ಬ್ಯಾಡಗಿ ಮಾರ್ಕೆಟ್‌ಗೆ ಬಂತು 2 ಲಕ್ಷ ಮೆಣಸಿನಕಾಯಿ ಚೀಲ

KannadaprabhaNewsNetwork | Published : Feb 18, 2025 12:32 AM

ಸಾರಾಂಶ

ಆರ್ಥಿಕ ವರ್ಷ ಮುಗಿಯಲು ಕೇವಲ ಒಂದೂವರೆ ತಿಂಗಳು ಬಾಕಿ ಇದ್ದು, ದರ ಕುಸಿತದಿಂದ ಮಂಕಾಗಿದ್ದ ಮಾರುಕಟ್ಟೆಗೆ 2.02 ಲಕ್ಷ ಚೀಲಗಳ ಆವಕ ಮತ್ತೆ ಜೀವ ಕಳೆ ತುಂಬಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಮೆಣಸಿನಕಾಯಿ ಆವಕದಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಾಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ೨ ಲಕ್ಷ ಚೀಲದ ಗಡಿಯನ್ನು ದಾಟಿದೆ.ಪ್ರಸಕ್ತ ವರ್ಷದಲ್ಲಿ ಒಂದು ಬಾರಿಯಾದರೂ ಆವಕ ಎರಡು ಲಕ್ಷದ ಗಡಿ ದಾಟುತ್ತದೆಯೋ ಇಲ್ಲವೋ ಎಂಬ ಅನುಮಾನ ಹೆಚ್ಚಾಗಿತ್ತು. ಇನ್ನೇನು ಪ್ರಸಕ್ತ ವರ್ಷದ ಸೀಜನ್‌ನಲ್ಲಿ ಇದು ಸಾಧ್ಯವಿಲ್ಲ ಎಂದುಕೊಂಡಿದ್ದ ವ್ಯಾಪಾರಸ್ಥರಿಗೆ ಆವಕ ಕೊಂಚ ನಿರಾಳತೆ ಮೂಡುವಂತೆ ಮಾಡಿದೆ. ಈ ವರ್ಷದ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಪ್ರತಿ ವಾರ ಲಕ್ಷಕ್ಕಿಂತ ಜಾಸ್ತಿ ಮೆಣಸಿನಕಾಯಿ ಚೀಲ ಆವಕವಾಗುತ್ತಿತ್ತು. ಒಟ್ಟು ಹತ್ತಕ್ಕೂ ಹೆಚ್ಚು ಬಾರಿ ಆವಕ ಒಂದೂವರೆ ಲಕ್ಷದ ಗಡಿ ದಾಟಿತ್ತು. ಆರ್ಥಿಕ ವರ್ಷ ಮುಗಿಯಲು ಕೇವಲ ಒಂದೂವರೆ ತಿಂಗಳು ಬಾಕಿ ಇದ್ದು, ದರ ಕುಸಿತದಿಂದ ಮಂಕಾಗಿದ್ದ ಮಾರುಕಟ್ಟೆಗೆ 2.02 ಲಕ್ಷ ಚೀಲಗಳ ಆವಕ ಮತ್ತೆ ಜೀವ ಕಳೆ ತುಂಬಿದೆ.ದಾಖಲೆ ಮುರಿಯುವುದೇ?: ಕಳೆದ ವರ್ಷದಲ್ಲಿ ಎರಡ್ಮೂರು ಬಾರಿ ಆವಕ ಮೂರು ಲಕ್ಷ ಚೀಲದ ಗಡಿಯನ್ನು ದಾಟಿತ್ತು. ಮತ್ತೆ ಮೆಣಸಿನಕಾಯಿಗೆ ಉತ್ತಮ ದರ ಸಹ ದೊರೆತಿತ್ತು. ಆದರೆ ಈ ವರ್ಷ ಮೂರು ಲಕ್ಷದ ಆವಕದ ಗಡಿ ದಾಟುವುದು ಅನುಮಾನವಾಗಿದ್ದು, ಕಳೆದ ವರ್ಷದ ದಾಖಲೆ ಆವಕ ಹಾಗೇ ಉಳಿಯುವ ಸಾಧ್ಯತೆ ಇದೆ.ಸೋಮವಾರದ ಮಾರುಕಟ್ಟೆ ದರ

ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ(ಕ್ವಿಂಟಲ್‌ಗೆ) ಕನಿಷ್ಠ ₹೨೭೬೯ ಗರಿಷ್ಠ ₹೩೧೯೧೧, ಡಬ್ಬಿತಳಿ ಕನಿಷ್ಠ ₹೩೨೦೯, ಗರಿಷ್ಠ ₹೩೪೩೭೯, ಗುಂಟೂರು ಕನಿಷ್ಠ ₹೧೦೦೯ ಗರಿಷ್ಠ ₹೧೬೩೦೦ಕ್ಕೆ ಮಾರಾಟವಾಗಿವೆ.

ಝೇಂಡಾ, ಸಂದಲ ಮುಬಾರಕ ಕಾರ್ಯಕ್ರಮ

ಶಿಗ್ಗಾಂವಿ: ತಾಲೂಕಿನ ಹುಲಗೂರಿನ ಹಜರತ್ ಸೈಯದ್ ಹಜರತ್ ಶಾ ಖಾದ್ರಿ ದರ್ಗಾದ ಝೇಂಡಾ ಹಾಗೂ ಸಂದಲ ಮುಬಾರಕ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ದರ್ಗಾದ ಗುರುಗಳು, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಅವರು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಝೇಂಡಾ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು.ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಬಸವರಾಜ ಶಿವಣ್ಣವರ, ಶಾಸಕ ಯಾಸೀರಖಾನ ಪಠಾಣ, ಕಿದ್ವಾಯಿ ಆಸ್ಪತ್ರೆಯ ಡಾ. ನದೀಮ್‌ವುಲ್ಲ ಊಡಾ, ಅನಿಲಕುಮಾರ ಪಾಟೀಲ, ಸಂಜೀವ ನೀರಲಗಿ, ಅಣ್ಣಪ್ಪ ನಡಟ್ಟಿ, ಅಣ್ಣಪ್ಪ ಲಮಾಣಿ ಉಪಸ್ಥಿತರಿದ್ದು, ಪ್ರಾರ್ಥನೆ ಸಲ್ಲಿಸಿದರು.

ಭಾನುವಾರ ರಾತ್ರಿ ೧೦ ಗಂಟೆಗೆ ಪಾತೇಹಾ ಜ್ಞಾನಿ ನಂತರ ದರ್ಗಾದಿಂದ ಫುಕ್ರಾ ಮಂಡಲದಿಂದ ಜಲ್ಪ-ವ-ಜರಬದೊಂದಿಗೆ ಊರಿನ ಪ್ರಮುಖ ಬೀದಿಯಿಂದ ಸಂಚರಿಸಿ, ಗಂಧದ ಮನೆ ತಲುಪಿ, ಮರಳಿ ಬಂದು ಮುಂಜಾನೆ ೬.೩೦ಕ್ಕೆ ಝಂಡಾ ಏರಿಸಲಾಯಿತು.ಹಿಂದು-ಮುಸಲ್ಮಾನ ಭಕ್ತರು ಉರೂಸಿನ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿ, ತನು-ಮನ-ಧನದಿಂದ ಸಹಕರಿಸಿದರು. ಮರಹುಂ ಸಜ್ಜಾದಾನಶೀನ ಸೈಯ್ಯದ ಇದ್ರೂಶಾಹ ಖಾದ್ರಿ ಅಬುಲ ಹುಸೇನ ಖಾದ್ರಿ ಪೀರಜಾದೆ ಉರ್ಫ್‌ (ಸ್ವಾಜಾ ಪೀರಾಂ) ಗದ್ದಿನಶೀನ ಹುಲಗೂರ ಪೀಠ-ಎ-ತರಿಕತ್ ಸೈಯ್ಯದ ಜೈನುಲ ಅಬದಿನ್ ಖಾದ್ರಿ ಉರ್ಫ್‌ ಯುನುಸ್ ಪೀರಾಂ ಇದ್ದರು.

Share this article