ತಾಲೂಕಿನ ಪುಣ್ಯ ಕ್ಷೇತ್ರ ಉಳವಿಯ ಶ್ರೀ ಚನ್ನಬಸವಣ್ಣನವರ ವಾರ್ಷಿಕ ಜಾತ್ರೆಯ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಜೋಯಿಡಾ
ತಾಲೂಕಿನ ಪುಣ್ಯ ಕ್ಷೇತ್ರ ಉಳವಿಯ ಶ್ರೀ ಚನ್ನಬಸವಣ್ಣನವರ ವಾರ್ಷಿಕ ಜಾತ್ರೆಯ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ಮಧ್ಯಾಹ್ನ 4 ಗಂಟೆಗೆ ಮಹಾರಥೋತ್ಸವ ನಡೆದು ಲಕ್ಷಾಂತರ ಜನರ ಜಯ ಘೋಷ ಮುಗಿಲು ಮುಟ್ಟುವಂತಿತ್ತು.
ಜ. 25ರ ರಥ ಸಪ್ತಮಿಯಿಂದ ಉಳವಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಇನ್ನೂ ಎರಡು ದಿನಗಳ ಕಾಲ ಜಾತ್ರೆಯ ವಿವಿಧ ಧಾರ್ಮಿಕ ಕಾರ್ಯಗಳು ನಡೆದು ನಂತರ ಜಾತ್ರೆ ಸಂಪನ್ನಗೊಳ್ಳಲಿದೆ. ಅಡಕೇಶ್ವರ, ಮಡಕೇಶ್ವರ, ಉಳವಿ ಚನ್ನಬಸವೇಶ್ವರ, ಹರ ಹರ ಮಹಾದೇವ ಎನ್ನುತ್ತಾ ಭಕ್ತರು ರಥ ಎಳೆದರು.ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೈಲಹೊಂಗಲ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದಲೂ ಲಕ್ಷಾಂತರ ಜನರು ಭಾಗವಹಿಸಿದ್ದರು. ಚಕ್ಕಡಿ, ಟ್ರ್ಯಾಕ್ಟರ್, ಟೆಂಪೋ, ಬಸ್ ಸೇರಿದಂತೆ ವಿವಿಧ ವಾಹನಗಳಿಂದ ಉಳವಿ ತುಂಬಿತ್ತು. ಉತ್ತರ ಕರ್ನಾಟಕ ಭಾಗದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ನೂರಾರು ಕಿಲೋ ಮೀಟರ್ ನಡೆದು ಬಂದಿದ್ದರು. ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳೂ ಕೂಡ ನಡೆದು ಬಂದು ಪಾಲ್ಗೊಂಡಿದ್ದು ವಿಶೇಷ.
ಉಳವಿಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಂಜಯ ಕಿತ್ತೂರ, ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಸದಸ್ಯ ರಾದ ಗಂಗಾಧರ ಕಿತ್ತೂರ, ವೀರೇಶ ಕಂಬಳಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ, ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್. ಮತ್ತು ಅನೇಕ ಗಣ್ಯರು ಇಂದಿನ ರಥ ಪೂಜೆಯಲ್ಲಿ ಭಾಗವಹಿಸಿ ರಥಕ್ಕೆ ಚಾಲನೆ ನೀಡಿದರು.ಜಿಲ್ಲಾಧಿಕಾರಿ ಭೇಟಿ:
ಜಾತ್ರೆಯ ಶುಭ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ನಂತರ ಅವರನ್ನು ದೇವಸ್ಥಾನದಿಂದ ಗೌರವಿಸಲಾಯಿತು. ಬಳಿಕ ರಥ ಬೀದಿಯಲ್ಲಿ ಜಾತ್ರಾ ಸಿದ್ಧತೆ ಪರಿಶೀಲಿಸಿದರು.ಉತ್ತಮ ವ್ಯವಸ್ಥೆ:
ಲಕ್ಷಾಂತರ ಜನರು ಸೇರಿದ ಜಾತ್ರೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಆರೋಗ್ಯ ವ್ಯವಸ್ಥೆ ಮತ್ತು ಭದ್ರತಾ ವ್ಯವಸ್ಥೆ ಉತ್ತಮವಾಗಿತ್ತು. ಸ್ಥಳೀಯ ಸಿಪಿಐ ಚಂದ್ರಶೇಖರ್ ಹರಿಹರ, ಪಿಎಸ್ಐ ಮಹೇಶ ಮಾಳಿ, ಮಹಿಳಾ ಪಿಎಸ್ಐ ಮಾದೇವಿ ನೈಕೋಡಿ ಸೇರಿದಂತೆ 26 ಪಿಎಸ್ಐ, 300 ಪೊಲೀಸರು, 200 ಹೋಮ್ ಗಾರ್ಡ್ ಗಳು, 150 ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸಿದರು.ದಾಸೋಹ:
ಉಳವಿ ಜಾತ್ರೆಗೆ ಬರುವವರಿಗೆ ಈ ವರ್ಷ ದಾರಿಯ ಮಧ್ಯೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅಲ್ಲಲ್ಲಿ ಅನ್ನ ದಾಸೋಹ ಮಾಡಲಾಗಿತ್ತು. ಇದರಿಂದ ಪಾದಯಾತ್ರೆ ಮೂಲಕ ಬರುವವರು, ಚಕ್ಕಡಿಯಲ್ಲಿ ಬರುವವರಿಗೆ ತುಂಬಾ ಅನುಕೂಲವಾಯಿತು.