ಚನ್ನಪಟ್ಟಣ: ತಾಲೂಕಿನ ರೈತರ ಪಾಲಿಗೆ ಕಂಟಕಪ್ರಾಯವಾಗಿರುವ ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ಅನುಮತಿ ದೊರೆತಿದ್ದು, 2 ಪುಂಡಾನೆಗಳ ಸೆರೆ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ಆನೆಗಳ ದಾಂಗುಡಿ:
ಚನ್ನಪಟ್ಟಣ ವಲದಯಲ್ಲಿ ಸುಮಾರು 25ರಿಂದ 30 ಆನೆಗಳು ಓಡಾಡುತ್ತಿವೆ. ಇವುಗಳಲ್ಲಿ ಕೆಲವು ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ನರಿಕಲ್ಲುಗುಡ್ಡೆ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ಬೆಳೆದ ತೆಂಗು, ಭತ್ತ, ರಾಗಿ, ಮಾವು, ಬಾಳೆ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ಇದರಿಂದ ಕಂಗೆಟ್ಟ ರೈತರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ.ಇತ್ತೀಚೆಗೆ ಚನ್ನಪಟ್ಟಣ ಶಾಸಕ ಯೋಗೇಶ್ವರ್ ರಾಮನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಆನೆ ಸೆರೆ ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೆ ಆನೆ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ.
ಈ ಹಿಂದೆ 2022 ಹಾಗೂ 2023ರಲ್ಲಿ ಎರಡು ಬಾರಿ ಆನೆ ಸೆರೆ ಕಾರ್ಯಾಚರಣೆ ನಡೆಸಿ ಮೂರು ಆನೆಗಳನ್ನು ಸೆರೆ ಹಿಡಿಯಲಾಗಿತ್ತು. ಒಂದು ಮಖ್ನಾ, ಟಸ್ಕರ್ ಹಾಗೂ ಇನ್ನೊಂದು ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿತ್ತು. ಇವುಗಳಲ್ಲಿ ಮಖ್ನಾ ಹಾಗೂ ಟಸ್ಕರ್ ಮತ್ತೆ ಚನ್ನಪಟ್ಟಣ ವಲಯಕ್ಕೆ ಹಿಂದಿರುಗಿ ದಾಂಗುಡಿ ಶುರು ಮಾಡಿತ್ತು. ಮತ್ತೆ ಕಾಡಿಗೆ ಹಿಮ್ಮೆಟ್ಟಿಸಿದರೂ ಸಹ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ಕೊಡುತ್ತಿತ್ತು. ಜತೆಗೆ ಚನ್ನಪಟ್ಟಣದ ಅರ್ಜುನ, ಗವಿರಂಗ, ದೊಡ್ಡಾನೆ, ಬಿ.ವಿ.ಹಳ್ಳಿ ಗುಂಡ ಆನೆಗಳೂ ಬೆಳೆಗಳನ್ನು ನಾಶ ಮಾಡುತ್ತಿವೆ. ಹೆಚ್ಚು ಉಪಟಳಕಾರಿ 2 ಪುಂಡಾನೆಗಳ ಸೆರೆ ಹಿಡಿಯಲು ಮಾತ್ರ ಅನುಮತಿ ನೀಡಲಾಗಿದೆ.
ಪೊಟೊ೧೭ಸಿಪಿಟಿ೨,೩: