ದೇವರ ಕಾಣುವ ಮುನ್ನವೇ ಮಗುವಿಗೆ ಯಮನಾದ ಕಾರು

KannadaprabhaNewsNetwork |  
Published : Feb 17, 2026, 04:00 AM ISTUpdated : Feb 17, 2026, 08:55 AM IST
road accident

ಸಾರಾಂಶ

ದೇವರ ದರ್ಶನಕ್ಕೆ ಹೋಗುವಾಗ ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಎರಡು ವರ್ಷ ಮಗುವೊಂದು ಸಾವನ್ನಪ್ಪಿರುವ ಘಟನೆ ಕೆ.ಆರ್‌. ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕ ನಿವಾಸಿ ಹರೀಶ್ ದಂಪತಿ ಪುತ್ರ ತ್ರಿಶಾನ್‌ (2) ಮೃತ ದುರ್ದೈವಿ.

 ಬೆಂಗಳೂರು :  ದೇವರ ದರ್ಶನಕ್ಕೆ ಹೋಗುವಾಗ ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಎರಡು ವರ್ಷ ಮಗುವೊಂದು ಸಾವನ್ನಪ್ಪಿರುವ ಘಟನೆ ಕೆ.ಆರ್‌. ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕ ನಿವಾಸಿ ಹರೀಶ್ ದಂಪತಿ ಪುತ್ರ ತ್ರಿಶಾನ್‌ (2) ಮೃತ ದುರ್ದೈವಿ. ತನ್ನ ಸಂಬಂಧಿ ಜತೆ ಮಗು ತೆರಳುವಾಗ ಭಾನುವಾರ ರಾತ್ರಿ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ. ಈ ಸಂಬಂಧ ಕಾರು ಚಾಲಕ ಕೃಷ್ಣ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಹರೀಶ್ ಅವರು, ತಮ್ಮ ಕುಟುಂಬದ ಜತೆ ಯಲಹಂಕ ಸಮೀಪದ ವೆಂಕಟಾಲದಲ್ಲಿ ನೆಲೆಸಿದ್ದಾರೆ. ಶಿವರಾತ್ರಿ ಹಬ್ಬದ ಅಂಗವಾಗಿ ಮಾರಗೊಂಡನಹಳ್ಳಿಯ ಶಿವನ ದೇವಾಲಯಕ್ಕೆ ತಮ್ಮ ಸೋದರ ಸಂಬಂಧಿ ಮಗ ತ್ರಿಶಾನ್‌ನನ್ನು ಕರೆದುಕೊಂಡು ಹರೀಶ್ ಸಂಬಂಧಿಕರಾದ ವಿಜಯಲಕ್ಷ್ಮೀ ಹಾಗೂ ಅವರ ಪುತ್ರ ಬದ್ರಿ ತೆರಳುತ್ತಿದ್ದರು. ಆಗ ಕಿತ್ತಗನೂರು ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಬೈಕ್‌ ಅನ್ನು ಬದ್ರಿ ನಿಲ್ಲಿಸಿದ್ದರು. ಆ ವೇಳೆ ಅತಿವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಈ ಹಂತದಲ್ಲಿ ರಸ್ತೆಗುರುಳಿದ ಮಗುವಿನ ಮೇಲೆ ಕಾರಿನ ಚಕ್ರಗಳು ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ ಗುಂಡಿ ಕಾರಣ:ಸ್ಥಳೀಯರ ಆಕ್ರೋಶ

ಅಪಘಾತದಲ್ಲಿ ಎರಡು ವರ್ಷದ ಮಗು ಸಾವಿಗೆ ರಸ್ತೆ ಗುಂಡಿ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿತ್ತಗನೂರು ಮುಖ್ಯರಸ್ತೆಯಲ್ಲಿದ್ದ ರಸ್ತೆ ಗುಂಡಿ ಕಾರಣ ಬೈಕ್‌ ನಿಯಂತ್ರಣ ತಪ್ಪಿದೆ. ಆಗ ಹಿಂದಿನಿಂದ ಬಂದ ಕಾರು ಆ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಹದಗೆಟ್ಟ ರಸ್ತೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ. ಈ ಉದಾಸೀತನೆಯಿಂದ ರಸ್ತೆ ಗುಂಡಿಗೆ ಮಗು ಬಲಿಯಾಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ರಸ್ತೆ ಗುಂಡಿ ಬಗ್ಗೆ ಉಲ್ಲೇಖವಾಗಿಲ್ಲ. ಸಂಚಾರ ದಟ್ಟಣೆ ಕಾರಣಕ್ಕೆ ನಿಧಾನವಾಗಿ ಚಲಿಸುತ್ತಿದ್ದಾಗ ಬೈಕ್‌ಗೆ ಕಾರು ಡಿಕ್ಕಿಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಅಪಘಾತದಲ್ಲಿ ಮಹಿಳೆ ಸಾವು

ಆಡುಗೋಡಿ ಸಮೀಪ ಸಂಭವಿಸಿದ್ದ ಮತ್ತೊಂದು ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಆನೇಪಾಳ್ಯದ ನಿವಾಸಿ ಅಮಲಾ (41) ಮೃತ ದುರ್ದೈವಿ. ಮನೆ ಸಮೀಪದ ಡಿ ಮಾರ್ಟ್‌ನಲ್ಲಿ ದಿನಸಿ ಖರೀದಿಸಿ ಭಾನುವಾರ ಮಗನ ಜತೆ ಅವರು ತೆರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ.

ಬನ್ನೇರುಘಟ್ಟ ರಸ್ತೆಯಿಂದ ಮನೆಗೆ ತೆರಳಲು ತಿರುವು ತೆಗೆದುಕೊಳ್ಳುವಾಗ ಅವರ ಬೈಕ್‌ಗೆ ದಿಢೀರನೇ ಆಟೋ ಅಡ್ಡ ಬಂದಿದೆ. ಆಗ ಬ್ರೇಕ್ ಹಾಕಿದಾಗ ಬೈಕ್‌ನಿಂದ ಅಮಲಾ ಕೆಳಗೆ ಬಿದ್ದಿದ್ದು, ಅದೇ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಅವರ ಮೇಲೆ ಹರಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಅಮಲಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ
ವೇಮುಲಾ ಮಸೂದೆಗೆ ಸಂಪುಟ ಅಸ್ತು