2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಬಾಕಿ ಪಾವತಿಯಾಗಿಲ್ಲ. ಆರ್ಥಿಕ ಇಲಾಖೆಯಿಂದ ಹಣ ಬಂದ ಕೂಡಲೇ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬೆಂಗಳೂರು : 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಬಾಕಿ ಪಾವತಿಯಾಗಿಲ್ಲ. ಆರ್ಥಿಕ ಇಲಾಖೆಯಿಂದ ಹಣ ಬಂದ ಕೂಡಲೇ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಆರ್ಥಿಕ ಇಲಾಖೆಗೆ ಹಣ ಬಿಡುಗಡೆಗೆ ತಿಳಿಸಲಾಗಿದೆ. ಮುಖ್ಯಮಂತ್ರಿ ಕೂಡ ಈ ಕುರಿತು ಭರವಸೆ ನೀಡಿದ್ದಾರೆ. ಆರ್ಥಿಕ ಇಲಾಖೆಯಿಂದ ಹಣ ಬಂದ ಕೂಡಲೇ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಪಾವತಿಸಲಾಗುವುದು ಎಂದರು.
ಬಿಪಿಎಲ್ ಪಡಿತರ ಚೀಟಿ ರದ್ದಾದ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಸ್ಥಗಿತ
ಇದೇ ವೇಳೆ ಬಿಪಿಎಲ್ ಪಡಿತರ ಚೀಟಿ ರದ್ದಾದ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಯೋಜನೆ ಅಡಿ ಸಹಾಯಧನ ಸ್ಥಗಿತಗೊಳಿಸಲಾಗುವುದು. ಗೃಹ ಲಕ್ಷ್ಮೀ ಯೋಜನೆ ಅಡಿ ಹಿಂದೆ ಎಪಿಎಲ್, ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದ ಮನೆ ಯಜಮಾನಿಯರಿಗೆ ಸಹಾಯಧನ ನೀಡಲಾಗುತ್ತಿದೆ. ಆದರೆ, ಇದೀಗ ಕುಟುಂಬದಲ್ಲಿ ಯಾರದರೂ ಜಿಎಸ್‌ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಗೃಹ ಲಕ್ಷ್ಮೀ ಸಹಾಯಧನ ನೀಡುವುದಿಲ್ಲ.
ಪಡಿತರ ಚೀಟಿ ಆಧರಿಸಿ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಹಣ
ಪಡಿತರ ಚೀಟಿ ಆಧರಿಸಿ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಹಣ ಪಾವತಿಸಲಾಗುತ್ತಿದೆ. ಆಹಾರ ಇಲಾಖೆ ನಿಯಮ ಪಾಲಿಸದ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದ್ದು, ಬಿಪಿಎಲ್ ಪಡಿತರ ಚೀಟಿ ರದ್ದಾದ ಕುಟುಂಬಗಳ ಯಜಮಾನಿಯರಿಗೆ ಗೃಹ ಲಕ್ಷ್ಮೀ ಸಹಾಯಧನ ಸ್ಥಗಿತಗೊಳಿಸಲಾಗಿದೆ. ಆಹಾರ ಇಲಾಖೆಯಿಂದ ದಾಖಲೆಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

