ಇಂಡಿ : ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಎರಡು ವರ್ಷದ ಮಗುವೊಂದು ಆಟವಾಡುತ್ತ ಹಾಳುಬಿದ್ದ 260 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಮಗುವಿನ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಗ್ರಾಮದ ಸತೀಶ ಮುಜಗೊಂಡ ಎಂಬುವರ ಪುತ್ರ ಸಾತ್ವಿಕ (2) ಕೊಳವೆ ಬಾವಿಯಲ್ಲಿ ಬಿದ್ದ ಮಗು. ಮನೆಯ ಪಕ್ಕದಲ್ಲಿಯೇ ತೋಟವಿದ್ದು, ಸತೀಶಗೆ 2 ಎಕರೆ 23 ಗುಂಟೆ ಜಮೀನಿದೆ. ತೋಟದಲ್ಲಿ ಲಿಂಬೆ ಬೆಳೆ ಬೆಳೆಯಲಾಗಿದೆ. ಭೀಕರ ಬರಕ್ಕೆ ಲಿಂಬೆ ಬೆಳೆ ಒಣಗುತ್ತಿರುವುದನ್ನು ಕಂಡು ಮಂಗಳವಾರವಷ್ಟೇ ಬೋರ್‌ವೆಲ್ ಕೊರೆಸಲಾಗಿತ್ತು. 260 ಅಡಿ ಆಳ ಕೊರೆಸಲಾಗಿದೆ. ಆದರೆ, ಏರ್ ಪಾಸ್ ಆಗಿದ್ದರಿಂದ ನೀರು ಬಂದಿರಲಿಲ್ಲ. ಆದರೆ, ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದರು.
ಬುಧವಾರ ಮನೆಯ ಮುಂದೆ ಆಟವಾಡುತ್ತಿದ್ದ ಮಗು ಕಾಲು ಜಾರಿ ಕೊಳವೆ ಬಾವಿಯಲ್ಲಿ ಬಿದ್ದಿದೆ. ಬಹಳ ಹೊತ್ತಾದರೂ ಮಗು ಕಾಣದಿದ್ದಾಗ ಮನೆಯವರು ಎಲ್ಲ ಕಡೆ ಹುಡುಕಲು ಆರಂಭಿಸಿದರು. ಆಗ ಮಗು ಕೊಳವೆ ಬಾವಿಯಲ್ಲಿ ಅಳುವ ಶಬ್ಧ ಕೇಳಿ ಬಂತು. ಆತಂಕಗೊಂಡ ಕುಟುಂಬಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ, ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಮಗುವಿನ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕೂಡ ಬೀಡು ಬಿಟ್ಟಿದ್ದು, ಕೊಳವೆ ಬಾವಿಯ ಮೂಲಕ ಮಗುವಿಗೆ ಆಕ್ಸಿಜನ್ ನೀಡುವ ಕಾರ್ಯ ನಡೆಸಿದ್ದಾರೆ. ಕ್ಯಾಮರಾ ಇಳಿ ಬಿಟ್ಟು, ಮಗುವಿನ ಚಲನವಲನ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಮಗು 16 ಅಡಿ ಆಳದಲ್ಲಿದ್ದು, ಇನ್ನಷ್ಟು ಕೆಳಗೆ ಇಳಿಯದಂತೆ ಹುಕ್ ಹಾಕಿ ನಿಲ್ಲಿಸಲಾಗಿದೆ. ಜೆಸಿಬಿ ಬಳಸಿ ಈಗಾಗಲೇ 10 ಅಡಿ ಆಳ ಕೊರೆಯಲಾಗಿದ್ದು, ಮಗುವನ್ನು ತಲುಪಲು ಇನ್ನೂ 6 ಅಡಿ ಬಾಕಿ ಇದೆ. ಮಣ್ಣು ಮೆತ್ತಗೆ ಇರುವುದರಿಂದ ಬೇಗ ಮಗುವಿನ ಸ್ಥಳ ತಲುಪಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗನನ್ನು ಉಳಿಸಿಕೊಡಿ ಎಂದು ಮಗುವಿನ ತಂದೆ, ತಾಯಿ ಹಾಗೂ ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿದೆ.