ನರಗುಂದ: ರಾಜ್ಯ ಸರ್ಕಾರ ರೈತರು ಬೆಳೆ ಹಾನಿ ಮಾಡಿಕೊಂಡಿದ್ದಕ್ಕೆ ಕೇವಲ ರು. 2 ಸಾವಿರ ಪರಿಹಾರ ನೀಡುತ್ತಿರುವುದು ಖಂಡನೀಯ ಎಂದು ಮಹದಾಯಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ವೀರಭಸಪ್ಪ ಹೂಗಾರ ಹೇಳಿದರು. ಅವರು ಇಲ್ಲಿ 3122ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದರು.
ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಬಾರದೇ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ರೈತ ಸಮುದಾಯದ ಸಹಾಯಕ್ಕೆ ಬಂದು ಬೆಳೆ ಹಾನಿ ಮಾಡಿಕೊಂಡ ರೈತರ ಪ್ರತಿ ಎಕರೆಗೆ ರು. 50 ಸಾವಿರ ಪರಿಹಾರ ನೀಡುವುದು ಬಿಟ್ಟು, ಕೇಂದ್ರ ಸರ್ಕಾರ ತನ್ನ ಪಾಲಿನ ಬೆಳೆ ಹಾನಿ ಪರಿಹಾರ ನೀಡಿಲ್ಲವೆಂದು ರೈತರಿಗೆ ಕೇವಲ 2 ಸಾವಿರ ಪರಿಹಾರ ನೀಡಿ ರೈತರನ್ನು ಅವಮಾನಿಸಿದೆ. ಆದ್ದರಿಂದ ಸರ್ಕಾರ ಈ 2 ಸಾವಿರ ಪರಿಹಾರ ನೀಡುವ ಅವಶ್ಯಕತೆ ಇಲ್ಲ. ರೈತರೇ ಬೇಕಾದರೆ ಸರ್ಕಾರಕ್ಕೆ 2 ಸಾವಿರ ಪರಿಹಾರ ನೀಡುತ್ತವೆ ಎಂದು ಸವಾಲು ಹಾಕಿದರು. ಸರ್ಕಾರಕ್ಕೆ ಇನ್ನು ಕಾಲ ಮಿಂಚಿಲ್ಲ, ರೈತರಿಗೆ ಪ್ರತಿ 1 ಎಕರೆಗೆ ರು. 50 ಸಾವಿರ ಪರಿಹಾರ ನೀಡಬೇಕು, ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ರೈತರು ರಾಜ್ಯ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಿ.ಎಸ್. ಪಾಟೀಲ, ಎಸ್.ಬಿ. ಜೋಗಣ್ಣವರ, ಎ.ಪಿ. ಪಾಟೀಲ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಶಿವಪ್ಪ ಸಾತಣ್ಣವರ, ಅರ್ಜುನ ಮಾನೆ, ಶಂಕ್ರಪ್ಪ ಜಾಧವ, ಮಲ್ಲೇಶ ಅಬ್ಬಿಗೇರಿ, ವಾಸು ಚವಾಣ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಯಲ್ಲಪ್ಪ ಚಲವಣ್ಣವರ ಇದ್ದರು.