ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ತ್ಯಾಗ ಬಲಿದಾನದ ಪ್ರತೀಕವಾಗಿರುವ 200ನೇ ವರ್ಷಾಚರಣೆಯನ್ನು ರಾಜ್ಯ ಸರ್ಕಾರ ಅತ್ಯಂತ ವೈಭವಯುತವಾಗಿ ಆಚರಿಸುತ್ತಿದೆ. ನಾಡಿನ ಎಲ್ಲ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಕರೆ ನೀಡಿದರು.ಪಟ್ಟಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವ ಅಂಗವಾಗಿ ಚನ್ನಮ್ಮನ ಸಮಾಧಿ ಸ್ಥಳಕ್ಕೆ ಬಂದ ವಿಜಯ ಜ್ಯೋತಿ ಯಾತ್ರೆಯ ರಥಕ್ಕೆ ಮಂಗಳವಾರ ಪೂಜೆ ಬೀಳ್ಕೊಟ್ಟು ಅವರು ಮಾತನಾಡಿದರು. ಚನ್ನಮ್ಮನ 200ನೇ ವಿಜಯೋತ್ಸವದ ವರ್ಷಾಚರಣೆ ಸವಿ ನೆನಪಿಗಾಗಿ ಅ.28ರಂದು ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳದಲ್ಲೂ ಅದ್ಧೂರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಕಲಾವಿದರು, ಸಾಹಿತಿಗಳು, ಚಿಂತಕರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದವರು ಆಗಮಿಸಿ ಮೆರುಗು ಹೆಚ್ಚಿಸಬೇಕು. ಉತ್ಸವ ಕೇವಲ ಸರ್ಕಾರಿ ಕಾರ್ಯಕ್ರಮಗಳು ಆಗಬಾರದು. ಜನರ ಸಹಭಾಗಿತ್ವ ಅವಶ್ಯಕವಾಗಿದೆ. ಮಕ್ಕಳಿಗೆ ನಾಡಿನ ವೀರರ, ಶೂರರ ಇತಿಹಾಸ ಪರಿಚಯಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಚನ್ನಮ್ಮನ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿದ ಬಳಿಕ ಜ್ಯೋತಿ ಯಾತ್ರೆಯ ರಥಕ್ಕೆ ಪುಷ್ಪ ಸಲ್ಲಿಸಿ, ಬೀಳ್ಕೊಡಲಾಯಿತು. ಸಮಾಧಿ ಸ್ಥಳದಿಂದ ಸಕಲ ವಾದ್ಯಮೇಳಗಳೊಂದಿಗೆ ಆರಂಭವಾದ ಭವ್ಯ ಮೆರವಣಿಗೆ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಇಂಚಲ ಕ್ರಾಸ್, ಎಪಿಎಂಸಿ ಗಣೇಶ ದೇವಸ್ಥಾನ, ಚನ್ನಮ್ಮನ ವೃತ್ತದಿಂದ ಚಮ್ಮಮ್ಮನ ಕಿತ್ತೂರಿಗೆ ತೆರಳಿತು. ಸುಮಂಗಲಿಯರ ಕುಂಭಮೇಳ, ನಿವೃತ್ತ ಸೈನಿಕರು ರಸ್ತೆಯುದ್ದಕ್ಕೂ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ವೇಳೆ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಪೂಜೆ ಸಲ್ಲಿಸಿದರು. ತಹಶೀಲ್ದಾರ ಎಚ್.ಎನ್.ಶಿರಹಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ, ಸಿಡಿಪಿಒ ಅರುಣಕುಮಾರ ಎಸ್.ಬಿ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಉಪಾಧ್ಯಕ್ಷ ಬುಡ್ಡೇಸಾಬ ಶಿರಸಂಗಿ, ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ಎಫ್.ಎಸ್.ಸಿದ್ದನಗೌಡರ, ಪ್ರಮೋದಕುಮಾರ ವಕ್ಕುಂದಮಠ, ಸೋಮನಾಥ ಸೊಪ್ಪಿಮಠ, ಬಸವರಾಜ ಜನ್ಮಟ್ಟಿ, ಮಹಾಂತೇಶ ತುರಮರಿ, ಗಂಗಪ್ಪ ಗುಗ್ಗರಿ, ರಾಜು ನರಸನ್ನವರ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಅನೇಕರು ಇದ್ದರು.