ಗೋಂಧಳಿ ಕಲಾವಿದನಿಗೆ ಒಲಿದ ಪದ್ಮಶ್ರೀ ಪುರಸ್ಕಾರ

KannadaprabhaNewsNetwork |  
Published : Jan 26, 2025, 01:34 AM IST
(ಫೋಟೋ 25ಬಿಕೆಟಿ8, ಡಾ.ವೆಂಕಪ್ಪ ಅಂಬಾಜಿ ಸುಗತೇಕರ) | Kannada Prabha

ಸಾರಾಂಶ

ಬಾಗಲಕೋಟೆಯ ಹಿರಿಯ ಗೋಂಧಳಿ ಹಾಡುಗಾರಿಕೆಯ ಕಲಾವಿದ 82 ವರ್ಷದ ಡಾ.ವೆಂಕಪ್ಪ ಅಂಬಾಜಿ ಸುಗತೇಕರ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆಯ ಹಿರಿಯ ಗೋಂಧಳಿ ಹಾಡುಗಾರಿಕೆಯ ಕಲಾವಿದ 82 ವರ್ಷದ ಡಾ.ವೆಂಕಪ್ಪ ಅಂಬಾಜಿ ಸುಗತೇಕರ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರೆತಿದ್ದು, ಕಲೆ ಮತ್ತು ಸಂಸ್ಕೃತಿ ತವರು ಮನೆಯಾಗಿರುವ ಜಾನಪದ ಕಲೆಯ ಪರಂಪರೆ ಉಳಿಸಿಕೊಂಡು ಬಂದಿರುವ ಈ ಕಲಾವಿದನಿಗೆ ದೊರೆತ ಪ್ರಶಸ್ತಿ ನಿಜಕ್ಕೂ ಸಾಧಕನಿಗೆ ಸಂದ ಗೌರವ ಎಂದರೆ ತಪ್ಪಾಗಲಾರದು.

ಜಾನಪದ ಕಲೆಯ ವಿಶಿಷ್ಟ ಪ್ರಕಾರಗಳಲ್ಲಿ ಒಂದಾದ ಗೋಂಧಳಿ ಹಾಡುಗಾರಿಕೆ ಮತ್ತು ಕಥನ ಗಾಯನದ ಕಲಾವಿದನಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿರುವುದು ಗ್ರಾಮೀಣ ಪ್ರದೇಶದ ಕಲೆ ಮತ್ತು ಸಂಸ್ಕೃತಿಗೆ ನಿಜವಾದ ಗೌರವ ಸಿಕ್ಕಂತಾಗಿದೆ ಎಂದೇ ಹೇಳಲಾಗುತ್ತಿದೆ. ಬಾಗಲಕೋಟೆಯ ಡಾ.ವೆಂಕಪ್ಪ ಸುಗತೇಕರ ಸದ್ಯ ನವನಗರದ ನಿವಾಸಿಯಾಗಿದ್ದು, 1943ರ ಮೇ 1ರಂದು ಹಳೇ ಬಾಗಲಕೋಟೆಯಲ್ಲಿ ಜನಿಸಿ ಮನೆತನದ ಪರಂಪರೆಯ ಗೋಂಧಳಿ ಕಲೆಯನ್ನು ಕಲಿತು ವಿಶ್ವವಿದ್ಯಾಲಯಗಳೆ ಬೆರಗಾಗುವಷ್ಟು ಬಯಲು ವಿಶ್ವವಿದ್ಯಾಲಯವನ್ನು ಸೃಷ್ಟಿ ಮಾಡಿದ ಕಲಾವಿದರು.

ಅನಕ್ಷರಸ್ಥರಾಗಿರುವ ಅಲೆಮಾರಿ ಜನಾಂಗದ ವೆಂಕಪ್ಪ ಸುಗತೇಕರ ಅವರು ಸುದೀರ್ಘ ಆರು ದಶಕಗಳ ಜನಪದ ಕಲೆಯಾದ ಗೋಂಧಳಿ ಹಾಡುಗಾರಿಕೆಯನ್ನು ಉಳಿಸಿ ಬೆಳೆಸಿದ ಪರಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಅಂಬಾಭವಾನಿಯ ಪರಮಭಕ್ತನಾಗಿರುವ ಸುಗತೇಕರ ಅವರ ಕಲೆಯಾದ ಗೋಂಧಳಿ ಹಾಡುಗಾರಿಕೆ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಮದುವೆ, ಮುಂಜುವೆ, ಗೃಹಪ್ರವೇಶ, ಧಾರ್ಮಿಕ ಆಚರಣೆಗಳಲ್ಲಿ (ಗೋಂಧಲಿಗರ) ಹಾಡು ಇಲ್ಲದೆ ಆರಂಭವಾಗುವುದೆ ಇಲ್ಲ. ಅಷ್ಟರ ಮಟ್ಟಿಗೆ 82 ವರ್ಷದ ಸುಗತೇಕರ ರಾಜ್ಯ ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಜನಪವ ವಿವಿ ಗೌರವ ಡಾಕ್ಟರೇಟ್:

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಇವರು, ವಿಶೇಷವಾಗಿ ಸಾವಿರಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ. ಮನೆತನದಿಂದ ಬಂದ ಈ ಕಲೆಯನ್ನು ತಲೆ ತಲಾಂತರದಿಂದ ಬೆಳೆಸಿಕೊಂಡು ಬಂದಿರುವ ಇವರು 77ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲೆಯನ್ನು ಕಲಿಸಿ ಪ್ರದರ್ಶಿಸಿದ್ದಾರೆ.

