ್ಮಾಡಿ ಘಾಟಿ ಮೂಲಕ ಆಗಮಿಸಿ ಧರ್ಮಸ್ಥಳದತ್ತ ಸಾಗುತ್ತಿದ್ದಾರೆ. ಶಿರಾಡಿ ಘಾಟಿ ಮೂಲಕ ಆಗಮಿಸುತ್ತಿರುವ ತಂಡಗಳು ಕೊಕ್ಕಡದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸುತ್ತಿವೆ.
ಚಾರ್ಮಾಡಿ ಮೂಲಕ ಆಗಮಿಸುತ್ತಿರುವ ಪಾದಯಾತ್ರಿಗಳು ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ ಹಾಗೂ ರಸ್ತೆ ಬದಿಯಲ್ಲಿ ವಿಶ್ರಾಂತಿ ಪಡೆದು ಮೃತ್ಯುಂಜಯ ನದಿಯಲ್ಲಿ ಮಿಂದು ಧರ್ಮಸ್ಥಳಕ್ಕೆ ಉಜಿರೆ, ಕಲ್ಮಂಜ ಮೂಲಕ ಹೆಜ್ಜೆ ಹಾಕುತ್ತಿದ್ದಾರೆ.ಶಿವ ಪಂಚಾಕ್ಷರಿ ಜಪ, ಭಜನೆ ಹೇಳುತ್ತಾ ಸಾಗುವ ಪಾದಯಾತ್ರಿಗಳು ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪಾದಯಾತ್ರಿಗಳ ವಿಶ್ರಾಂತಿ ವೇಳೆ ದೇವಸ್ಥಾನಗಳಲ್ಲಿ ಸ್ಥಳೀಯ ತಂಡಗಳಿಂದ ಕುಣಿತ ಭಜನೆ, ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಸ್ಥಳೀಯರು ಆಯೋಜಿಸಿದ್ದಾರೆ.
ಉರಿ ಬಿಸಿಲು:ಚಾರ್ಮಾಡಿಯಿಂದಲೇ ಉರಿಬಿಸಿಲಿನ ವಾತಾವರಣವಿದ್ದರೂ ಪಾದಯಾತ್ರಿಗಳು ಇದನ್ನು ಲೆಕ್ಕಿಸದೆ ಮುಂದುವರಿಯುತ್ತಿದ್ದಾರೆ. ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತ ಬರುವ ಪಾದಯಾತ್ರಿಗಳಿಗೆ ಸಂಘ-ಸಂಸ್ಥೆ ಮತ್ತು ಸಾರ್ವಜನಿಕರು ಕಲ್ಲಂಗಡಿ, ಮೂಸಂಬಿ, ಮಜ್ಜಿಗೆ, ನೀರು, ಶರಬತ್ತು ಇತ್ಯಾದಿ ಸೌಲಭ್ಯ ನೀಡುತ್ತಿದ್ದಾರೆ. ಪಾದಯಾತ್ರಿಗಳ ವಿಶ್ರಾಂತಿಗಾಗಿ ಕೆಲವೆಡೆ ರಸ್ತೆ ಬದಿ ಶಾಮಿಯಾನ ಅಳವಡಿಸಲಾಗಿದೆ.
ಚಾರ್ಮಾಡಿಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಹೆಚ್ಚಿನ ಧೂಳು ಉಂಟಾಗದಂತೆ ಟ್ಯಾಂಕರ್ ಮೂಲಕ ನೀರು ಹಾಕುವ ಕೆಲಸ ನಿರಂತರ ನಡೆದಿದೆ. ಪಾದಯಾತ್ರಿಗಳಿಗೆ ಸಾಕಷ್ಟು ಉಚಿತ ಸೇವೆಗಳಿದ್ದರೂ ಸ್ಥಳೀಯ ಅಂಗಡಿ ಹೊಟೇಲ್ ಗಳಲ್ಲಿ ವ್ಯಾಪಾರ, ವ್ಯವಹಾರ ಹೆಚ್ಚಿದೆ. ...............ಕಳೆದ 33 ವರ್ಷಗಳಿಂದ ಪಾದಯಾತ್ರೆ ನಡೆಸುತ್ತಿದ್ದೇವೆ. ಫೆ. 16ರಂದು ಬೆಂಗಳೂರಿನಿಂದ ಸುಮಾರು 200 ಜನರ ತಂಡ ಹೊರಟಿದ್ದು ದಿನವೊಂದಕ್ಕೆ 30-40 ಕಿ.ಮೀ. ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಯುದ್ದಕ್ಕೂ ಸ್ಥಳೀಯರಿಂದ ಉತ್ತಮ ಸಹಕಾರ,ಸೌಲಭ್ಯಗಳು ಸಿಕ್ಕಿವೆ
-ಶಂಕರ್, ಪಾದಯಾತ್ರೆ ತಂಡದ ಮುಖ್ಯಸ್ಥ, ಬೆಂಗಳೂರು.....................ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ವತಿಯಿಂದ ಬೆಳ್ತಂಗಡಿ, ಸುಬ್ರಮಣ್ಯ, ಉಪ್ಪಿನಂಗಡಿ, ಪಂಜ ಅರಣ್ಯ ಇಲಾಖೆ ವಲಯಗಳ ಮೂಲಕ ಕುಡಿಯುವ ನೀರು, ತಂಗಲು ತಾತ್ಕಾಲಿಕ ಶೆಡ್, ಕಸ ವಿಲೇವಾರಿಗೆ ಕಸದ ಬುಟ್ಟಿ ಹಾಗೂ ಅಗತ್ಯ ಮಾಹಿತಿ ನೀಡಲು ಸಿಬ್ಬಂದಿ ನಿಯೋಜಿಸಲಾಗಿದೆ.
-ಆಂಟನಿ ಮರಿಯಪ್ಪ, ಡಿಎಫ್‌ಒ, ಅರಣ್ಯ ಇಲಾಖೆ ದ.ಕ.