ಹರಪನಹಳ್ಳಿ: ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿಯಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಬಿ90) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಡಿ. 22ರಂದು ನಡೆಯಲಿರುವ ಚುನಾವಣೆ ಸಂಬಂಧ ಕಾಂಗ್ರೆಸ್‌ನಲ್ಲಿ ಭಿನ್ನಮತ ಉಂಟಾಗಿದೆ.
ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 8 ಸ್ಥಾನಗಳಿಗೆ 19 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌ನಲ್ಲಿ ಸ್ವ-ಪಕ್ಷದವರೆ ಎದುರಾಳಿಯಾಗಿರುವುದು ಗೊಂದಲಕ್ಕೆಎಡೆ ಮಾಡಿಕೊಟ್ಟಿದೆ.ಕಾಂಗ್ರೆಸ್‌ನಲ್ಲಿ ತಲಾ 8 ಜನರ 2 ಗುಂಪುಗಳು ಪ್ರತಿಸ್ಪರ್ಧಿಗಳಾಗಿದ್ದು, ಮತ ಕೇಳುವ ಕರಪತ್ರದಲ್ಲಿ 2 ಗುಂಪುಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಂದು ಘೋಷಿಸಿಕೊಂಡಿದ್ದಾರೆ. ಉಳಿದ ಮೂವರು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದಾರೆ.
ಸ್ಥಳೀಯ ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಸೂಚಿಸಿದ ಪ್ರಕಾರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆಂದು ಉದ್ದಾರ ರಂಗಪ್ಪ, ಉಮಾಮಹೇಶ್ವರಿ, ಕಳ್ಳಿಬಾವಿ ಶಫಿವುಲ್ಲಾ, ಗಾಟಿನ ಬಸವರಾಜ, ಎಚ್. ದೇವೇಂದ್ರಪ್ಪ, ನಾಲ್ಬಂದಿ ನಿಸಾರ, ಕೆ. ಮಹಬೂಬ್ ಬಾಷಾ, ಎಂ. ಸುಮಂಗಳಾ ಅಭ್ಯರ್ಥಿಗಳಾಗಿದ್ದಾರೆ.ಇನ್ನು ಎದುರಾಳಿಯಾಗಿರುವ ಅವರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆಂದು ಟಿ. ಅಹಮ್ಮದ್ ಹುಸೇನ್, ಚಿಕ್ಕೇರಿ ವೆಂಕಟೇಶ, ಜೋಗಿನ ಜಯಶ್ರೀ, ತಿಮ್ಮಾಲಪುರದ ರವಿಶಂಕರ, ಪೂಜಾರ ನಾಗಪ್ಪ, ಬಾವಿಕಟ್ಟಿ ಭರಮಪ್ಪ, ಜಿ. ಸುಜಾತಾ, ಜಿ. ಹನುಮಂತಪ್ಪ ಗುರುತಿಸಿಕೊಂಡು ಕರಪತ್ರ ಮುದ್ರಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಮುಗಿದು ಒಂದೂವರೆ ವರ್ಷ ಕಳೆದರೂ ಕಾಂಗ್ರೆಸ್‌ನಲ್ಲಿ ಭಿನ್ನಮತ, ಗೊಂದಲ ಮುಗಿದಿಲ್ಲ. ತಾಪಂ, ಜಿಪಂ ಬರಲಿದ್ದು, ಪಕ್ಷದ ವರಿಷ್ಠರು ಈ ಬಗ್ಗೆ ಗಮನಹರಿಸಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಳಲಾಗಿದೆ.ಸಾಮಾಜಿಕ ನ್ಯಾಯದಡಿ ಎಲ್ಲ ಸಮುದಾಯದವರಿಗೆ ಅವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಎರಡು ಬಾರಿ ಸಭೆ ಮಾಡಿ ಶಾಸಕರ ಸೂಚನೆಯಂತೆ ಬಿ90 ಸೊಸೈಟಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಅದರಂತೆ ಚುನಾವಣೆ ಮಾಡುತ್ತಿದ್ದೇವೆ. ಇನ್ನೊಂದು ಗುಂಪಿನ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದರು.