2000 ಬಿಪಿಎಲ್‌ ಕಾರ್ಡ್‌ ತಾತ್ಕಾಲಿಕ ಅಮಾನತು!

KannadaprabhaNewsNetwork | Published : Nov 21, 2024 1:02 AM

ಸಾರಾಂಶ

ಬಿಪಿಎಲ್‌ ಕಾರ್ಡ್‌ದಾರರು ಮಾತ್ರ ತಮ್ಮ ಕಾರ್ಡ್‌ಗಳು ರದ್ದಾಗಿವೆ. ಅಧಿಕಾರಿ ವರ್ಗ ಸುಳ್ಳು ಹೇಳುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಬಿಪಿಎಲ್‌ ಕಾರ್ಡ್‌ ಗೊಂದಲ ಜಿಲ್ಲೆಯ ಫಲಾನುಭವಿಗಳಲ್ಲೂ ಶಾಕ್‌ ನೀಡಿದ್ದು, ತಳಮಳ ಶುರುವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಯಾವ ಬಿಪಿಎಲ್‌ ಕಾರ್ಡ್‌ ರದ್ದಿಲ್ಲ.. ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ ಶೋಕಾಸ್‌ ನೋಟಿಸ್‌; 48 ಸರ್ಕಾರಿ ನೌಕರರು ಪಡೆದಿದ್ದ ಬಿಪಿಎಲ್‌ ಕಾರ್ಡ್‌ ಎಪಿಎಲ್‌ ಕಾರ್ಡ್‌ಗಳನ್ನಾಗಿ ಮಾರ್ಪಾಡು.., 2000 ಬಿಪಿಎಲ್‌ ಕಾರ್ಡ್‌ ತಾತ್ಕಾಲಿಕ ಅಮಾನತು..!

ಧಾರವಾಡ ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಶಾಕ್‌ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಒಂದು ಸಾಲಿನ ವಿವರಣೆ ಇದು. ಜತೆಗೆ ಜಿಲ್ಲೆಯಲ್ಲಿ ಯಾವ ಕಾರ್ಡ್‌ಗಳನ್ನು ರದ್ದುಪಡಿಸಿಲ್ಲ ಎಂದು ಇಲಾಖೆ ವಿವರಿಸುತ್ತದೆ.

ಆದರೆ, ಬಿಪಿಎಲ್‌ ಕಾರ್ಡ್‌ದಾರರು ಮಾತ್ರ ತಮ್ಮ ಕಾರ್ಡ್‌ಗಳು ರದ್ದಾಗಿವೆ. ಅಧಿಕಾರಿ ವರ್ಗ ಸುಳ್ಳು ಹೇಳುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಬಿಪಿಎಲ್‌ ಕಾರ್ಡ್‌ ಗೊಂದಲ ಜಿಲ್ಲೆಯ ಫಲಾನುಭವಿಗಳಲ್ಲೂ ಶಾಕ್‌ ನೀಡಿದ್ದು, ತಳಮಳ ಶುರುವಾಗಿದೆ. ತಹಸೀಲ್ದಾರ್‌ ಕಚೇರಿ, ಆಹಾರ ಇಲಾಖೆ ಕಚೇರಿ, ನ್ಯಾಯಬೆಲೆ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ಗಳು ಎಷ್ಟು ರದ್ದಾಗಿವೆ? ಕಾರಣವೇನು? ಎಂಬುದನ್ನು ಅವಲೋಕಿಸಿದಾಗ ಇಲಾಖೆ ಅಧಿಕಾರಿ ವರ್ಗ ಹೇಳೋದೇ ಬೇರೆ. ಆದರೆ, ಫಲಾನುಭವಿಗಳು ತಮ್ಮ ಅನುಭವ ಹಂಚಿಕೊಳ್ಳುತ್ತಿರುವುದೇ ಬೇರೆ ಎಂಬುದು ಬೆಳಕಿಗೆ ಬರುತ್ತದೆ.

ರದ್ದಾಗಿಲ್ಲ:

ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 4,84,584 ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. 29,552 ಎಪಿಎಲ್‌ ಕಾರ್ಡ್‌ದಾರರಿದ್ದಾರೆ. 48 ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಪಡೆದಿದ್ದರು. ಅಂಥವುಗಳನ್ನು ಪತ್ತೆ ಹಚ್ಚಿ ಎಪಿಎಲ್‌ ಕಾರ್ಡ್‌ಗಳನ್ನಾಗಿ ಮಾರ್ಪಾಡು ಮಾಡಲಾಗಿದೆಯೇ ಹೊರತು ರದ್ದುಪಡಿಸಿಲ್ಲ. ಆದರೆ, ಬರೋಬ್ಬರಿ 2000 ಬಿಪಿಎಲ್‌ ಕಾರ್ಡ್‌ದಾರರು ಕಳೆದ ಐದಾರು ತಿಂಗಳಿಂದ ಪಡಿತರ ಪಡೆದಿರಲಿಲ್ಲ. ಹೀಗಾಗಿ ಅವುಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಇನ್ನುಳಿದಂತೆ ಬಿಪಿಎಲ್‌ ಕಾರ್ಡ್‌ ಪಡೆದಿರುವ 4.84 ಲಕ್ಷ ಜನರಿಗೂ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಐಟಿ, ಜಿಎಸ್‌ಟಿ ಏನಾದರೂ ಪಾವತಿಸುತ್ತಿದ್ದಾರೆಯೇ ಎಂಬುದನ್ನು ಪ್ರಶ್ನಿಸಿ ನೋಟಿಸ್‌ ನೀಡಲಾಗಿದೆ. ಆದರೆ, ಯಾರೊಬ್ಬರು ಉತ್ತರ ಕೊಟ್ಟಿಲ್ಲ. ಉತ್ತರ ಕೊಟ್ಟ ಬಳಿಕ ಪರಿಶೀಲಿಸಿ ಬಿಪಿಎಲ್‌ ಇದ್ದಂತಹ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗುವುದು. ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾರ್ಡ್‌ಗಳನ್ನೇ ರದ್ದು ಎಂದು ಹೇಳುತ್ತಿದ್ದಾರೆ ಅಷ್ಟೇ ಎಂಬುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಗಳು ತಿಳಿಸುತ್ತವೆ.

ನಮದು ರದ್ದಾಗಿದೆ ಏನ್ಮಾಡೋಣ:

ಈ ನಡುವೆ ಜಿಲ್ಲೆಯಲ್ಲಿ ಸಾವಿರಾರು ಕಾರ್ಡ್‌ಗಳು ರದ್ದಾಗಿವೆ. ಕಳೆದ 20-25 ವರ್ಷಗಳಿಂದ ಬಿಪಿಎಲ್‌ ಕಾರ್ಡ್‌ ಮೂಲಕವೇ ರೇಷನ್‌ ಪಡೆಯುತ್ತಿದ್ದೇವು. ಕಳೆದ ತಿಂಗಳು ಕೂಡ ರೇಷನ್‌ ಪಡೆದಿದ್ದೇವೆ. ಆದರೆ, ಈಗ ನಿಮ್ಮ ಕಾರ್ಡ್‌ ರದ್ದಾಗಿದೆ. ರೇಷನ್‌ ಕೊಡಲ್ಲ ಎಂದು ಹೇಳುತ್ತಿದ್ದಾರೆ. ನಾನು ದಿನಕ್ಕೆ ₹ 500 ರಂತೆ ದುಡಿಯಲು ಹೋಗುತ್ತೇನೆ. ರೇಷನ್‌ ಮೇಲೆಯೇ ನಮ್ಮ ಜೀವನ. ನಾವು ತೆರಿಗೆನೂ ಪಾವತಿಸುತ್ತಿಲ್ಲ. ಕಾರು ಒತ್ತಟ್ಟಿಗಿರಲಿ, ಬೈಕ್‌ ಕೂಡ ನಮ್ಮ ಬಳಿ ಇಲ್ಲ ಎಂದು ಶ್ರೀಧರ ಕುಲಕರ್ಣಿ ಕಣ್ಣೀರು ಸುರಿಸುತ್ತಾರೆ. ಇದು ಇವರೊಬ್ಬರ ಕಥೆಯಲ್ಲ. ಇದೇ ರೀತಿ ಹಲವರು ತಮ್ಮ ಬಿಪಿಎಲ್‌ ಕಾರ್ಡ್‌ ರದ್ದಾಗಿವೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ.

ಒಟ್ಟಿನಲ್ಲಿ ಬಿಪಿಎಲ್ ಕಾರ್ಡ್‌ ವಿಷಯವಾಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿರುವುದಂತೂ ಸತ್ಯ. ಕೂಡಲೇ ಸರ್ಕಾರ ಅಧಿಕಾರಿಗಳ ಮೂಲಕ ಗೊಂದಲ ನಿವಾರಿಸಬೇಕು. ಜತೆಗೆ ಅನರ್ಹರಿದ್ದರೆ ಅವರ ಪಡಿತರ ಚೀಟಿ ರದ್ದುಪಡಿಸಲಿ. ಆದರೆ ಅರ್ಹರ ಕಾರ್ಡ್‌ ರದ್ದುಪಡಿಸಬಾರದು. ಬಡವರ ಹೊಟ್ಟೆಯ ಮೇಲೆ ಹೊಡೆಯದಂತೆ ನೋಡಿಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

ಯಾವ ಕಾರ್ಡ್‌ ರದ್ದುಪಡಿಸಿಲ್ಲ. ಎಲ್ಲರಿಗೂ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಆದರೆ, 48 ಜನ ಸರ್ಕಾರಿ ನೌಕರರ ಕಾರ್ಡ್‌ಗಳನ್ನು ಎಪಿಎಲ್‌ಗಳನ್ನಾಗಿ ಮಾರ್ಪಡಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಪಡಿತರ ಪಡೆಯದ 2000 ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಅಷ್ಟೇ. ಅವರು ಮತ್ತೆ ಬಂದು ಸರಿಪಡಿಸಿಕೊಂಡರೆ ಮತ್ತೆ ಕಾರ್ಡ್‌ ಕೊಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸಿ.ವಿ. ಕೊಡ್ಲಿ ಹೇಳಿದರು.

ನಮ್ಮ ಕುಟುಂಬ 20 ವರ್ಷದಿಂದ ಬಿಪಿಎಲ್‌ ಕಾರ್ಡ್‌ ಹೊಂದಿತ್ತು. ವಾರದ ಪಗಾರದ ಮೇಲೆ ದುಡಿಮೆ ಮಾಡುವವನು ನಾನು. ಕಳೆದ ತಿಂಗಳು ಕೂಡ ರೇಷನ್‌ ತೆಗೆದುಕೊಂಡಿದ್ದೇವೆ. ಈ ತಿಂಗಳು ರದ್ದಾಗಿದೆ. ಜಿಎಸ್‌ಟಿ ತುಂಬಿದ್ದೀರಿ ಎಂದು ಅಧಿಕಾರಿ ವರ್ಗ ತಿಳಿಸುತ್ತಿದೆ. ಆದರೆ ನಾನು ಆದಾಯ ತೆರಿಗೆ ಪಾವತಿಸಲ್ಲ. ಜಿಎಸ್‌ಟಿ ಎಲ್ಲಿಂದ ಪಾವತಿಸಲಿ ಎಂದು ಬಿಪಿಎಲ್‌ ಕಾರ್ಡ್‌ ರದ್ದಾಗಿರುವ ವ್ಯಕ್ತಿ ಶ್ರೀಧರ ಕುಲಕರ್ಣಿ ಹೇಳಿದರು.

Share this article