ಸಿಹಿ, ಕಹಿ ನೆನಪುಗಳ ನೀಡಿ ಇತಿಹಾಸವಾದ 2023

KannadaprabhaNewsNetwork |  
Published : Dec 31, 2023, 01:30 AM IST
ಪೋಟೋ: 30ಎಸ್ಎಂಜಿಕೆಪಿ05: ಶಿವಮೊಗ್ಗ ನಗರದಲ್ಲಿ ನಡೆದ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ದೃಶ್ಯ. | Kannada Prabha

ಸಾರಾಂಶ

ಮೂರು ವರ್ಷಗಳಿಂದ ಕೊರೋನಾ ಕಾಟದಿಂದ ತತ್ತರಿಸಿದ್ದ ಶಿವಮೊಗ್ಗ ಜಿಲ್ಲೆಯ ಜನತೆ- 2023 ನಿಟ್ಟುಸಿರು ಬಿಟ್ಟವರ್ಷ. ಹರ್ಷದ ಹೊನಲೇನೂ ಹರಿಯದಿದ್ದರೂ, ಕೊರೋನಾ ಕರಿನೆರಳಿನಿಂದ ಬಹುಮಟ್ಟಿಗೆ ಚೇತರಿಸಿಕೊಂಡ ನೆಮ್ಮದಿ ಮೂಡಿಸಿದ್ದೇನೂ ಸುಳ್ಳಲ್ಲ. ಈಗ 2023 ಕೊನೆಯಾಗಿದೆ, 2024 ಭರಪೂರ ಭರವಸೆ, ನಿರೀಕ್ಷೆ, ಹೊಸ ಕನಸುಗಳನ್ನು ಹೊತ್ತು ಜಗಕ್ಕೆ ಎಂಟ್ರಿಯಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೂರು ವರ್ಷಗಳಿಂದ ಕೊರೋನಾ ಕಾಟದಿಂದ ತತ್ತರಿಸಿದ್ದ ಜಿಲ್ಲೆಯ ಜನತೆ- 2023 ನಿಟ್ಟುಸಿರು ಬಿಟ್ಟವರ್ಷ. ಹರ್ಷದ ಹೊನಲೇನೂ ಹರಿಯದಿದ್ದರೂ, ಕೊರೋನಾ ಕರಿನೆರಳಿನಿಂದ ಬಹುಮಟ್ಟಿಗೆ ಚೇತರಿಸಿಕೊಂಡ ನೆಮ್ಮದಿ ಮೂಡಿಸಿದ್ದೇನೂ ಸುಳ್ಳಲ್ಲ.

ಪ್ರಧಾನಿ ಕೈಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಬಿಟ್ಟರೆ, 2023ರಲ್ಲಿ ಹೊಸ ಯೋಜನೆಗಳು, ಹಳೆಯ ಕನಸುಗಳು ನನಸಾಗಿದ್ದು, ಯುವಜನತೆಯ ಕೈಗೆ ಉದ್ಯೋಗ ಸಿಕ್ಕಿದ್ದು ಇಂತಹ ಯಾವುದೇ ವಿದ್ಯಮಾನಗಳು ನಡೆದಿಲ್ಲವಾದರೂ, ಜಿಲ್ಲಾ ಅಭಿವೃದ್ಧಿಯಲ್ಲಿ ಹೊಸ ಭರವಸೆಯನ್ನು ಹುಟ್ಟಿಸುವಲ್ಲಿ ಸಫಲವಾಗಿದೆ. ಶಿವಮೊಗ್ಗ ಜಿಲ್ಲೆಯ ಬಹುಕಾಲದ ಬೇಡಿಕೆ, ಕನಸಾದ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ವಿಮಾನ ಹಾರಾಟಕ್ಕೆ ಸರ್ಕಾರ ಸಮ್ಮತಿಸಿದ್ದು, ಈ ವರ್ಷದ ಅತಿದೊಡ್ಡ ವಿದ್ಯಮಾನ. ಇನ್ನೂ ಈದ್‌ ಮಿಲಾದ್‌ ದಿನದಂದು ರಾಗಿಗುಡ್ಡದಲ್ಲಿ ನಡೆದ ಗಲಭೆ ಈ ವರ್ಷದ ದೊಡ್ಡ ಕಹಿಘಟನೆಯಾಗಿದೆ. ಘಟನೆ ರಾಜಕೀಯ ಪ್ರೇರಣೆ ಪಡೆದು 15 ದಿನಗಟ್ಟಲೆ ರಾಗಿಗುಡ್ಡ ಪ್ರದೇಶಕ್ಕೆ ನಿರ್ಬಂಧ ಹಾಕಿದ್ದು, ಇಡೀ ಘಟನೆ ಧರ್ಮ ಸಂಘರ್ಷಕ್ಕೆ ಸಾಕ್ಷಿಯಾಗಿದ್ದು ಮಾಸಾದ ಘಟನೆಯಾಗಿ ಉಳಿದಿದೆ.

* ಶಾರ್ಟ್‌ ಸರ್ಕಿಟ್‌ನಿಂದ ಉದ್ಯಮಿ ಸಾವು

ವರ್ಷಾಚರಣೆ ದಿನವೇ ನಡೆದ ದುರ್ಘಟನೆಯಲ್ಲಿ ಇಬ್ಬರು ಬಲಿಯಾದ್ದರು. ಜ.8ರಂದು ಬೆಳಗಿನ ಜಾವ ಕುವೆಂಪು ರಸ್ತೆಯಲ್ಲಿರುವ ಉದ್ಯಮಿ ಶರತ್‌ ಭೂಪಾಳಂ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಶರತ್‌ ಭೂಪಾಳಂ ಸಾವನ್ನಪ್ಪಿದರು. ಜ.9ರಂದು ಸಾಗರದಲ್ಲಿ ಭಜರಂಗದಳದ ನಗರ ಸಹ ಸಂಚಾಲಕ ಸುನೀಲ್‌ ಮೇಲೆ ತಲ್ವಾರ್‌ನಿಂದ ದಾಳಿ ಯತ್ನ ನಡೆದಿತ್ತು.

* ಮೋದಿಯಿಂದ ವಿಮಾನ ನಿಲ್ದಾಣ ಉದ್ಘಾಟನೆ

ಫೆ.2ರಂದು ಹೊಸನಗರ ತಾಲೂಕಿನ ಗರ್ತಿಕೆರೆಯಲ್ಲಿ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಪತ್ತೆಯಾಗಿತ್ತು. ಫೆ.27ರಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಜನ್ಮದಿನಾಚರಣೆ ಅಂಗವಾಗಿ ಜಿಲ್ಲೆ ಜನತೆಯ ಬಹು ವರ್ಷಗಳ ಕನಸಾಗಿದ್ದ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿತ್ತು. ಸೋಗಾನೆಯಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.

* ಮೃತದೇಹ ಕಚ್ಚಿಕೊಂಡು ಓಡಾಡಿದ ನಾಯಿ

ಮಾರ್ಚ್‌ 25ರಂದು ತೀರ್ಥಹಳ್ಳಿಯ ಮೀನು ಮಾರುಕಟ್ಟೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಪೂರ್ಣೇಶ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಮಾ.28ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರುವುದಕ್ಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಪಾರ್ಕ್‌ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆ ನಡೆದಿತ್ತು. ಮಾ.31ರಂದು ಶಿವಮೊಗ್ಗದ ಮೆಗ್ಗಾನ್‌ ಆಸತ್ರೆ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಈ ವರ್ಷವೂ ಹಲವು ಕಾರಣಗಳಿಗೆ ಮೆಗ್ಗಾನ್‌ ಆಸ್ಪತ್ರೆ ಸಾಕ್ಷಿಯಾಯಿತು. ವಿಶೇಷವಾಗಿ ಮಾ.31ರಂದು ನವಜಾತ ಹೆಚ್ಚು ಶಿಶುವಿನ ಮೃತದೇಹವನ್ನು ಕಚ್ಚಿಕೊಂಡು ನಾಯಿಯೊಂದು ಮೆಗ್ಗಾನ್‌ ಆಸ್ಪತ್ರೆಯ ಆವರಣದಲ್ಲಿ ಓಡಾಡಿತ್ತು. ಇದು ಆಸ್ಪತ್ರೆಯಲ್ಲಿ ಆತಂಕ ಸೃಷ್ಠಿಯಾಗಿತ್ತು.

* ರಾಜಕೀಯ ನಿವೃತ್ತಿ ಘೋಷಿಸಿದ ಈಶ್ವರಪ್ಪ

ಏ.1ರಂದು ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಜಿಲ್ಲಾದ್ಯಂತ ಚೆಕ್ ಪೋಸ್ಟ್ ತೆರೆದು ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದ್ದರು. ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಮತ್ತು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದ ಪೊಲೀಸರು. ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸೀರೆ ವಶಕ್ಕೆ. ಏ.6ರದು ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲೇ ನೂತನ ಕಾರ್ಯಾಲಯ ಆರಂಭಿಸಿ ಗಮನ ಸೆಳೆದಿದ್ದರು. ಏ.7ರಂದು ತಂದೆ ಸಾವಿನ ನೋವಿನ ನಡುವೆಯೂ ಹೊಸನಗರ ತಾಲೂಕು ಗೇರ್ಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಕೊಪ್ಪಳ ಮೂಲದ ಬಾಲಕಿ ಆಶ್ರಿಯಾ ಮನಿಯಾರ್ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಏ.11ರಂದು ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು, ಏ.13ರಂದು ನ್ಯಾಮತಿ ತಾಲೂಕು ಜೀನಹಳ್ಳಿಯಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ತುತ್ತಾಗಿದ್ದ ಡಾ.ವಿನಯ್ ಅವರನ್ನು ಶಿವಮೊಗ್ಗದಿಂದ ಜೀರೋ ಟ್ರಾಫಿಕ್‌ನಲ್ಲಿ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಏ.19ರಂದು ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಮೊದಲ ಬಾರಿಗೆ ವಿಧಾನಸಭಾ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

* ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ಮೇ 1ರಂದು ಸೊರಬ ತಾಲೂಕು ಕುಪ್ಪೆ ಗ್ರಾಮದ ಮನೆಯಯೊಂದರ ಕೊಟ್ಟಿಗೆಯಲ್ಲಿದ್ದ ಚಿರತೆ ಸೆರೆಯಾಗಿತ್ತು. ಮೇ 3ರಂದು ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ನಡೆದಿದ್ದ ಜೆಡಿಎಸ್ ಪ್ರಚಾರ ಸಭೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಭಾಗಿಯಾಗಿದ್ದರು. ಮೇ 4ರಂದು ನಟ ಶಿವರಾಜ್‌ ಕುಮಾರ್‌ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಮೇ 8 ರಂದು ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೆಂದ್ರ ಅವರ ಪರ ಭರ್ಜರಿ ರೋಡ್ ಶೋ ನಡೆಸಿದ ಖ್ಯಾತ ಚಲನಚಿತ್ರ ನಟ ಕಿಚ್ವ ಸುದೀಪ್ ಭಾಗವಹಿಸಿದ್ದರು. ಮೇ 13ರಂದು ಪ್ರಕಟವಾಗಿದ್ದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ತಲಾ ಮೂರರಲ್ಲಿ ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆದ್ದು ಬೀಗಿದ್ದವು. ಮೇ 31ರಂದು ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆ ಇಇ ಪ್ರಶಾಂತ್. ಶಿಕಾರಿಪುರದ ಪಂಚಾಯತ್‌ರಾಜ್‌ ಇಲಾಖೆ ಎಂಜಿನಿಯರ್ ಶಂಕರ್ ನಾಯ್ಕ್ ಮನೆ ಮೇಲೆ ಭ್ರಷ್ಟ ಅಧಿಕಾರಿಗಳು ದಾಳಿ ನಡೆಸಿದ್ದರು.

