ಸುಹಾಸ್‌ ಹತ್ಯೆಯಲ್ಲಿ 20 ಜನ ಶಾಮೀಲು

KannadaprabhaNewsNetwork | Updated : May 05 2025, 08:55 AM IST

ಸಾರಾಂಶ

 ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 20ಕ್ಕೂ ಅಧಿಕ ಮಂದಿ ಶಾಮೀಲು ಆಗಿರುವ ಮಾಹಿತಿ ಹಿನ್ನೆಲೆಯಲ್ಲಿ   30ಕ್ಕೂ ಅಧಿಕ ಮಂದಿಯ ವಿಚಾರಣೆ  

  ಮಂಗಳೂರು : ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 20ಕ್ಕೂ ಅಧಿಕ ಮಂದಿ ಶಾಮೀಲು ಆಗಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು 30ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸುತ್ತಿದ್ದಾರೆ.

ಬಜಪೆ ಪರಿಸರದಲ್ಲಿ ಆರೋಪಿಗಳಿಗೆ ಸ್ಥಳೀಯರು ನೆರವು ನೀಡಿರುವ ಶಂಕೆ ಇದ್ದು, ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸಂದರ್ಭದ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ವಿಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದು, ಅವುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸುಹಾಸ್‌ ಅಲ್ಲಿಗೆ ಆಗಮಿಸಿದ ವೇಳೆ ಅಲ್ಲಿ ಆತನ ಕಾರನ್ನು ಅಡ್ಡಗಟ್ಟುವ ಯೋಜನೆ ಸ್ಥಳೀಯರದ್ದೇ ಎಂಬುದು ಪೊಲೀಸರ ತರ್ಕ.

ಈ ಮಧ್ಯೆ, 3 ತಿಂಗಳ ಹಿಂದೆಯೇ ಸುಹಾಸ್‌ ಹತ್ಯೆಗೆ ಹೊಂಚು ಹಾಕಲಾಗಿತ್ತು. ಸುರತ್ಕಲ್‌ನಲ್ಲಿ ಹತ್ಯೆಗೆ ಒಳಗಾದ ಫಾಜಿಲ್‌ನ ಸಹೋದರ ಆದಿಲ್‌, ಜನವರಿಯಲ್ಲೇ ಸಫ್ವಾನ್ ತಂಡಕ್ಕೆ 3 ಲಕ್ಷ ರು. ಸುಪಾರಿ ಮೊತ್ತ ನೀಡಿದ್ದ ಎಂಬುದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿದೆ.ಶರಣ್ ಪಂಪ್‌ವೆಲ್‌, ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ: ಸುಹಾಸ್‌ ಹತ್ಯೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಮುಖಂಡರಿಗೆ ಬೆದರಿಕೆಯ ಮೇಸೆಜ್‌ಗಳು ಹರಿದಾಡುತ್ತಿವೆ. ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ ಹಾಗೂ ಬಜರಂಗದಳದ ಮುಖಂಡ ಭರತ್‌ ಕುಮ್ಡೇಲ್‌ಗೆ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ‘ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್‌.. ಶರಣ್ ಹತ್ಯೆಯಾಗಲು ತಯಾರಾಗು’ ಎಂದು ಬೆದರಿಕೆ ಹಾಕಲಾಗಿದೆ. 2017ರ ಜೂ. 21ರಂದು ಹತ್ಯೆಯಾದ ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಆರೋಪಿ, ಭರತ್ ಕುಮ್ಡೆಲ್‌ ಬಗ್ಗೆ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ.

ಅಲ್ಲದೆ, ಬಶೀರ್ ಕೊಲೆ ಆರೋಪಿ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜು ವಿರುದ್ಧವೂ ಮೆಸೇಜ್‌ಗಳು ಹರಿದಾಡುತ್ತಿವೆ. ‘ಶ್ರೀಜು ನೆಕ್ಸ್ಟ್ ಟಾರ್ಗೆಟ್’ ಎಂದು ಕಿಲ್ಲರ್ಸ್‌ ಟಾರ್ಗೆಟ್‌ ಹೆಸರಿನ ಪೇಜ್‌ನಿಂದ ಪೋಸ್ಟ್ ಆಗಿದೆ. ಜೊತೆಗೆ, ಭಾನುವಾರ ಮತ್ತೆ ಕಿಡಿಗೇಡಿಗಳು ವೈಯಕ್ತಿಕವಾಗಿ ಅವರಿಗೆ ಮೆಸೇಜ್ ಕಳಿಸಿದ್ದಾರೆ. 2018ರ ಜನವರಿಯಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತೀಕಾರಕ್ಕೆ ಬಶೀರ್‌ ಹತ್ಯೆಯಾಗಿತ್ತು.

ಅಲ್ಲದೆ, ಎಸ್‌ಡಿಪಿಐ ಮುಖಂಡರಾದ ರಿಯಾಜ್ ಫರಂಗಿಪೇಟೆ, ರಿಯಾಜ್ ಕಡಂಬು, ಶಾಫಿ ಬೆಳ್ಳಾರೆಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ನೆಕ್ಸ್ಟ್ ಹಿಟ್ ಲಿಸ್ಟ್ ಎಂದು ಪೋಸ್ಟ್ ಮಾಡಲಾಗಿದೆ. ಯೂಟ್ಯೂಬ್ ವಿಡಿಯೋ ಒಂದರಲ್ಲಿ ಕೊಲೆ ಬೆದರಿಕೆಯ ಪೋಸ್ಟ್ ಮಾಡಲಾಗಿದೆ.

Share this article