ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಕಾಡೆಮಿಕ್ ಡೆವಲಪ್‌ಮೆಂಟ್‌ಗೆ ₹ 2 ಕೋಟಿ-ಸಚಿವ ಸುಧಾಕರ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ಶೈಕ್ಷಣಿಕ ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ, ಬಹುಬೇಗನೆ ಬದುಕನ್ನು ಕಟ್ಟಿಕೊಳ್ಳುವ ಆಸೆಯೊಂದಿಗೆ ಬಹುತೇಕ ಮಕ್ಕಳು ತಾಂತ್ರಿಕ ಶಿಕ್ಷಣದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಕಾಡೆಮಿಕ್ ಡೆವಲಪಮೆಂಟ್‌ಗಾಗಿ ₹ 2 ಕೋಟಿ ನೀಡುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಹೇಳಿದರು.

ಬ್ಯಾಡಗಿ: ಶೈಕ್ಷಣಿಕ ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ, ಬಹುಬೇಗನೆ ಬದುಕನ್ನು ಕಟ್ಟಿಕೊಳ್ಳುವ ಆಸೆಯೊಂದಿಗೆ ಬಹುತೇಕ ಮಕ್ಕಳು ತಾಂತ್ರಿಕ ಶಿಕ್ಷಣದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಕಾಡೆಮಿಕ್ ಡೆವಲಪಮೆಂಟ್‌ಗಾಗಿ ₹ 2 ಕೋಟಿ ನೀಡುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಕುಂದು ಕೊರತೆಗಳ ಸಮಾಲೋಚನೆ ವೇಳೆ ಅವರು ಮಾತನಾಡಿದರು.

ತಾಲೂಕಿಗೊಂದು ಪಾಲಿಟೆಕ್ನಿಕ್ ಕಾಲೇಜು: ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಎಲ್ಲರ ಕೈಗೆಟುವಂತೆ ಮಾಡುವುದೇ ಸರ್ಕಾರದ ಉದ್ದೇಶವಾಗಿದ್ದು, ಪ್ರತಿ ತಾಲೂಕು ಕೇಂದ್ರದಲ್ಲೊಂದು ಡಿಪ್ಲೋಮಾ ಸೇರಿದಂತೆ ತಾಂತ್ರಿಕ ಮಹಾವಿದ್ಯಾಲಯಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಉತ್ಸುಕತೆಯನ್ನು ತೋರಿದ್ದು, ಈಗಾಗಲೇ 107 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದರು.

ಪಾಲಿಟೆಕ್ನಿಕ್ ಕಾಲೇಜು ಶೈಕ್ಷಣಿಕ ವ್ಯವಸ್ಥೆ ಬಹಳಷ್ಟು ಭಿನ್ನವಾಗಿದೆ. ಉಳಿದ ಕಾಲೇಜುಗಳಂತೆ ಕಥೆ ಕಟ್ಟಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ನಿದರ್ಶನ ಮಾಡಿಯೇ ಕೊಡಬೇಕು, ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ಗಟ್ಟಿಗೊಳಿಸಬೇಕಾದಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಅಲ್ಲದೇ ಅವರೆಲ್ಲರಿಗೂ ಅವಶ್ಯವಿರುವ ಸುಸಜ್ಜಿತ ಲ್ಯಾಬ್ ಅವಶ್ಯವಿದ್ದು, ಅದನ್ನು ಪೂರೈಸಲು ಬದ್ಧವಾಗಿದ್ದೇನೆ, ಇದರಿಂದ ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.

ಪಾಲಿಟೆಕ್ನಿಕ್ ಪೂರ್ಣಗೊಳಿಸಿದ ತಕ್ಷಣವೇ ಉದ್ಯೋಗ ಸಿಗುವ ಭರವಸೆಯಿಲ್ಲ. ಹೀಗಾಗಿ ಅದೇ ವಿಷಯವನ್ನು ಮುಂದಿಟ್ಟುಕೊಂಡು ಬಹಳಷ್ಟು ಬ್ಯಾಂಕಗಳಲ್ಲಿ ವಿದ್ಯಾರ್ಥಿಗಳಿಗೆ ಎಜ್ಯುಕೇಶನ್ ಲೋನ್ ಸಿಗುತ್ತಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಮರೀಚಿಕೆಯಾಗುತ್ತಿದ್ದು ಎಲ್ಲಾ ಬ್ಯಾಂಕ್ ಗಳ ಜನರಲ್ ಮ್ಯಾನೇಜರ್‌ಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಎಜ್ಯೂಕೇಶನ್ ಲೋನ್ ವ್ಯಾಪ್ತಿಗೆ ತರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ದಾನಪ್ಪ ಚೂರಿ, ನಜೀರ್ ಅಹ್ಮದ್ ಶೇಖ್, ಮುನಾಫ್ ಎರೇಶೀಮಿ, ಭಾಷಾಸಾಬ್ ದೊಡ್ಮನಿ, ದುರ್ಗೇಶ ಗೋಣೆಮ್ಮನವರ, ಮಂಜುನಾಥ ಬೋವಿ, ಮಜೀದ್ ಮುಲ್ಲಾ, ಗಿರೀಶ್ ಇಂಡಿಮಠ, ಕಾಲೇಜು ಪ್ರಾಚಾರ್ಯ ಘಂಟಿಸಿದ್ದಪ್ಪನವರ ಹಾಗೂ ಇನ್ನಿತರರಿದ್ದರು.ಮೂಲಸೌಕರ್ಯಕ್ಕೆ ಅನುದಾನ ಕೊಡಿ: ಪಾಲಿಟೆಕ್ನಿಕ್ ಕಾಲೇಜು ಕಾಂಪೌಂಡ ನಿರ್ಮಾಣ, ಬಾಲಕ/ಬಾಲಕಿಯರ ವಸತಿ ನಿಲಯಕ್ಕಾಗಿ ಪ್ರತ್ಯೇಕ ಅನುದಾನ ನೀಡುವಂತೆ ಶಾಸಕ ಬಸವರಾಜ ಶಿವಣ್ಣನವರ ಸಚಿವರಲ್ಲಿ ಮನವಿ ಮಾಡಿದರು.

Share this article