ದೇಶದ ಗಡಿ ಬಗ್ಗೆ ಸಚಿವ ಸಂತೋಷ ಲಾಡ್ ವಿಚಾರ ಮಾಡಿ ಮಾತನಾಡಬೇಕು. ಈ ವಿಚಾರದಲ್ಲಿ ನಮ್ಮನ್ನು, ನಮ್ಮ ಸರ್ಕಾರ ನಂಬದೇ ಇದ್ದರೂ ಸೈನ್ಯವನ್ನು ನಂಬಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಧಾರವಾಡ: ದೇಶದ ಗಡಿ ಬಗ್ಗೆ ಸಚಿವ ಸಂತೋಷ ಲಾಡ್ ವಿಚಾರ ಮಾಡಿ ಮಾತನಾಡಬೇಕು. ಈ ವಿಚಾರದಲ್ಲಿ ನಮ್ಮನ್ನು, ನಮ್ಮ ಸರ್ಕಾರ ನಂಬದೇ ಇದ್ದರೂ ಸೈನ್ಯವನ್ನು ನಂಬಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿವಿಮಾತು.
ಚೀನಾ ಭಾರತದ ಗಡಿಯೊಳಗೆ ನುಸುಳಿದೆ ಎಂದು ಸಚಿವ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಲಾಡ್ ಅವರು ಹೇಳಿಕೆ ನೀಡುವಾಗ ವಿಚಾರ ಮಾಡಬೇಕು. ಇಲ್ಲದೇ ಇದ್ದಲ್ಲಿ ಮಾತನಾಡಿದ ಮೇಲಾದರೂ ವಿಚಾರ ಮಾಡಬೇಕು. ಆದರೆ, ಅವರು ವಿಚಾರ ಮಾಡದೇ ಮಾತನಾಡುತ್ತಿದ್ದಾರೆ. ಈ ಹಿಂದೆ ಟಿಬೆಟ್ ಆಕ್ರಮಣಕ್ಕೆ ಚೀನಾ ನಿಂತಾಗ ಭಾರತದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಏನೂ ಮಾಡಲಿಲ್ಲ. ಅವತ್ತಿನ ಸಂದರ್ಭದಲ್ಲಿ 34 ಸಾವಿರ ಚದರ ಕಿಲೋಮೀಟರ್ ಭೂಮಿ ನುಂಗಲಾಗಿದೆ. ಆದರೆ, ಈಗ ನಾವು ಒಂದಿಂಚು ಭೂಮಿ ಬಿಡುವುದಿಲ್ಲ. ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಇವತ್ತಿನದು 1960ರ ಭಾರತ ಅಲ್ಲ, 21ನೇ ಶತಮಾನದ ಮೋದಿ ಭಾರತ. ಕಾಂಗ್ರೆಸ್ ಕಾಲದಲ್ಲಿ ಸೈನಿಕರಿಗೆ ಹಾಕಿಕೊಳ್ಳಲು ಬೂಟು ಇರಲಿಲ್ಲ. ಚಳಿಯಲ್ಲಿ ಹಾಕಿಕೊಳ್ಳುವ ಕನ್ನಡಕ ಇರಲಿಲ್ಲ. ಅತ್ಯಂತ ಹೀನಾಯವಾಗಿ ಚೀನಾ ಯುದ್ಧದಲ್ಲಿ ಭಾರತದ ಸೈನಿಕರು ಮೃತರಾದರು. ಈ ಬಗ್ಗೆ ಲಾಡ್ ಮಾತನಾಡಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಅದರಲ್ಲೂ ವರ್ಗಾವಣೆ ಹರಾಜು ನಡೆಯುತ್ತಿದೆ. ₹10 ಲಕ್ಷಕ್ಕಿಂತ ಹೆಚ್ಚು ಯಾರು ಕೊಡುತ್ತಾರೆಯೋ ಅವರಿಗೆ ಪೋಸ್ಟಿಂಗ್ ದೊರೆಯುತ್ತಿದೆ. ಉಳಿದ ವಿಷಯಗಳ ಬಗ್ಗೆ ಗೃಹ ಸಚಿವರು ಗಮನ ಕೊಡುತ್ತಿಲ್ಲ. ಇದು ಸರ್ಕಾರದ ವೈಫಲ್ಯ ತೋರಿಸುತ್ತಿದೆ ಎಂದು ಜೋಶಿ ಟೀಕಿಸಿದರು.
ಅಮೆರಿಕದ ಹೊಸ ನೀತಿಯಿಂದ ಭಾರತಕ್ಕೆ ಏನು ಪರಿಣಾಮ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೋಶಿ, ಇದರ ಅಧ್ಯಯನ ಕೇಂದ್ರದ ವಾಣಿಜ್ಯ ಮಂತ್ರಾಲಯ ಮಾಡುತ್ತಿದ್ದಾರೆ. ಭಾರತವು ಅಮೆರಿಕದ ಜತೆ ಮಾತುಕತೆ ಸಹ ಮಾಡುತ್ತಿದೆ. ಎರಡು ದೇಶಗಳ ಉದ್ಯಮಿಗಳಿಗೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂಬ ಚಿಂತನೆ ನಡೆದಿದೆ ಎಂದರು.ಮೊಟ್ಟೆ ಕೊಡುತ್ತಿದ್ದೇವೆ: ಬಿಜೆಪಿ ಅಧಿಕಾರ ಇರುವ ರಾಜ್ಯದಲ್ಲಿ ಮೊಟ್ಟೆ ಕೊಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಒಡಿಶಾದಲ್ಲಿ ಬಿಜೆಪಿ ಸರ್ಕಾರ ಇದ್ದು, ಅಲ್ಲಿ ಮೊಟ್ಟೆ ಕೊಡುತ್ತಿದ್ದೇವೆ. ಎನ್‌ಡಿಎ ಸರ್ಕಾರ ಇರುವ ಆಂಧ್ರದಲ್ಲೂ ಕೊಡುತ್ತಿದ್ದೇವೆ. ಸ್ವಲ್ಪ ಜ್ಞಾನ ಹಾಗೂ ಮಾಹಿತಿ ಇಟ್ಟುಕೊಂಡು ಮುಖ್ಯಮಂತ್ರಿ ಸರಿಯಾಗಿ ಮಾತನಾಡಬೇಕು ಎಂದು ಜೋಶಿ ಹೇಳಿದರು.