ಅಂಬಾಭವಾನಿಯ ಪದಗಳು, ರೇಣುಕಾ ಯಲ್ಲಮ್ಮನ ಪದಗಳು, ಕನಕದಾಸರ, ಪುರಂದರ ದಾಸರ ಕೀರ್ತನೆಗಳು, ಶಿಶುನಾಳ ಶರೀಷರ, ಕಡುಕೋಳ ಮಡಿವಾಳೇಶ್ವರರ ತತ್ವ ಪದಗಳು, ಬಸವಾದೀಶ ಶರಣರ ವಚನಗಳನ್ನು ತಮ್ಮ ಗೋಂಧಳಿ ಹಾಡುಗಾರಿಕೆಯಲ್ಲಿ ತೋರಿಸಿದ್ದಾರೆ.

ಡಾ.ವೆಂಕಪ್ಪ ಸುಗತೇಕರ ದೊರೆತ ಪ್ರಶಸ್ತಿಗಳು:

2022ರಲ್ಲಿ ಗೌರವ ಡಾಕ್ಟರೇಟ್

2012ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

2004ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಪ್ರಶಸ್ತಿ

ಮುರುಗಾಶ್ರೀ ಪ್ರಶಸ್ತಿ, ಸಿದ್ದೇಶ್ವರ ಶ್ರೀ ಪ್ರಶಸ್ತಿ, ಜಾನಪದ ಸಂತಗೌರವ ಪ್ರಶಸ್ತಿ ಪಡೆದಿರುವ ಇವರು 52 ಬಾರಿ ಆಕಾಶವಾಣಿ, 18 ಬಾರಿ ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಚಾಲುಕ್ಯ ಉತ್ಸವ, ಆನೆಗೊಂದಿ ಉತ್ಸವ, ಕದಂಬ ಉತ್ಸವ, ಬಿದರ ಉತ್ಸವ, ಕಿತ್ತೂರ ಉತ್ಸವ, ರನ್ನ ವೈಭವ ಉತ್ಸವದಲ್ಲಿ ಕಲೆಯನ್ನು ಪ್ರದರ್ಶಿಸಿದ್ದಾರೆ. ಇಂತಹ ಅಪ್ರತಿಮ ಕಲಾವಿದನಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ರಾಜ್ಯ ಹಾಗೂ ಬಾಗಲಕೋಟೆ ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ.

ಹಿರಿಯ ಗೋಂಧಳಿ ಹಾಡುಗಾರಿಕೆಯ ಕಲಾವಿದ ಡಾ.ವೆಂಕಪ್ಪ ಅಂಬಾಜಿ ಸುಗತೇಕರ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರ. ಅವರು ಸದಾ ಗೋಂಧಳಿ ಹಾಡುಗಾರಿಕೆ ಮತ್ತು ಕಥನ ಗಾಯನದ ಮೂಲಕ ಜಾನಪದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದನ್ನು ಮತ್ತೊಬ್ಬರಿಗೆ ಕಲಿಸುವ ಮೂಲಕ ಜಾನಪದ ಕಲೆಗೆ ಹೆಚ್ಚು ಮಹತ್ವ ನೀಡಿರುವುದು ಶ್ಲಾಘನೀಯ. ಪ್ರಶಸ್ತಿ ಪಡೆದ ಅವರಿಗೆ ಶುಭವಾಗಲಿ.

ಆರ್‌.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವ

ನಮ್ಮ ಮನೆಯ ಹಿರಿಯರಿಗೆ ಪದ್ಮಶ್ರೀ ಬಂದಿದ್ದು ಖುಷಿ ತಂದಿದೆ. ನಮ್ಮ ಅಜ್ಜನವರು ಚಿಕ್ಕಂದಿನಿಂದ ಬಡತನದಲ್ಲೇ ಬೆಳೆದು ಬಂದವರು. ಇತ್ತೀಚಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅವರ ಮನ್ ಕಿ ಬಾತ್‌ನಲ್ಲಿ ಸಹ ಪ್ರಸ್ತಾಪ ಮಾಡಿದ್ದರು. ನಂತರ ಇದೀಗ ಗಣರಾಜ್ಯೋತ್ಸವ ಆಹ್ವಾನಕ್ಕೂ ಆಯ್ಕೆಯಾಗಿದ್ದರು. ಇದೀಗ ಪ್ರಶಸ್ತಿ ಘೋಷಣೆ ಅಚ್ಚರಿ ತಂದಿದೆ. ಅವರ ಶ್ರಮ ಮತ್ತು ಅವರ ತಂದೆ ತಾಯಿಯವರ ಆಶೀರ್ವಾದ ಇದಕ್ಕೆಲ್ಲಾ ಕಾರಣವಾಗಿದೆ. ಮನೆಯಲ್ಲಿ ಅವರ ಜೊತೆ ಗೋಂಧಳಿ ಹಾಡು ಕೇಳುತ್ತಾ ಬೆಳೆದವರು ನಾವು.

ಡಾ.ವೆಂಕಪ್ಪ ಸೊಸೆ ಅನಿತಾ ಮತ್ತು ಮೊಮ್ಮಗ ಚೇತನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಜನಾ ಸಂಗೀತ ಕಲೆ ಉಳಿಸಿ: ಫಕೀರೇಶ್ವರ ಶ್ರೀಗಳು
ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹೂಡೇಂ ಕೃಷ್ಣಮೂರ್ತಿ ಆಯ್ಕೆ