ರಾಗಿ ಖರೀದಿ ಅವ್ಯವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಕಿಡಿ

KannadaprabhaNewsNetwork |  
Published : Apr 08, 2025, 12:35 AM IST
ದೊಡ್ಡಬಳ್ಳಾಪುರದಲ್ಲಿ ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್‌ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಹೆಜ್ಜೆ ಹೆಜ್ಜೆಗೂ ರೈತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸುಮಟೋ ಕೇಸ್ ದಾಖಲು ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಖಂಡಿತ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನಲ್ಲಿ ಬೆಂಬಲ ಬೆಲೆ ರಾಗಿ ಖರೀದಿ ಪ್ರಕ್ರಿಯೆಯಲ್ಲಿನ ಅವ್ಯವಸ್ಥೆಗಳ ಕುರಿತು ರೈತರ ದೂರು ಹಿನ್ನೆಲೆ ಉಪ ಲೋಕಾಯುಕ್ತ ಬಿ.ವೀರಪ್ಪ ಸೋಮವಾರ ಇಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರ, ಅಳತೆ ಮಾಪನ ಕೇಂದ್ರ ಹಾಗೂ ಉಗ್ರಾಣಗಳಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆ ಆಲಿಸಿದರು.

ಈ ವೇಳೆ ರಾಗಿ ಖರೀದಿ ಕೇಂದ್ರದ ಬಳಿ ಇದ್ದ ರೈತರು, ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ, ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೆ ಇರುವುದು, ಶೌಚಾಲಯದ ಅವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಪಲೋಕಾಯುಕ್ತರ ಗಮನಕ್ಕೆ ತಂದರು. ನೋಂದಣಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೂ ಶೌಚಾಲಯದ ಸಮಸ್ಯೆ ತಿಳಿದು ಸಿಡಿಮಿಡಿಗೊಂಡ ಉಪಲೋಕಾಯುಕ್ತ ಬಿ.ವೀರಪ್ಪ, ಉಪವಿಭಾಗಾಧಿಕಾರಿ ದುರ್ಗಾಶ್ರೀ ಮತ್ತು ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾವು ಹೆಣ್ಣು ಮಕ್ಕಳಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣು ಮಕ್ಕಳ ಸಮಸ್ಯೆ ತಮಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಖರೀದಿ ಕೇಂದ್ರದ ಅಧಿಕಾರಿಗಳು ನೌಕರರಿಗೆ ವೇತನ ನೀಡಿಲ್ಲ, ಸಂಬಳ ಬಂದಿಲ್ಲ ಅಂದ್ರೆ ಅವರು ಏನು ಮಾಡಬೇಕು? ಇವರನ್ನು ಯಾವ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದೀರಿ ಎಂಬುದರ ಬಗ್ಗೆ ಕೂಡಲೇ ವರದಿ ನೀಡಿ ಎಂದು ಆದೇಶಿಸಿದರು.

ಅವ್ಯವಸ್ಥೆಗಳ ಆಗರ; ಉಪಲೋಕಾಯುಕ್ತ ಬೇಸರ

ರೈತರ ಅನುಕೂಲಕ್ಕಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗಾಗಿ ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಆವರಣದಲ್ಲಿ ಪ್ರಾರಂಭಿಸಿರುವ ನೋಂದಣಿ ಕೇಂದ್ರ ಅವ್ಯವಸ್ಥೆಗಳಿಂದ ತುಂಬಿ ತುಳುಕುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ತೂಕದಲ್ಲಿ ಮೋಸ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಪರದಾಡುತ್ತಿದ್ದಾರೆ. ರಾಗಿ ಖರೀದಿಗಾಗಿ ತೆರೆದಿರುವ ನೋಂದಣಿ ಕೇಂದ್ರದಲ್ಲಿ ನೋಂದಣಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲ ರೈತರು ಆಗಮಿಸುತ್ತಿದ್ದಾರೆ. ಇವರಿಗೆ ಸ್ಥಳದಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಲ್ಲ. ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಿಲ್ಲ, ರೈತರನ್ನು ಕಾಯಿಸದೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಿಲ್ಲ, ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ವಯ ರಾಗಿಯನ್ನು ಖರೀದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ಬೇಜವಾಬ್ದಾರಿ: ದಲ್ಲಾಳಿಗಳ ಹಾವಳಿ

ಅಧಿಕಾರಿಗಳ ಬೇಜವಾಬ್ದಾರಿ, ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಮೋಸವಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿ ಕಡೆಗೆ ಅದಕ್ಕೂ ನಮಗೂ ಯಾವ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹೆಜ್ಜೆ ಹೆಜ್ಜೆಗೂ ರೈತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸುಮಟೋ ಕೇಸ್ ದಾಖಲು ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಖಂಡಿತ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕೂಡಲೇ ವ್ಯವಸ್ಥೆ ಕಲ್ಪಿಸಿ:

ಸ್ಥಳದಲ್ಲಿ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಪುರುಷ, ಮಹಿಳೆ, ವಿಕಲ ಚೇತನರಿಗೆ ಪ್ರತ್ಯೇಕ ಮೂರು ಬಯೋಮೆಟ್ರಿಕ್ ಕೌಂಟರ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಮೂರು ದಿನಗಳೊಳಗಾಗಿ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರ್, ಡಿವೈಎಸ್ಪಿ ವೆಂಕಟೇಶ್, ಇನ್ಸ್ಪೆಕ್ಟರ್ ರಮೇಶ್, ಚಂದ್ರಕಾಂತ್, ನಂದಕುಮಾರ್‌, ಹಾಲಪ್ಪ ಬಾಲದಂಡಿ, ಉಮಾಮಹೇಶ್, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