ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಶ್ರೀರಾಮ ದೇವಸ್ಥಾನವನ್ನು ವಶಕ್ಕೆ ಪಡೆಯಲು ಬಂದಿದ್ದ ಅಧಿಕಾರಿಗಳು 2 ದಿನಗಳ ಕಾಲ ಗಡುವು ನೀಡಿ ಹೊರ ನಡೆದ ಘಟನೆ ನಡೆಯಿತು.ತಾಲೂಕಿನ ಹಳೇ ಕಿರಂಗೂರು ಗ್ರಾಮದ ಬಳಿ ಇರುವ ಶ್ರೀರಾಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಳ್ಳಲು ಮುಜರಾಯಿ ತಹಸೀಲ್ದಾರ್ ತಿಮ್ಮೇಗೌಡ, ಶ್ರೀರಂಗಟಪಟ್ಟಣ ತಹಸೀಲ್ದಾರ್ ಚೇತನಾ ಯಾದವ್, ರಂಗನಾಥಸ್ವಾಮಿ ದೇವಾಲಯದ ಇಒ ಉಮಾ, ವೃತ್ತ ನಿರೀಕ್ಷ ಬಿ.ಜಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಆಗಮಿಸಿದ್ದ ವೇಳೆ ಎರಡು ಕಡೆಗಳಿಂದಲೂ ವಾದ-ವಿವಾದ ನಡೆದು ಅಂತಿಮವಾಗಿ 2 ದಿನಗಳ ಕಾಲಾವಕಾಶ ನೀಡಿ ಬಂದಿದ್ದಾರೆ.
ಶ್ರೀರಾಮ ದೇವಸ್ಥಾನ ವಿಷಯವಾಗಿ ಕಳೆದ 20 ವರ್ಷಗಳಿಂದ ವಿವಾದ ನ್ಯಾಯಾಲಯದಲ್ಲಿದ್ದು, ಅಂತಿಮವಾಗಿ ಹೈಕೋರ್ಟ್ ದೇವಸ್ಥಾನ ಮುಜುರಾಯಿ ಇಲಾಖೆಗೆ ವಹಿಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. ಆದರೆ, ದೇವಸ್ಥಾನ ನಮಗೆ ಸೇರಿದ್ದು ಎಂದು ಹೇಳುತ್ತಿರುವ ಮಹದೇವ ಹಾಗೂ ಇತರರು ಈಗಾಗಲೇ ಈ ಜಮೀನಿಗೆ ಸೇರಿದಂತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇದ್ದು, ಶನಿವಾರ ಹಾಗೂ ಭಾನುವಾರ ಎರಡುಗಳು ರಜೆ ಇರುವ ಕಾರಣ ಸೋಮವಾರದ ವರೆಗೆ ಕಾಲಾವಕಾಶ ನೀಡಿ ಅಗತ್ಯ ದಾಖಲೆ ನೀಡಲಾಗುವುದು ಎಂದು ಪಟ್ಟು ಹಿಡಿದರು. ಬಳಿಕ ಬಂದ ದಾರಿಗೆ ಶುಂಕ ಇಲ್ಲ ಎಂಬಂತೆ ಅಧಿಕಾರಿಗಳ ಹೊರ ನಡೆದರು.ಮುಜರಾಯಿ ತಹಸೀಲ್ದಾರ್ ತಿಮ್ಮೇಗೌಡ ಮಾತನಾಡಿ, ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಯಾವುದೇ ದಾಖಲಾತಿಗಳನ್ನು ನೀಡಲು ಸಾಧ್ಯವಾಗದೆ ಅವರೇ ಪ್ರಕರಣ ಹಿಂಪಡೆದಿದ್ದಾರೆ. ಸರ್ಕಾರ ನೋಟಿಫಿಕೇಶನ್ ಹೊರಡಿಸಿ ಶ್ರೀರಾಮ ದೇವಸ್ಥಾನವನ್ನು ವಶಕ್ಕೆ ಪಡೆಯುವಂತೆ ತಿಳಿಸಿದೆ. ಆದರೆ, ಸಿವಿಲ್ ನ್ಯಾಯಾಲದಲ್ಲಿ ಕೇಸ್ ದಾಖಲಾಗಿರುವ ಬಗ್ಗೆ ತಡೆಯಾಜ್ಞೆ ಪತ್ರ ತೋರಿದ್ದಾರೆ. ಆದರೆ, ಅದರಲ್ಲಿ ನಿಖರವಾದ ಚಕ್ಕುಬಂದಿ ತೋರಿಸಿಲ್ಲ. ಒಂದು ವೇಳೆ ಸಂಬಂಧಪಟ್ಟ ಜಾಗಕ್ಕೆ ತಡೆಯಾಜ್ಞೆ ಇದ್ದರೆ ನ್ಯಾಯಾಲಯಕ್ಕೆ ಅಪಮಾನ ಮಾಡಬಾರದು ಎಂಬ ಉದ್ದೇಶದಿಂದ ಅಗತ್ಯ ದಾಖಲೆಗಳನ್ನು 2 ದಿನಗಳ ಒಳಗಾಗಿ ಒದಗಿಸುವಂತೆ ತಿಳಿಹೇಳಿ ಬಂದಿದ್ದೇವೆ. ಒಂದು ವೇಳೆ ಸಮಪರ್ಕ ದಾಖಲೆ ನೀಡದೇ ಹೋದಲ್ಲಿ ಸೋಮವಾರ ಎಂದಿನಂತೆ ಕ್ರಮ ವಹಿಸಲಾಗುವುದು ಎಂದರು.