ರೈತ ಸಂಪರ್ಕ ಕೇಂದ್ರದ ಕಟ್ಟಡ ತಳಪಾಯಕ್ಕೆ ಚಾಲನೆ: ಗುಣಮಟ್ಟದ ಕಾಮಗಾರಿಗೆ ಸೂಚನೆ
ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ₹2 ಕೋಟಿ ಮಂಜೂರಾಗಿದ್ದು ಇದರಲ್ಲಿ 1 ಕೋಟಿ ಬಿಡುಗಡೆಯಾಗಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಮಗದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ಕೃಷಿ ಇಲಾಖೆ ಆವರಣದಲ್ಲಿ ಅಂದಾಜು ₹2 ಕೋಟಿ ವೆಚ್ಚದ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಕಟ್ಟಡದ ತಳಪಾಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ನಿರ್ಮಿತಿ ಕೇಂದ್ರದವರು ಈ ಕಟ್ಟಡ ನಿರ್ಮಿಸುತ್ತಿದ್ದು ಗುಣಮಟ್ಟದ ಕಟ್ಟಡ ಕಟ್ಟಬೇಕು ಎಂದು ಸೂಚಿಸಿದರು.ಕಡಹಿನಬೈಲು ಏತ ನೀರಾವರಿ ಯೋಜನೆಗೆ ಪೈಪ್ ಲೈನ್ ಹಾಗೂ ಕೆರೆ ಅಭಿವೃದ್ಧಿಗಾಗಿ ಹಿಂದಿನ ಬಜೆಟ್ ನಲ್ಲಿ ₹9 ಕೋಟಿ ಮೀಸಲಿಡ ಲಾಗಿತ್ತು.ಇದನ್ನು ₹15 ಕೋಟಿಗೆ ಏರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಗ್ರಾಮೀಣ ರಸ್ತೆಗಳಿಗೆ ₹10 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲೇ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು. ರಸ್ತೆಯ ಪಕ್ಕದ ಜಂಗಲ್ ಕ್ಲಿಯರ್ ಮಾಡಿಸಲಾಗುವುದು. ಕ್ಷೇತ್ರದಲ್ಲಿ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲಾಗಿದೆ. ತೀರ ಹಾಳಾದ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುವುದು. ಜಯಪುರ ಹಾಗೂ ಹರಿಹರಪುರದ ರಸ್ತೆ ಅಗಲೀಕರಣ ಕ್ಕಾಗಿ ₹4 ಕೋಟಿ ಮಂಜೂರಾಗಿದೆ. ನರಸಿಂಹರಾಜಪುರ ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣಕ್ಕಾಗಿ ₹60 ಕೋಟಿ ಪ್ರಸ್ತಾವನೆಯನ್ನು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಲ್ಲಿಸಿದ್ದಾರೆ. ಹಣ ಮಂಜೂರಾದ ನಂತರ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಅವರನ್ನು ಅಭಿನಂದಿಸಲಾಯಿತು.