ಬಾಳೆಕೊಪ್ಪದಲ್ಲಿ 33 ಕೆ.ವಿ.ಪವರ್ ಸ್ಟೇಷನ್ ಗೆ 2 ಎಕರೆ ಜಾಗ ಗುರುತು: ಎಂ.ಎಸ್‌.ಮಂಜುನಾಥ್‌

KannadaprabhaNewsNetwork | Published : Dec 11, 2024 12:48 AM

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಬಾಳೆಕೊಪ್ಪದಲ್ಲಿ 33 ಕೆವಿ ಪವರ್‌ ಸ್ಟೇಷನ್ ಮಾಡಲು 2 ಎಕರೆ ಜಾಗ ಗುರುತಿಸಲಾಗಿದೆ ಎಂದು ಮೆಸ್ಕಾಂ ಇಲಾಖೆ ಚಿಕ್ಕಮಗಳೂರು ಜಿಲ್ಲಾ ಅಧೀಕ್ಷಕ ಎಂಜಿನಿಯರ್ ಎಂ.ಎಸ್‌.ಮಂಜುನಾಥ್ ತಿಳಿಸಿದರು.

ನರಸಿಂಹರಾಜಪುರದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಬಾಳೆಕೊಪ್ಪದಲ್ಲಿ 33 ಕೆವಿ ಪವರ್‌ ಸ್ಟೇಷನ್ ಮಾಡಲು 2 ಎಕರೆ ಜಾಗ ಗುರುತಿಸಲಾಗಿದೆ ಎಂದು ಮೆಸ್ಕಾಂ ಇಲಾಖೆ ಚಿಕ್ಕಮಗಳೂರು ಜಿಲ್ಲಾ ಅಧೀಕ್ಷಕ ಎಂಜಿನಿಯರ್ ಎಂ.ಎಸ್‌.ಮಂಜುನಾಥ್ ತಿಳಿಸಿದರು.

ಮಂಗಳವಾರ ಬಸ್ತಿಮಠದ ಕೆನರಾ ಬ್ಯಾಂಕ್‌ ಮೇಲ್ಬಾಗದ ಹಾಲ್‌ ನಲ್ಲಿ ಮೆಸ್ಕಾಂ ಇಲಾಖೆ ತಾಲೂಕು ವಿದ್ಯುತ್‌ ಬಳಕೆದಾರರ ಸಂಘದ ಸಹಕಾರದೊಂದಿಗೆ ನಡೆಸಿದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗ ಗುರುತಿಸಿದ ಜಾಗ ಅರಣ್ಯ ಇಲಾಖೆಗೆ ಸೇರಿದೆ. ಈ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ವ್ಯವಹಾರ ಮಾಡಲಾಗುತ್ತಿದೆ. ಖಾಸಗಿಯವರು ಜಾಗ ನೀಡಲು ಮುಂದೆ ಬಂದರೆ ಅದನ್ನು ಖರೀದಿ ಮಾಡಲಾಗುವುದು. ಕುದುರೆಗುಂಡಿಯಲ್ಲೂ 33 ಕೆವಿ ಪವರ್‌ ಸ್ಟೇಷನ್‌ ಮಾಡ ಲಾಗುವುದು. ಇದರಿಂದ ವಿದ್ಯುತ್‌ ಸಮಸ್ಯೆ ಕಡಿಮೆಯಾಗಿ ಗುಣಮಟ್ಟದ ವಿದ್ಯುತ್‌ ಸಿಗಲಿದೆ. ಮಲೆನಾಡು ಭಾಗದಲ್ಲಿ ಲೈನ್‌ ಮೆನ್‌ ಗಳ ಕೊರತೆ ಇದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಭಾಗಕ್ಕೆ ಲೈನ್‌ ಮೆನ್‌ಗಳು ಬರಲು ಹಿಂದೇಟು ಹಾಕುತ್ತಿ ದ್ದಾರೆ. ಮೆಸ್ಕಾಂ ನ ಮಂಗಳೂರಿನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಸಿ ಮಲೆನಾಡಿನ ಭಾಗಕ್ಕೆ ಹೆಚ್ಚು ಆದ್ಯತೆ ನೀಡಲು ಕೋರಿದ್ದೇನೆ ಎಂದರು.

ಕಾನೂನು ಚೌಕಟ್ಟಿನ ಒಳಗೆ ವಿದ್ಯುತ್‌ ಬಳಕೆದಾರರಿಗೆ ಅನುಕೂಲ ಮಾಡಲು ಮೆಸ್ಕಾಂ ಸಿದ್ಧವಿದೆ. ಮೆಸ್ಕಾಂನಲ್ಲಿ ಹಣದ ಕೊರತೆ ಇಲ್ಲ. ಹಳೇ ಕಂಬ ತೆಗೆದು ಹೊಸ ಕಂಬಗಳನ್ನು ಹಾಕುತ್ತಿದ್ದೇವೆ. ಈ ವರ್ಷ ಅತಿಯಾದ ಮಳೆ, ಗಾಳಿಯಿಂದ ಮಳೆ ಗಾಲದಲ್ಲಿ ವಿದ್ಯುತ್‌ ಅಡಚಣೆಯಾಗಿತ್ತು. ವಿದ್ಯುತ್ ಬಳಕೆದಾರರ ಸಹಕಾರದಿಂದಲೇ ಎಲ್ಲವನ್ನು ಸರಿಪಡಿಸಿ ವಿದ್ಯುತ್‌ ನೀಡಲಾಗಿತ್ತು ಎಂದರು.

