ಕನ್ನಡಪ್ರಭ ವಾರ್ತೆ ಚಾಮರಾಜನಗರ
ನೂತನ ವರ್ಷಾಚರಣೆ ಹಿನ್ನೆಲೆ ಗಡಿಜಿಲ್ಲೆಯ ಪ್ರವಾಸಿ ಸ್ಥಳಗಳು ಹಾಗೂ ದೇವಾಲಯಗಳಿಗೆ ಜನಸಾಗರವೇ ಹರಿದು ಬಂದಿತ್ತು.ಪ್ರಸಿದ್ಧ ಯಾತ್ರ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ರಾತ್ರಿಯಿಂದಲೇ ಭಕ್ತಸಾಗರ ಹರಿದು ಬಂದಿದ್ದು ಹೊಸ ವರ್ಷದಂದು ಸಾವಿರಾರು ಭಕ್ತರು ಚಿನ್ನದ ರಥ, ಬೆಳ್ಳಿ ರಥ ಹಾಗೂ ಬಸವ ವಾಹನ ಸೇವೆಯನ್ನು ಸಲ್ಲಿಸಿದರು.
ದೇವಾಲಯಕ್ಕೆ ಜಗಮಗಿಸುವ ದೀಪಾಲಂಕಾರ ಮಾಡಿದ್ದು ದೇವಾಲಯ ಪ್ರಾಂಗಣ, ಗರ್ಭಗುಡಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.ಹೊಗೆನಕಲ್‌ನಲ್ಲೂ ಪ್ರವಾಸಿಗರು:
ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತದಲ್ಲಿ ಸಹಸ್ರಾರು ಮಂದಿ ಪ್ರವಾಸಿಗರು ಲಗ್ಗೆ ಇಟ್ಟು ಕಾವೇರಿ ಜಲ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ಕರ್ನಾಟಕ, ತಮಿಳುನಾಡು ಭಾಗದ ಪ್ರವಾಸಿಗರು ಹರಿದುಬಂದು ತೆಪ್ಪ ಸವಾರಿಯನ್ನು ನಡೆಸಿದ್ದಾರೆ.ಬಿಳಿಗಿರಿಬನದಲ್ಲಿ ಜನರ ಚಿಲಿಪಿಲಿ:
ಚಾಮರಾಜನಗರ ಜಿಲ್ಲೆಗೆ ಕಳಸಪ್ರಾಯದಂತಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಲಾಂಗ್ ರೈಡ್‌ನಲ್ಲಿ ಬಂದ ನೂರಾರು ಪ್ರವಾಸಿಗರು ಬಿಳಿಗಿರಿ ಬನದ ಚೆಲುವಲ್ಲಿ ಹೊಸ ವರ್ಷಾಚರಣೆ ಆಚರಿಸಿದ್ದಾರೆ.ಬಿಳಿಗಿರಿರಂಗನಾಥ ದೇಗುಲಕ್ಕೆ ಬಂದವರು ಕೆ. ಗುಡಿ ಭಾಗಕ್ಕೂ ಭೇಟಿ ಕೊಟ್ಟು ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.
ಗೋಪಾಲನ ಸನ್ನಿಧಿಯಲ್ಲಿ ಯಾತ್ರಾರ್ಥಿಗಳು:ಕರ್ನಾಟಕದ ಕಾಶ್ಮೀರ ಎಂದೇ ಪ್ರಖ್ಯಾತಗೊಂಡಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಯಾತ್ರಾರ್ಥಿಗಳು ಬಂದು ಹಿಮಾಚ್ಛಾದಿತ ಬೆಟ್ಟದಲ್ಲಿ ಹೊಸ ವರ್ಷಾಚರಣೆ ಸಂಭ್ರಮಿಸಿದ್ದಾರೆ.
ಚುಮುಚುಮು ಮಂಜಿನ ನಡುವೆ ಗೋಪಾಲನ ದರ್ಶನ ಪಡೆದು ಭಕ್ತರು ಹೊಸ ವರ್ಷದ ಆರಂಭವನ್ನು ಹಸಿರ ಕಾನನದಲ್ಲಿ ಕಳೆದಿದ್ದಾರೆ.ಚಾಮರಾಜೇಶ್ವರ ದೇಗುಲ: ಮೈಸೂರಿನ ಮಹಾರಾಜರು ಸ್ಥಾಪನೆ ಮಾಡಿರುವ ಚಾಮರಾಜನಗರದ ಚಾಮರಾಜೇಶ್ವರ ದೇಗುಲಕ್ಕೆ ಸಾರ್ವಜನಿಕರು ಭೇಟಿ ಕೊಟ್ಟು ನೂತನ ವರ್ಷದ ದಿನದಂದು ಚಾಮರಾಜೇಶ್ವರನ ದರ್ಶನ ಪಡೆದರು.
ರಾಜತ್ವ ಮತ್ತು ದೈವತ್ವ ಎರಡು ಇರುವ ಚಾಮರಾಜೇಶ್ವರನ ದರ್ಶನ ಪಡೆದರೇ ಇಷ್ಟಾರ್ಥ ಸಿದ್ಧಿಸುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಕ್ತರು ದರ್ಶನ ಪಡೆದರು.