ವಿಜಯನಗರದ ರಾಜಕಾರಣದ ಚಿತ್ರಣ ಬದಲಿಸಿದ 2023!

KannadaprabhaNewsNetwork | Updated : Dec 31 2023, 01:31 AM IST

ಸಾರಾಂಶ

2023ರ ವಿಧಾನಸಭೆ ಚುನಾವಣೆ ವಿಜಯನಗರ ಜಿಲ್ಲೆಯ ರಾಜಕಾರಣವನ್ನು ಬದಲಿಸಿದೆ. ಜಿಲ್ಲೆಯಲ್ಲಿ ಘಟಾನುಘಟಿ ನಾಯಕರೇ ಪರಾಭವಗೊಂಡಿದ್ದಾರೆ. ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ಜಿಲ್ಲೆಯ ರಾಜಕೀಯ ನಾಯಕರ ನಿರೀಕ್ಷೆಗೆ ತಕ್ಕಂತೆ ಬಾರದೇ, ಮತದಾರರ ಎಣಿಕೆಯಂತೆ ಚಿತ್ರಣ ಬದಲಾಗಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ರಾಜಕಾರಣ ಚಿತ್ರವನ್ನೇ 2023ರ ವರ್ಷ ಬದಲಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿಗಳು ಪರಾಭವಗೊಂಡಿದ್ದು, ಹೊಸ ರೀತಿಯ ರಾಜಕಾರಣಕ್ಕೆ ಈ ವರ್ಷ ಸಾಕ್ಷಿಯಾಗಿದೆ.

2023ರ ವಿಧಾನಸಭೆ ಚುನಾವಣೆ ವಿಜಯನಗರ ಜಿಲ್ಲೆಯ ರಾಜಕಾರಣವನ್ನು ಬದಲಿಸಿದೆ. ಜಿಲ್ಲೆಯಲ್ಲಿ ಘಟಾನುಘಟಿ ನಾಯಕರೇ ಪರಾಭವಗೊಂಡಿದ್ದಾರೆ. ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ಜಿಲ್ಲೆಯ ರಾಜಕೀಯ ನಾಯಕರ ನಿರೀಕ್ಷೆಗೆ ತಕ್ಕಂತೆ ಬಾರದೇ, ಮತದಾರರ ಎಣಿಕೆಯಂತೆ ಚಿತ್ರಣ ಬದಲಾಗಿದೆ.

ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳಾದ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಜಿ. ಕರುಣಾಕರ ರೆಡ್ಡಿ ಮತ್ತು ಮಾಜಿ ಶಾಸಕ ಎಸ್‌. ಭೀಮಾ ನಾಯ್ಕ ಪರಾಭವಗೊಂಡಿದ್ದಾರೆ. ಇನ್ನೂ ಚುನಾವಣೆ ಕಣಕ್ಕೆ ಇಳಿಯದೇ ಮಾಜಿ ಸಚಿವ ಆನಂದ ಸಿಂಗ್‌ ಅವರು ತನ್ನ ಪುತ್ರ ಸಿದ್ಧಾರ್ಥ ಸಿಂಗ್‌ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೆ, ಸಿದ್ಧಾರ್ಥ ಸಿಂಗ್‌ ಕೂಡ ಸೋಲನುಭವಿಸಿದರು. ಹಾಗಾಗಿ 2023ರ ವರ್ಷ ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಪಲ್ಲಟಗೊಳಿಸಿದ ವರ್ಷವಾಗಿ ಪರಿಣಮಿಸಿದೆ.

ಸಿಂಗ್‌ ಪುತ್ರನಿಗೆ ಸೋಲು: ಜಿಲ್ಲೆಯ ವಿಜಯನಗರ (ಹೊಸಪೇಟೆ) ವಿಧಾನಸಭೆ ಕ್ಷೇತ್ರದಲ್ಲಿ 2008ರಿಂದ ಮೂರು ಚುನಾವಣೆ ಹಾಗೂ ಒಂದು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಆನಂದ ಸಿಂಗ್ ಅವರು ಈ ಬಾರಿ ಕಣಕ್ಕೆ ಇಳಿಯದೇ ಸಿದ್ಧಾರ್ಥ ಸಿಂಗ್‌ ಅವರನ್ನು ಕಣಕ್ಕಿಳಿಸಿದ್ದರು. ಆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ಆರ್‌. ಗವಿಯಪ್ಪ ಅವರು ಸಿದ್ದಾರ್ಥ ಸಿಂಗ್‌ ಅವರನ್ನು ಪರಾಭವಗೊಳಿಸಿದರು. ಎರಡು ಬಾರಿ ಸಚಿವರೂ ಆಗಿದ್ದ ಆನಂದ ಸಿಂಗ್‌ ಅವರು ವಿಜಯನಗರ ಜಿಲ್ಲೆ ಮಾಡಿಸಿದ್ದರೂ ಕ್ಷೇತ್ರದ ಮತದಾರರು ಅವರ ಪುತ್ರ ಸಿದ್ಧಾರ್ಥ ಸಿಂಗ್‌ ಅವರ ಕೈ ಹಿಡಿಯಲಿಲ್ಲ.ಮಾಜಿ ಸಚಿವ ಪಿಟಿಪಿಗೆ ಸೋಲು: ಹೂವಿನಹಡಗಲಿ ಕ್ಷೇತ್ರವನ್ನು ಪ್ರತಿನಿಧಿಸಿ ಎರಡು ಬಾರಿ ಸಚಿವರೂ ಆಗಿದ್ದ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೊಸ ಮುಖ ಕೃಷ್ಣ ನಾಯ್ಕ ಅವರ ವಿರುದ್ಧ ಪರಾಭವಗೊಂಡರು. ಕ್ಷೇತ್ರದ ಮತದಾರರು ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಿದ್ದು, ಪರಮೇಶ್ವರ ನಾಯ್ಕ ಅವರು ವಿರೋಚಿತ ಸೋಲನುಭವಿಸುವಂತಾಯಿತು. ಬಿಜೆಪಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕೃಷ್ಣ ನಾಯ್ಕ ಗೆಲುವಿನ ನಗೆಬೀರಿದರು.