ಮೆಸ್ಕಾಂ ಕೊಪ್ಪ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿದ್ದೇಶ್‌ ಮಾತನಾಡಿ, ಮಲೆನಾಡು ಭಾಗದಲ್ಲಿ ಶೇ. 90 ರಷ್ಟು ವಿದ್ಯುತ್‌ ಲೈನ್‌ ಅರಣ್ಯದಲ್ಲೇ ಹಾದುಹೋಗಿವೆ. ಈಗ ಹೊಸದಾಗಿ ಮಾಡುವ ಎಲ್ಲಾ ಲೈನ್‌ಗಳನ್ನು ರಸ್ತೆ ಬದಿಯಲ್ಲೇ ಹಾಕುತ್ತಿದ್ದೇವೆ. ಈ ವರ್ಷ ಅತಿ ಗಾಳಿ, ಮಳೆಯಿಂದ ಕೊಪ್ಪ ವಿಭಾಗದಲ್ಲಿ 2900 ವಿದ್ಯುತ್‌ ಕಂಬಗಳು ತುಂಡಾಗಿತ್ತು. ಪ್ರಸ್ತುತ ಮುತ್ತಿನಕೊಪ್ಪ, ನರಸಿಂಹರಾಜಪುರ, ಕೊಪ್ಪ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್‌ ಕಂಬಗಳು ದಾಸ್ತಾನು ಇದೆ ಎಂದರು.

ಸಭೆಯಲ್ಲಿ ಮೆಸ್ಕಾಂ ಇಲಾಖೆ ಬಾಳೆಹೊನ್ನೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗೌತಮ್‌ ಮೆಸ್ಕಾಂ ಇಂಜಿನಿಯರ್‌ ಸುರೇಶ್ ಇದ್ದರು.

ಗ್ರಾಹಕರ ಸಮಸ್ಯೆಗಳು: ಮೆಸ್ಕಾಂ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ತಾಲೂಕು ಮೆಸ್ಕಾಂ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾತನಾಡಿ, ಮೆಸ್ಕಾಂ ಇಲಾಖೆ ನಿಯಮ ದಂತೆ ನೆಲಮಟ್ಟದಿಂದ 13 ಅಡಿ ಎತ್ತರದ ಲೈನ್‌ ಇರಬೇಕು. ಆದರೆ, ಕೆಲವು ಲೈನ್‌ ಗಳು ಜೋತು ಬಿದ್ದಿವೆ. ಟಿಸಿ ಗಳಿಗೆ ಸಮಯಕ್ಕೆ ಸರಿಯಾಗಿ ಆಯಿಲ್‌ ಚೇಂಜ್ ಮಾಡುತ್ತಿಲ್ಲ. ಲೈನ್ ಕ್ಲಿಯರೆನ್ಸ್‌ ಸರಿಯಾಗಿ ಮಾಡುತ್ತಿಲ್ಲ. ಕೆಪಿಸಿಟಿಎಲ್‌ ನಿಯಮ ದಂತೆ 14 ಕಿಮೀ ಗೆ ಒಂದರಂತೆ ಪವರ್‌ ಸ್ಟೇಷನ್‌ ಇರಬೇಕಾಗಿತ್ತು. ಇಲ್ಲದಿದ್ದರೆ ಓಲ್ಟೇಜ್‌ ಕಡಿಮೆಯಾಗುತ್ತದೆ ಎಂದರು.

ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ.ಜಾನಕೀ ರಾಂ ಮಾತನಾಡಿ, ಟಿಸಿ ಹಾಳಾದರೆ ಕಾಲಮಿತಿಯಲ್ಲಿ ಹೊಸದು ಹಾಕಿಸಬೇಕು. ಈಗ ವಿಳಂಬವಾಗುತ್ತಿದೆ. ಕೆಲವು ಟಿ.ಸಿ.ಗಳಿಗೆ ಲೋಡ್‌ ಜಾಸ್ತಿಯಾಗುತ್ತಿದೆ. ಎಲ್ಲಾ ವಿದ್ಯುತ್‌ ಲೈನ್‌ ಗಳ ಅಕ್ಕಪಕ್ಕದ ಗಿಡ, ಗೆಂಟೆಗಳನ್ನು ತೆಗೆದು ಕ್ಲಿಯರೆನ್ಸ್‌ ಮಾಡಿಸಿಕೊಡಬೇಕು. ಜೋತು ಬಿದ್ದ ಲೈನ್‌ ಗಳನ್ನು ಸರಿಪಡಿಸಲು ಒತ್ತಾಯಿಸಿದರು.

ರೈತ ಸಂಘದ ಮುಖಂಡ ಮಾಳೂರು ದಿಣ್ಣೆ ವಿನಾಯಕ ಹಾಗೂ ಇತರ ಗ್ರಾಹಕರು ಮೆಸ್ಕಾಂ ಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡರು.

--- ಬಾಕ್ಸ್‌ ---

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನಿಧನಕ್ಕೆ 2 ನಿಮಿಷ ಮೌನಾಚರಣೆ ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ರೈತ ಮುಖಂಡ ಪಿ.ಕೆ.ಬಸವರಾಜಪ್ಪ ಮಾತನಾಡಿ, ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸಿಲಿಕಾನ್‌ ಸಿಟಿ ಮಾಡಿದರು. ರಾಜ್ಯಕ್ಕೆ ಐಟಿ ಬಿಟಿ ಕಂಪನಿ ಗಳನ್ನು ಬರಮಾಡಿಕೊಂಡರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ, ವಿಕಾಸ ಸೌಧ ಕಟ್ಟಿಸಿದ್ದರು. ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ಹೆಸರು ಗಳಿಸಿದ್ದರು. ಅವರ ಹೋದ ಹೆಜ್ಜೆ ಗುರುತುಗಳು ಮುಂದಿನ ರಾಜಕಾರಣಿಗಳಿಗೆ ದಾರಿ ದೀಪವಾಗಲಿ ಎಂದರು.

Share this article