ಅಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಬಸಣ್ಣನವರ ತತ್ವ, ಸಂದೇಶಗಳನ್ನು ಪ್ರಚೂರಪಡಿಸುವ ನಿಟ್ಟಿನಲ್ಲಿ ಕೂಡಲಸಂಗಮದಲ್ಲಿ ಎರಡು ದಿನಗಳ ಕಾಲ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ವೈಭವದಲ್ಲಿ ಮೊದಲ ದಿನ ಏ.29ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಚನ ಸಾಹಿತ್ಯ ಸಮಕಾಲಿನ ಸಂವೇದನೆ ಕುರಿತು ವಿಚಾರಗೋಷ್ಠಿ ನಡೆಯಲಿವೆ. ಗೋಷ್ಠಿ-1ರಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ-ವರ್ತಮಾನದ ಜರೂರು ವಿಷಯ ಕುರಿತು ರಂಜಾನ್ ದುರ್ಗಾ, ಡಾ.ತಾರಿಣಿ ಶುಭದಾಯಿನಿ, ಡಾ.ವಿಕ್ರಂ ವಸಾಜಿ ವಿಷಯ ಮಂಡಿಸುವರು. ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಗೋಷ್ಠಿ-2ರಲ್ಲಿ ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ ಕುರಿತು ಡಾ.ಕೆ.ನೀಲಾ, ಪ್ರೊ.ಎಂ.ಎಸ್. ಶೇಖರ್ ಮಂಡಿಸುವರು.ಗೋಷ್ಠಿ-3ರಲ್ಲಿ ವಚನ ಸಾಹಿತ್ಯ ಮತ್ತು ಮಹಿಳೆ ಕುರಿತು ಡಾ.ಬಸವರಾಜ ಸಾದರ್, ಡಾ.ಸಚಿತಾ ಬನ್ನಾಡಿ, ಡಾ.ಪ್ರಜ್ಞಾ ಮತ್ತಿಹಳ್ಳಿ ವಿಷಯ ಮಂಡಿಸುವರು, ಗೋಷ್ಠಿ 4ರಲ್ಲಿ ವಿಶ್ವಶಾಂತಿ ಹಾಗೂ ಸಾಮರಸ್ಯ ಕುರಿತು ಡಾ.ಮೀನಾಕ್ಷಿ ಬಾಳಿ, ಡಾ.ಡೊಮಿನಿಕ್, ಡಾ.ಮೈಸೂರು ಉಮೇಶ್ ಮಂಡಿಸುವರು. ಡಾ.ಸವಿತಾ ನಾಗಭೂಷಣ, ಪ್ರೊ.ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಭಾಗಿ:
ವೈಭವದ ಎರಡನೇ ದಿನ ಏ.30 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ವಿಶ್ವಗುರು ಬಸವಣ್ಣ ಸಾಂಸ್ಕೃತಿ ನಾಯಕ ಪುಸ್ತಕವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡುವರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಸಭಾಪತಿ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಜ ತಂಗಡಗಿ, ಆರ್.ಬಿ. ತಿಮ್ಮಾಪೂರ ಸೇರಿದಂತೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಗಣ್ಯರು, ಸಾಹಿತಿಗಳು, ವಿದ್ವಾಂಸರು ಭಾಗವಹಿಸುವರು.