ಕರುಣಾಕರ ರೆಡ್ಡಿಗೆ ಪರಾಜಯ: ಜಿಲ್ಲೆಯ ಹರಪನಹಳ್ಳಿ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿ ಎಂ.ಪಿ. ಲತಾ ಅವರ ವಿರುದ್ಧ ಸೋಲು ಕಂಡರು. ಕ್ಷೇತ್ರದ ಮೇಲೆ ತನ್ನದೇ ಆದ ಹಿಡಿತ ಹೊಂದಿದ್ದರೂ ಈ ಬಾರಿ ಕಮಲ, ಕೈಯನ್ನು ಬಿಟ್ಟು ಕ್ಷೇತ್ರದ ಮತದಾರರು ಪಕ್ಷೇತರ ಅಭ್ಯರ್ಥಿ ಲತಾ ಅವರಿಗೆ ಮಣೆ ಹಾಕಿದರು. ಭೀಮಾ ನಾಯ್ಕಗೆ ಸೋಲು: ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್‌. ಭೀಮಾ ನಾಯ್ಕ ಅವರು ಪರಾಭವಗೊಂಡರು. ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ ಕೆ. ನೇಮರಾಜ್‌ ನಾಯ್ಕ ಅವರು ಜಯ ಗಳಿಸಿದರು. ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಾಬಲ್ಯ ಇಲ್ಲದಿದ್ದರೂ ನೇಮರಾಜ್‌ ನಾಯ್ಕ ಅವರು ಗೆಲುವು ಸಾಧಿಸಿದರು.

ಡಾ. ಎನ್‌.ಟಿ. ಶ್ರೀನಿವಾಸ್‌ಗೆ ಜಯ: ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿ ಹೊಸಮುಖ ಡಾ. ಎನ್.ಟಿ. ಶ್ರೀನಿವಾಸ್‌ ಗೆಲುವು ಸಾಧಿಸಿದರು. ತನ್ನ ಎದುರಾಳಿ ಪ್ರತಿಸ್ಪರ್ಧಿಗಳನ್ನು ಭಾರೀ ಅಂತರದಿಂದ ಸೋಲಿಸಿದ ಎನ್‌.ಟಿ. ಶ್ರೀನಿವಾಸ್‌ ಅವರು ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧದ ಮೆಟ್ಟಲು ಹತ್ತಿದರು.

ವಿಜಯನಗರ ಜಿಲ್ಲೆಯ ರಾಜಕಾರಣದಲ್ಲಿ 2023ರ ವರ್ಷ ಭಾರೀ ಪಲ್ಲಟವನ್ನೇ ಸೃಷ್ಟಿಸಿದೆ. ಈ ವರ್ಷ ರಾಜಕಾರಣಿಗಳಿಗೆ ಏಳು-ಬೀಳಿನ ವರ್ಷವಾಗಿ ಪರಿಣಮಿಸಿದೆ. ಹೊಸ ಮುಖಗಳು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟರೆ, ಇನ್ನೂ ಹಳೇ ಮುಖಗಳು ಸೋಲು ಕಂಡಿವೆ.ಮೂರು ಪಕ್ಷಗಳಿಗೂ ಜಯ, ಪಕ್ಷೇತರ ಅಭ್ಯರ್ಥಿಗೂ ಗೆಲುವು!: ವಿಜಯನಗರ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಎರಡು ಕಡೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ತಲಾ ಒಂದು ಕಡೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಜಯ ಸಾಧಿಸಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿರುವುದು ವಿಶೇಷ. ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಎಚ್.ಆರ್‌. ಗವಿಯಪ್ಪ, ಕೂಡ್ಲಿಗಿಯಿಂದ ಡಾ. ಎನ್‌.ಟಿ. ಶ್ರೀನಿವಾಸ್‌ ಜಯ ಸಾಧಿಸಿದ್ದಾರೆ. ಇನ್ನೂ ಹೂವಿನಹಡಗಲಿ ಕ್ಷೇತ್ರದಿಂದ ಬಿಜೆಪಿಯ ಕೃಷ್ಣ ನಾಯ್ಕ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ನ ಕೆ. ನೇಮರಾಜ್‌ ನಾಯ್ಕ ಜಯ ಸಾಧಿಸಿದ್ದಾರೆ. ಹರಪನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಎಂ.ಪಿ. ಲತಾ ಜಯ ಸಾಧಿಸಿದ್ದಾರೆ.

Share this article