8 ವರ್ಷಗಳಿಂದ ನಗರದ 83 ಟವರ್‌ಗಳ ಗುತ್ತಿಗೆದಾರರು ತೆರಿಗೆ ಪಾವತಿಸಿಲ್ಲ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಸಭೆಗೆ ಮೊಬೈಲ್ ನೆಟ್‌ವರ್ಕ್ ಟವರ್ ಕಂಪನಿಗಳು ಸುಮಾರು 2 ಕೋಟಿ ರು.ಗೂ ಅಧಿಕ ತೆರಿಗೆಯನ್ನು ಬಾಕಿ ಇರಿಸಿದ್ದು, ಇದೀಗ ನಗರಸಭೆ ಕಾನೂನು ಕ್ರಮಕ್ಕೆ ಮುಂದಾಗಿದೆ.ಒಂದೆಡೆ ಮೊಬೈಲ್ ನೆಟ್‌ವರ್ಕ್ ಸೇವಾದಾರರ ಮೇಲಾಟದಿಂದಾಗಿ ಜಿಲ್ಲೆಯ ಹೃದಯ ಭಾಗವಾಗಿರುವ ಉಡುಪಿ ನಗರದಲ್ಲಿಯೇ ಸಿಗ್ನಲ್ ತೀರಾ ದುರ್ಬಲವಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಇನ್ನೊಂದೆಡೆ ಮೊಬೈಲ್ ಟವರ್ ಕಂಪನಿಗಳು ಕಳೆದ 8 ವರ್ಷಗಳಿಂದ ತೆರಿಗೆ ಶುಲ್ಕವನ್ನು ಪಾವತಿಸದೇ ನಗರಸಭೆಯನ್ನೇ ಯಾಮಾರಿಸುತಿವೆ.
ಈ ಟವರ್‌ಗಳನ್ನು ನೆಟ್‌ವರ್ಕ್ ಕಂಪನಿಗಳು ತಾವೇ ನಿರ್ಮಿಸುವುದಿಲ್ಲ, ಅವುಗಳನ್ನು ಖಾಸಗಿ ಸಂಸ್ಥೆಯೊಂದು ಗುತ್ತಿಗೆ ಪಡೆದು ನಿರ್ಮಾಣ ಮಾಡುತ್ತವೆ ಮತ್ತು ಈ ಟವರ್‌ಗಳನ್ನು ಮೊಬೈಲ್ ನೆಟ್‌ವರ್ಕ್ ಕಂಪನಿಗಳಿಗೆ ಬಾಡಿಗೆಗೆ ನೀಡಿ ಲಕ್ಷಾಂತರ ರು. ಲಾಭ ಪಡೆಯುತ್ತವೆ.
ಜೊತೆಗೆ ಈ ಟವರ್‌ಗಳನ್ನು ಖಾಸಗಿಯವರ ಕಟ್ಟಡಗಳ ಮೇಲೆ ಅಥವಾ ಭೂಮಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಈ ಕಟ್ಟಡ ಅಥವಾ ಭೂಮಿಯ ಮಾಲಕರಿಗೆ ಪ್ರತಿ ತಿಂಗಳು ಸುಮಾರು 10 ಸಾವಿರ ರು.ಗಳಷ್ಟು ವಾಣಿಜ್ಯ ಲಾಭ ಇರುವುದರಿಂದ ಅವರು ಕೂಡ ನಗರಸಭೆಯಿಂದ ವಾಣಿಜ್ಯ ಪರವಾಮಗಿ ಪಡೆದು ವಾಣಿಜ್ಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನಗರಸಭೆಗೆ ಈ ತೆರಿಗೆ ಕೂಡ ಕೂಡ ಪಾವತಿಯಾಗುತ್ತಿಲ್ಲ.
ಉಡುಪಿ ನಗರಸಭೆಯ 5ನೇ ಹಣಕಾಸು ಲೆಕ್ಕಪರಿಶೋಧನಾ ವರದಿಯಲ್ಲಿ ಮೊಬೈಲ್ ಟವರ್‌ಗಳಿಂದ ಸುಮಾರು 2 ಕೋಟಿ ರು.ಗಳಷ್ಟು ತೆರಿಗೆ ಸಂಗ್ರಹಕ್ಕೆ ಬಾಕಿ ಬಗ್ಗೆ ನಗರಸಭೆಯ ಅಧಿಕಾರಗಳ ನಿರ್ಲಕ್ಷ್ಯಕ್ಕೆ ಆಕ್ಷೇಪ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನಗರಸಭೆಯ ಅಧಿಕಾರಿಗಳು ಈ ಟವರ್ ಗುತ್ತಿಗೆದಾರರಿಗೆ ತಕ್ಷಣ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿ, ತಪ್ಪಿದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.------------ಕಾನೂನು ಕ್ರಮಕ್ಕೆ ನಿರ್ಧಾರ: ನಗರಸಭೆ ಅಧ್ಯಕ್ಷ