ರೋಣ: ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಅವರ 78ನೇ ಹುಟ್ಟುಹಬ್ಬ ಅಂಗವಾಗಿ ಏ.10 ರಂದು ರೋಣ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಕಚೇರಿ, ಶಾಲಾ, ಕಾಲೇಜು ಆವರಣದಲ್ಲಿ 2 ಸಾವಿರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೇವಾ ಕಾರ್ಯಕ್ರಮಗಳು: ಅಂದು ರೋಣ, ನರೇಗಲ್ಲ, ಗಜೇಂದ್ರಗಡ ಸೇರಿದಂತೆ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ರೋಗಿಗಳಿಗೆ ಹಾಲು, ಹಣ್ಣು, ಹಂಪಲ ವಿತರಣೆ ಮಾಡಲಾಗುವುದು. ರೋಣ ಪಟ್ಟಣದಲ್ಲಿರುವ ಬಿ.ಡಿ. ತಟ್ಟಿ ವಿಶೇಷ ಚೇತನ ಮಕ್ಕಳ ಪುನಶ್ಚೇತನ ತರಬೇತಿ ಶಾಲಾ ಮಕ್ಕಳಿಗೆ ಹಣ್ಣು, ಹಂಪಲ ಹಾಗೂ ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ವಿತರಣೆ ಮಾಡಲಾಗುವುದು. ಸೂಡಿ, ಜಕ್ಕಲಿ, ನಿಡಗುಂದಿ ಗ್ರಾಮಗಳು ಹಾಗೂ ರೋಣ ಪಟ್ಟಣದಲ್ಲಿ ಜಿ.ಎಸ್.ಪಾಟೀಲ ಅಭಿಮಾನಿಗಳ ಬಳಗದಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುವುದು. ಗದಗ ನಗರದ ಸುರಭಿ ಅನಾಥಾಶ್ರಮದಲ್ಲಿ ಇರುವವರಿಗೆ ಒಂದು ದಿನದ ಐತಿಹಾಸಿಕ ತಾಣ, ಬಿಂಕದಕಟ್ಟಿ ಪ್ರಾಣಿಸಂಗ್ರಾಲಯ ಭೇಟಿ ಪ್ರವಾಸ ಹಮ್ಮಿಕೊಳ್ಳಲಾಗುವದು. ಇದರ ಜೊತೆಗೆ ಇನ್ನು ಹಲವಾರು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು.
ಶಾಸಕ ಜಿ.ಎಸ್. ಪಾಟೀಲ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಅಭಿಮಾನಿಗಳಿಗೆ ರೋಣ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶರಣಪ್ಪ ಬೇಟಗೇರಿ ಮಾತನಾಡಿದರು. ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.