ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಭಾರತ ದೇಶವು ಪರಂಪರಾನುಗತವಾಗಿ ಕೃಷಿ ಕ್ಷೇತ್ರವನ್ನು ತನ್ನ ಆರ್ಥಿಕತೆಯ ಬೆನ್ನೆಲುಬಾಗಿ ಕಾಪಾಡಿಕೊಂಡು ಬಂದಿದೆ. ಕೋಟ್ಯಂತರ ಸಂಖ್ಯೆಯ ಸಣ್ಣ ಸಣ್ಣ ರೈತರುಗಳು ಇಂದಿಗೂ ಸಹ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕ ದೇಶದ ಒತ್ತಡ ಹಾಗೂ ಹಿತಾಸಕ್ತಿಗೆ ಬಲಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದೇಶಗಳ ನಡುವಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕವೆಂದು ಹೇಳುತ್ತಲೇ ಭಾರತೀಯ ರೈತರುಗಳಿಗೆ ಮರಣ ಶಾಸನವನ್ನೇ ಬರೆದುಬಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತದ 145 ಕೋಟಿ ಜನಸಂಖ್ಯೆಯಲ್ಲಿ 85 ರಿಂದ 90 ಕೋಟಿ ಜನತೆ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಸಂಬಂಧಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ರೈತರು ಯಾವುದೇ ಯಾಂತ್ರಿಕೃತ ವ್ಯವಸ್ಥೆಗಳಿಲ್ಲದೆ ಕೃಷಿ ಬದುಕಿನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ತದ್ವಿರುದ್ಧವಾಗಿ ಅಮೆರಿಕಾ ದೇಶವು ಸಂಪೂರ್ಣ ಯಾಂತ್ರಿಕೃತ ವ್ಯವಸ್ಥೆಗಳಿಂದ ಲಕ್ಷಾಂತರ ಎಕರೆ ಭೂಪ್ರದೇಶಗಳಲ್ಲಿ ಲಕ್ಷಾಂತರ ಬೆಳೆಗಳನ್ನು ಬೆಳೆಯುತ್ತಾರೆ. ಮೋದಿ ಹಾಗೂ ಟ್ರಂಪ್ ನಡುವಿನ ಈ ವ್ಯಾಪಾರ ಒಪ್ಪಂದದಲ್ಲಿ ಯಾಂತ್ರಿಕೃತ ವ್ಯವಸ್ಥೆಯಿಂದ ಬೆಳೆದಿರುವ ಅಮೆರಿಕಾ ದೇಶದ ಲಕ್ಷಾಂತರ ಕೃಷಿ ಬೆಳೆಗಳನ್ನು ಭಾರತವು ಶೂನ್ಯ ಅಥವಾ ಕಡಿಮೆ ಸುಂಕದ ರೂಪದಲ್ಲಿ ಮಾರುಕಟ್ಟೆ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ರೈತರು ಕಂಗಾಲಾಗಿರುವ ಸಂಗತಿಯಾಗಿದೆ ಎಂದರು.ಅಂದಾಜು 45 ಲಕ್ಷ ಕೋಟಿಗು ಹೆಚ್ಚಿನ ಮೊತ್ತದ ಅಮೆರಿಕಾದ ಕೃಷಿ ಬೆಳೆಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿದೆ. ಭಾರತದ ಬಡ ರೈತರು ಬೆಳೆಯುತ್ತಿರುವ ಕೃಷಿ ಬೆಳೆಗಳನ್ನು ಅಮೆರಿಕ ದೇಶಕ್ಕೆ ರಫ್ತು ಮಾಡಬೇಕಿದ್ದಲ್ಲಿ ಶೇ.18 ಸುಂಕ ವೆಚ್ಚವನ್ನು ತೆರಬೇಕಿದೆ. ಇದುವೇ ಭಾರತೀಯ ರೈತರುಗಳಿಗೆ ಮೋದಿಯವರು ನೀಡುತ್ತಿರುವ ಗಲ್ಲು ಶಿಕ್ಷೆ . ಪ್ರಧಾನಿ ನರೇಂದ್ರ ಮೋದಿಯವರು ಯಾವುದೋ ಒತ್ತಡಕ್ಕೆ, ಬಾಹ್ಯ ಹಿತಾಸಕ್ತಿಗೆ ಮಣಿದು ದೇಶದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್, ಪಕ್ಷದ ಮುಖಂಡರುಗಳಾದ ಉಷಾ ಮೋಹನ್, ಅಶೋಕ್ ಮೃತ್ಯುಂಜಯ, ಶಶಿಧರ ಆರಾಧ್ಯ, ಡಾ.ದಿನೇಶ್, ಪುಟ್ಟಣ್ಣ ಗೌಡ,ಪುಷ್ಪ ಕೇಶವ್ ಸೇರಿಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.