* ಶಿವಮೊಗ್ಗದಲ್ಲಿ ಬೆಚ್ಚಿಬೀಳಿಸಿದ್ದ ಗೃಹಿಣಿ ಹತ್ಯೆ

ಜೂ.17ರಂದು ಶಿವಮೊಗ್ಗದ ವಿನಾಯಕ ನಗರದ ಮನೆಯಲ್ಲಿ ನೀರಾವರಿ ಇಲಾಖೆ ಎಂಜಿನಿಯರ್‌ ಪತ್ನಿ ಕಮಲಮ್ಮ ಅವರನ್ನು ಕಾರು ಚಾಲಕನೇ ಕೊಲೆ ಮಾಡಿದ್ದರು. ಪೊಲೀಸರು ಆರೋಪಿಗಳಿಂದ ನಗದು ಸೇರಿ ಒಟ್ಟಾರೆ ₹37 ಲಕ್ಷ ಮೌಲ್ಯದ ನಗರದ ಜಪ್ತಿ ಮಾಡಿದ್ದರು. ಈ ಪ್ರಕರಣ ಶಿವಮೊಗ್ಗ ನಗರದಲ್ಲೇ ಬೆಚ್ಚಿ ಬೀಳಿಸಿತ್ತು. ಜೂ.28ರಂದು ನಗರದ ಬೈಪಾಸ್ ರಸ್ತೆ ಊರಗಡೂರು ಬಳಿ ರಸ್ತೆಗೆ ಅಡ್ಡಲಾದ ಮರ ಕಟಾವ್ ಮಾಡುವಾಗ ನಡೆದ ವಿದ್ಯುತ್‌ ಅವಘಡದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದರು.

* ಯಡಿಯೂರಪ್ಪರಿಗೆ ಡಾಕ್ಟರೇಟ್‌ ಪದವಿ

ಜುಲೈ 5ರಂದು ಮಲೆನಾಡು ಹಾಗೂ ಘಟ್ಟ ಶ್ರೇಣಿಯಲ್ಲಿ ಮಳೆ ಚುರುಕುಗೊಂಡಿತ್ತು, ತುಂಗಾ ನದಿಯಲ್ಲಿ ಒಳಹರಿವಿನಲ್ಲಿ ಹೆಚ್ಚಳವಾಗಿತ್ತು. ಜು.7ರಂದು ಭರ್ತಿಯಾಗಿದ್ದ ಗಾಜನೂರು ತುಂಗಾ ಜಲಾಶಯದಿಂದ 10 ಗೇಟುಗಳ ಮೂಲಕ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಲಾಗಿತ್ತು. ಜು.17ರಂದು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ತಡರಾತ್ರಿ ಜೀರೋ ಟ್ರಾಫಿಕ್ ಮೂಲಕ ಶಿವಮೊಗ್ಗದಿಂದ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಜು.21ರಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿತ್ತು.

* ಶಿವಮೊಗ್ಗದಲ್ಲಿ ವಿಮಾನ ಹಾರಾಟ

ಆಗಸ್ಟ್ 1ರಂದು ಮಹಾನಗರ ಪಾಲಿಕೆ ಆಯುಕ್ತರ ಆಪ್ತ ಶಾಖೆಯ ಡಿ ದರ್ಜೆ ನೌಕರರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಕರಿಯಣ್ಣ ಅವರಿಗೆ ಆಯುಕ್ತ ಮಾಯಣ್ಣಗೌಡ ಪ್ರೀತಿಯಿಂದ ಬರಮಾಡಿಕೊಂಡು ತಮ್ಮ ಕಚೇರಿಯಲ್ಲಿಯೇ ಅವರಿಗೆ ಊಟ ತಿಂಡಿ ವ್ಯವಸ್ಥೆ ಮಾಡಿ ತಮ್ಮ ಕೈಯಾರೆ ಊಟ ಮಾಡಿಸಿದ ಆಯುಕ್ತರು ಗಮನ ಸೆಳೆದಿದ್ದರು. ಆ.12ರಂದು ಬಂದಿರುವ ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡು ಇದೀಗ ನಿಷ್ಕ್ರಿಯಗೊಂಡ ಟಿ-55 ಯುದ್ಧ ಟ್ಯಾಂಕರ್ ಶಿವಮೊಗ್ಗಕ್ಕೆ ಆಗಮಿಸಿತ್ತು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ಯಾಂಕರ್ ಅನ್ನು ಮಹಾನಗರ ಪಾಲಿಕೆ ಮತ್ತು ನಿವೃತ್ತ ಸೈನಿಕರ ಸಂಘದ ಪ್ರಮುಖರು ಸಂಭ್ರಮದಿಂದ ಬರಮಾಡಿಕೊಂಡಿದ್ದರು. ಆ.19ರಂದು ಬಿಕ್ಕೋನಹಳ್ಳಿಯಲ್ಲಿ ಮಹಿಳೆ ಯಶೋಧಮ್ಮರನ್ನು‌ ಕೊಂದಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿತ್ತು. ಆ.21 ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿತ್ತು. ಆ.31ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಆರಂಭ ವಾಗಿತ್ತು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ್ದರು.

* ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಸೆ.9 ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಹಾಗೂ ನಾಯಕಿ ರುಕ್ಮಿಣಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಸೆ.28 ಜನಸಾಗರವನ್ನು ದಾಟಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿತ್ತು. ನಗರದ ಎಲ್ಲೆಡೆ ಖಾಕಿ ಸರ್ಪಗಾವಲು ಇತ್ತು. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆ, ವೃತ್ತಗಳಲ್ಲಿ ರಾರಾಜಿಸುತ್ತಿರುವ ಕೇಸರಿ ತೋರಣ, ಭಗವಾಧ್ವಜ, ಬಂಟಿಂಗ್ಸ್. ಗಾಂಧಿಬಜಾರಿನ ಪ್ರಮುಖ ದ್ವಾರದಲ್ಲಿ ಸಾರ್ವಜನಿಕರ ಗಮನಸೆಳೆಯುತ್ತಿರುವ ಉಗ್ರನರಸಿಂಹನ ಮೂರ್ತಿ, ಶಿವಪ್ಪ ನಾಯಕ ವೃತ್ತದಲ್ಲಿ ಚಂದ್ರಯಾನ ರಾಕೆಟ್‍ ಪ್ರತಿಕೃತಿ ಎಲ್ಲರ ಕಣ್ಮನ ಸೆಳೆದಿತ್ತು. ಸೆ.30ರಂದು ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಎ.ಎ. ವೃತ್ತದಲ್ಲಿ ಅಲಂಕಾರ ತೆರವುಗೊಳಿಸುವ ವಿಚಾರಕ್ಕೆ ರಾತ್ರಿ ಎರಡು ಕೋವಿನ ನಡುವೆ ಉಂಟಾದ ಬಿಗುವಿನ ವಾತಾವರಣ ಉಂಟಾಗಿತ್ತು.

* ರಾಗಿಗುಡ್ಡದಲ್ಲಿ ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಗ್ನ

ಅ.1 ಈದ್‌ ಮಿಲಾದ್‌ ವೇಳೆ ನಡೆದ ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಗ್ನಗೊಂಡು ಸುಮಾರು 15 ದಿನದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಕಲ್ಲು ತೂರಾಟದಲ್ಲಿ ಪೊಲೀಸ್‌ ವಾಹನವೊಂದು ಜಖಂಗೊಂಡಿದ್ದು, ಮನೆಯ ಕಿಟಕಿ ಗಾಜುಗಳು ಪುಡಿಯಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು, ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದರು. ಅ.26 ದಸರಾ ಮೆರವಣಿಗೆಗೆ ಬಂದಿದ್ದ ನೇತ್ರಾವತಿಆ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ದಸರಾ ಹಿಂದಿನ ದಿನವೇ ಆನೆ ಮರಿ ಹಾಕಿದ್ದು, ಆನೆಯು ಗರ್ಭಿಣಿ ಆಗಿರುವ ವಿಷಯ ಅಧಿಕಾರಿಗಳಿಗೆ ಗೊತ್ತಾಗದೇ ಇದ್ದಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

* ಆತಂಕ ಸೃಷ್ಠಿಸಿದ್ದ ಬಾಕ್ಸ್‌ಗಳು

ನ.5ರಂದು ನಗರದ ರೈಲು ನಿಲ್ದಾಣದ ಬಳಿ ಇರುವ ಕಾಪೌಂಡ್‌ ಬಳಿ ಅನಾಮಧೇಯ ಎರಡು ಬಾಕ್ಸ್‌ ಪತ್ತೆಯಾಗಿದ್ದು, ನಗರದ ಜನರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಬೆಂಗಳೂರಿನಿಂದ ಬಾಂಬ್‌ ನಿಷ್ಕ್ರಿಯ ದಳ ಬಾಕ್ಸ್‌ ಓಪನ್‌ ಮಾಡಿದಾಗ ಬಾಕ್ಸ್‌ನಲ್ಲಿ ರದ್ದಿ ಪೇಪರ್‌ ಮತ್ತು ಅಡುಗೆಗೆ ಬಳಸುವ ಉಪ್ಪು ಇತ್ತು ಎಂಬುದು ತಿಳಿದು ಬಂದಿತ್ತು.

* ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛ

ಭದ್ರಾವತಿ ತಾಲೂಕಿನ ಗುಡ್ಡದ ನೇರಳೆ ಕೆರೆ ಶಾಲೆಯಲ್ಲಿ ಮಕ್ಕಳಿಂದ ಟಾಯ್ಲೆಟ್ ಸ್ವಚ್ಚಗೊಳಿಸಿದ ಪ್ರಕರಣ ನಡೆದಿತ್ತು, ಈ ಘಟನೆ ಖಂಡಿಸಿ ಪೋಷಕರಿಂದ ಆಕ್ರೋಶ ವ್ಯಕ್ತಪಡಿಸಿದ್ದರು. ಡಿಎಸ್‌ಎಸ್‌ ಮುಖಂಡರು ಎಸಿಗೆ ದೂರು ನೀಡಿದರು. ಘಟನೆ ಪರಿಶೀಲನೆ ನಡೆಸಿದ ಡಿಡಿಪಿಐ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಅವರನ್ನು ಅಮಾನತುಗೊಳಿಸಿ ಡಿ.28ರಂದು ಆದೇಶ ಹೊರಡಿಸಿದ್ದರು.

- - - ಬಾಕ್ಸ್ ಪಕ್ಷಾಂತರ ಪರ್ವ ಜಿಲ್ಲೆಯಲ್ಲಿ ಈ ಬಾರಿ ಜಿಲ್ಲೆಯ ಹಿರಿಯ ಮುತ್ಸದ್ದಿ ರಾಜಕಾರಣಿಗಳಾದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಒಂದೇ ವರ್ಷ ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆದಿದ್ದು ಗಮನಾರ್ಹ.

ಇನ್ನು ವಿಧಾನಸಭಾ ಚುನಾವಣೆ ಹೊಸ್ತಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವವೇ ನಡೆಯಿತು. ಪ್ರಮುಖರಾದ ಆಯನೂರು ಮಂಜುನಾಥ್‌ ಅವರು ಬಿಜೆಪಿ ಬಿಟ್ಟು ಜೆಡಿಎಸ್‌ ಸೇರಿ, ಚುನಾವಣೆ ಬಳಿಕ ಕಾಂಗ್ರೆಸ್‌ ಸೇರ್ಪಡೆಗೊಂಡರೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಅವರು ತೆನೆಯ ಬಾರ ಇಳಿಸಿ, ಕೈಗೆ ಬಲಕೊಟ್ಟರು. ಇನ್ನು ಕೈ ನಗರದಲ್ಲಿ ಹಿಡಿದಿದ್ದ ಕೆ.ಬಿ. ಪ್ರಸನ್ನಕುಮಾರ್‌ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರ್ಪಡೆಗೊಂಡರು. ಹೀಗೆ ಜಿಲ್ಲೆಯಲ್ಲಿ ಬಾರಿ ಪಕ್ಷಾಂತರ ಪರ್ವವೇ ನಡೆಯಿತು.

- - - -30ಎಸ್ಎಂಜಿಕೆಪಿ05: ಶಿವಮೊಗ್ಗ ನಗರದಲ್ಲಿ ನಡೆದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ದೃಶ್ಯ.

-30ಎಸ್ಎಂಜಿಕೆಪಿ06: ರಾಗಿಗುಡ್ಡದಲ್ಲಿ ನಡೆದ ಗಲಾಭೆ ವೇಳೆ ಪೊಲೀಸರು ಲಾಠಿ ಚಾರ್ಚ್‌ ಮಾಡುತ್ತಿರುವುದು.

-30ಎಸ್ಎಂಜಿಕೆಪಿ07: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್‌ ಇಂಡಿಯಾ ವಿಮಾನ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