ಇತಿಹಾಸದ ಪುಟ ಸೇರಿದ 2024ಒಳಿತು-ಕೆಡಕುಗಳಿಂದ ಕೂಡಿದ್ದ ವರ್ಷದ ಹಿನ್ನೋಟ । ನೆಮ್ಮದಿ ಕಾಣದೆ ಸಿಹಿ-ಕಹಿಗಳೊಂದಿಗೆ 2024ಕ್ಕೆ ವಿದಾಯ

KannadaprabhaNewsNetwork | Published : Dec 31, 2024 1:01 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ 12 ತಿಂಗಳುಗಳಲ್ಲಿ ನಮಗೆ ನೋವು ನಲಿವು, ಖುಷಿ, ಸಂಕಟಗಳನ್ನು ನೀಡಿದ 2024 ಇಂದಿಗೆ ಇತಿಹಾಸದ ಪುಟ ಸೇರಿತು. ಈ ವರ್ಷ ತಾವು ಅಂದುಕೊಂಡಿದ್ದನ್ನು ದಯಪಾಲಿಸಿದ್ದಕ್ಕೆ ಕೆಲವು ಖುಷಿ ಪಟ್ಟಿದ್ದರೆ, ತಾವು ಅಂದುಕೊಂಡಿದ್ದು ಈ ವರ್ಷ ನಡೆಯಲಿಲ್ಲ ಎಂಬ ನೋವು ಕೆಲವರಿಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ 12 ತಿಂಗಳುಗಳಲ್ಲಿ ನಮಗೆ ನೋವು ನಲಿವು, ಖುಷಿ, ಸಂಕಟಗಳನ್ನು ನೀಡಿದ 2024 ಇಂದಿಗೆ ಇತಿಹಾಸದ ಪುಟ ಸೇರಿತು. ಈ ವರ್ಷ ತಾವು ಅಂದುಕೊಂಡಿದ್ದನ್ನು ದಯಪಾಲಿಸಿದ್ದಕ್ಕೆ ಕೆಲವು ಖುಷಿ ಪಟ್ಟಿದ್ದರೆ, ತಾವು ಅಂದುಕೊಂಡಿದ್ದು ಈ ವರ್ಷ ನಡೆಯಲಿಲ್ಲ ಎಂಬ ನೋವು ಕೆಲವರಿಗಿದೆ.

ಇನ್ನೇನು ಹೊಸ ವರ್ಷ 2025 ಬಂದಾಯ್ತು. 2024ರಲ್ಲಿ ಜಿಲ್ಲೆಯಲ್ಲಿ ಏನೇನಾಯಿತು ಎಂದು ಹಿನ್ನೋಟವನ್ನೊಮ್ಮೆ ನೋಡಿದರೆ ಸಿಹಿಗಿಂತ ಕಹಿಯೇ ಹೆಚ್ಚಾಗಿದ್ದಂತಿದೆ. ತಕ್ಕಮಟ್ಟಿಗೆ ಒಳ್ಳೆಯ ಘಟನೆಗಳು ನಡೆದರೂ ಸಹ ಬಹುತೇಕ ಆಘಾತಕಾರಿ ವಿಷಯಗಳೇ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದ್ದವು.ಫೆಬ್ರವರಿ 23: ಹೆರಿಗೆಗೆಂದು ಜಿಲ್ಲಾ ಆಸ್ಪತ್ರೆಯಲ್ಲಿ ಫೆ.23ರಂದು ದಾಖಲಾಗಿದ್ದ ತುಂಬು ಗರ್ಭಿಣಿಗೆ ಆಸ್ಪತ್ರೆಯ ಸಿಬ್ಬಂದಿ ಎ ಪಾಸಿಟಿವ್ ರಕ್ತ ಹಾಕುವ ಬದಲಾಗಿ ಬಿ ಪಾಸಿಟಿವ್ ಹಾಕಿದ್ದರಿಂದ ಹೆರಿಗೆಯ ಬಳಿಕ ಆಕೆ ಮೃತಪಟ್ಟಿದ್ದಳು.ಎಪ್ರೀಲ್‌ 3: ಸಾವು ಗೆದ್ದುಬಂದ ಸಾತ್ವಿಕ್‌. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟವೊಂದರಲ್ಲಿ ಕೊರೆಯಿಸಿದ್ದ ಕೊಳವೆ ಬಾವಿಗೆ ಸಾತ್ವಿಕ ಮುಜಗೊಂಡ ಎಂಬ ಪುಟ್ಟ ಕಂದಮ್ಮ ಏಪ್ರಿಲ್ 3ರಂದು ಬಿದ್ದಿತ್ತು. ಈ ವೇಳೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ತಂಡಗಳ ಮತ್ತು ಸ್ಥಳೀಯರ ಸಹಾಯದಿಂದ ಕೇವಲ 18 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದರು. ಈ ಮೂಲಕ ಜಿಲ್ಲೆಯಲ್ಲಿ ನಡೆದ ಕೊಳವೆ ದುರಂತಗಳಲ್ಲಿ ಬದುಕಿ ಬಂದ ಸಾತ್ವಿಕ ಹೊಸ ಇತಿಹಾಸ ಸೃಷ್ಠಿಸಿದ್ದ. ಅದೆಷ್ಟೋ ಕೊಳವೆಬಾವಿ ದುರಂತಗಳಲ್ಲಿ ಬಿದ್ದವರ ಅಂತ್ಯವಾದ ಉದಾಹರಣೆಗಳ ಮಧ್ಯೆ ಸಾತ್ವಿಕ ಬದುಕಿ ಬಂದಿದ್ದು ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪವಾಡವೆಂದೇ ಎಲ್ಲರೂ ನಂಬಿದರು.ಎಪ್ರೀಲ್ ರಥದ ಚಕ್ರಕ್ಕೆ ಸಿಲುಕಿ ಮೂವರ ಸಾವು. ಲಚ್ಯಾಣ ಸಿದ್ದಲಿಂಗ ಮಹಾರಾಜರ ಪವಾಡದಿಂದ ಸಾತ್ವಿಕ ಬದುಕಿ ಬಂದರೆ ಜಾತ್ರೆಯಲ್ಲಿ ಮೂವರು ಮೃತಪಟ್ಟಿದ್ದು ಆಘಾತ ನೀಡಿತು. ಲಚ್ಯಾಣ ಗ್ರಾಮದಲ್ಲಿ ಏಪ್ರಿಲ್‌ ತಿಂಗಳ ಕೊನೆ ವಾರದಲ್ಲಿ ನಡೆದ ಸಿದ್ದಲಿಂಗ ಮಹಾರಾಜರ ಜಾತ್ರೆಯ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದು, ಇತಿಹಾಸದಲ್ಲೇ ಇದು ಕಪ್ಪುಚುಕ್ಕೆಯಾಗಿ ಉಳಿಯಿತು.ಎಪ್ರೀಲ್‌ 13: ಕಾರು- ಲಾರಿ ಅಪಘಾತದಲ್ಲಿ ನಾಲ್ವರ ದುರ್ಮರಣ. ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಕಾರೊಂದು ಡಿಕ್ಕಿಯಾಗಿ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಏಪ್ರಿಲ್ 13ರಂದು ಸಂಭವಿಸಿದ್ದ ಭೀರಕ ರಸ್ತೆ ಅಪಘಾತದಲ್ಲಿ ಬರಟಗಿ ತಾಂಡಾದ ನಾಲ್ವರು ದುರ್ಮರಣಕ್ಕೀಡಾಗಿದ್ದರು.ಮೇ 7 : ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಲವು ಘಟಾನುಘಟಿಗಳು ಜಿಲ್ಲೆಗೆ ಬಂದು ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರಾಭವಗೊಂಡರು. ಬಿಜೆಪಿಯ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಜಯಪುರದಿಂದಲೇ ಸತತ 4ನೇ ಬಾರಿಗೆ ಎಂಪಿ ಆಗಿ ಹೊರಹೊಮ್ಮುವ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸಿದ್ದರು.ಮೇ.13: ಮೂವರು ಮಕ್ಕಳ ಸಾವು. ಮೇ 13ರಂದು ನಗರದ ಮನೆಯಿಂದ ಆಟವಾಡಲು ಹೋಗಿದ್ದ ಮೂವರು ಮಕ್ಕಳು ಮಹಾನಗರ ಪಾಲಿಕೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಬಿದ್ದು ಸಾವನ್ನಪ್ಪಿದ್ದರು ಇದರಿಂದ ಇಡೀ ನಗರವೇ ಬೆಚ್ಚಿ ಬಿದ್ದಿತ್ತು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೂಕ್ತ ಭದ್ರತೆ ಇಲ್ಲದ ಹಾಗೂ ಅಲ್ಲಿನ ಸೆಕ್ಯೂರಿಟಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು.ಜುಲೈ 2: ಕೊಲ್ಹಾರ ತೆಪ್ಪ ದುರಂತ. ಜುಲೈ 2ರಂದು ಕೊಲ್ಹಾರ ತಾಲೂಕಿನ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ದಾಟುತ್ತಿದ್ದ ವೇಳೆ ಐವರು ನೀರುಪಾಲಾಗಿದ್ದರು. ಅಂದು ಸಂಜೆ ಬಳೂತಿ ಜಾಕವೆಲ್ ಬಳಿಯಿಂದ ನಡುಗಡ್ಡೆಯ ಕಡೆಗೆ ತೆಪ್ಪದಲ್ಲಿ ತೆರಳುವಾಗ ತೆಪ್ಪ ಮುಳುಗಿದ ದುರಂತ ಘಟನೆ ನಡೆದಿದ್ದು, ಕೊಲ್ಹಾರದ ಐವರ ಪ್ರಾಣ ಹಾರಿಹೋಗಿತ್ತು.ಸೆಪ್ಟೆಂಬರ್‌ 23: ದಾಖಲೆ ಬರೆದ ಮಳೆ. ಬರದ ನಾಡು ಎಂದು ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತೆ ಸುರಿದ ಮಳೆ ದಾಖಲೆ ಮಾಡಿತ್ತು. ಈ ಮೊದಲು 2013ರಲ್ಲಿ 180ಮಿ.ಮೀ ಮಳೆ ಸುರಿದಿದ್ದರೆ ಕಳೆದ 34 ವರ್ಷಗಳಲ್ಲೇ ಅತಿಹೆಚ್ಚು ಅಂದರೆ 2024 ಸೆ.23ರಂದು 199 ಮಿ.ಮೀ ಮಳೆ ಸುರಿದು ಹೊಸ ದಾಖಲೆಯನ್ನೇ ಬರೆದಿದೆ.ಅಕ್ಟೋಬರ್‌ 20: ಫಿಶ್ ಟನಲ್‌ನಿಂದ ಬಿದ್ದು ಯುವತಿ ಸಾವು. ನವಭಾಗ ರಸ್ತೆಯಲ್ಲಿದ್ದ ಫಿಶ್ ಟನಲ್ ಎಕ್ಸ್‌ಪೋ ಗೆ ಬಂದಿದ್ದ ನಿಖಿತಾ ಬಿರಾದಾರ ಎಂಬ ಯುವತಿ ಸುನಾಮಿ ಎಂಬ ರೋಮಾಂಚನಕಾರಿ ಇವೆಂಟ್‌ನಿಂದ ಬಿದ್ದು ಅ.20ರಂದು ಮೃತಪಟ್ಟಿದ್ದಳು. ಈ ವೇಳೆ ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡು ಪಾಲಕರು ಗೋಳಾಡುತ್ತಿದ್ದರೆ, ಮೊಬೈಲ್‌ನಲ್ಲಿ ಯುವತಿಯ ಸಾವಿನ ದೃಶ್ಯ ಸೆರೆಯಾಗಿದ್ದನ್ನು ಕಂಡು ನಗರದ ಜನತೆ ಮಮ್ಮಲ ಮರುಗಿದ್ದರು.ನವೆಂಬರ್‌: ದೇಶ್ಯಾಂದ್ಯಂತ ಸಂಚಲನ ಸೃಷ್ಠಿಸಿದ್ದ ವಕ್ಫ್‌ ವಿವಾದ. 1974ರ ಗೆಜೆಟ್ ಪ್ರಕಾರ ರೈತರ ಆಸ್ತಿಗಳ ಪಹಣಿಯಲ್ಲಿ ವಕ್ಫ್‌ಬೋರ್ಡ್ ಎಂದು ನಮೂದಿಸಿದ್ದಕ್ಕೆ ವಿಜಯಪುರದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಈ ವಕ್ಫ್ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಮಧ್ಯ ಆರೋಪ ಪ್ರತ್ಯಾರೋಪಗಳ ಚರ್ಚೆಯಲ್ಲೇ ತಿಂಗಳಾನುಗಟ್ಟಲೇ ಸಮಯವೂ ವ್ಯರ್ಥವಾಗಿತ್ತು.ಡಿಸೆಂಬರ್‌ 6: ಕಾರು ಅವಘಡ ಐವರ ಸಾವು. ಡಿ.6ರಂದು ತಾಳಿಕೋಟೆ ತಾಲೂಕಿನ ಬಿಳೆಭಾವಿ ಕ್ರಾಸ್ ಬಳಿ ತೊಗರಿ ಕಟಾವು ಮಶಿನ್‌ಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ತಾಲೂಕಿನ ಅಲಿಯಾಬಾದ ಐವರು ನಿವಾಸಿಗಳು ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಯಾದಗಿರಿ ಜಿಲ್ಲೆಗೆ ಹೋಗಿ ವಾಪಸ್ಸು ಈ ದುರಂತ ನಡೆದಿತ್ತು.ಭಗವದ್ಗೀತಾ ಅಭಿಯಾನ: ಜಗತ್ತು ಅಪರಾಧದ ಕಡೆಗೆ ವಾಲುತ್ತಿರುವುದರಿಂದ ಅದನ್ನು ಬದಲಾಯಿಸುವ ಶಕ್ತಿ ಶ್ರೀ ಭಗವದ್ಗೀತಾಗೆ ಮಾತ್ರ ಇರುವುದರಿಂದ ಜಿಲ್ಲೆಯಲ್ಲಿ ನವ್ಹೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ ನಡೆಸಲಾಯಿತು. ಸೋಂದಾ ಸ್ವರ್ಣವಲ್ಲೀ ಗಂಗಾಧರೇಶ್ವರ ಶ್ರೀಗಳ ನೇತೃತ್ವದಲ್ಲಿ ಅಭಿಯಾನ ಜಿಲ್ಲೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಭಗವದ್ಗೀತಾ ಪುಸ್ತಕ ವಿತರಿಸಲಾಯಿತು.ಡಿ.22 ವೃಕ್ಷಥಾನ್ ಹೆರಿಟೇಜ್ ರನ್: ಜಿಲ್ಲಾಡಳಿತ, ಬಿಎಲ್‌ಡಿಇ, ಪರಿಸರ ಪ್ರೇಮಿಗಳ ಸಹಯೋಗದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್-2024 ಡಿ.22ರಂದು ಅದ್ಧೂರಿಯಾಗಿ ನಡೆಯಿತು. ನಗರದಲ್ಲಿ ಪರಿಸರ ಉಳಿಸಿ, ಬೆಳಿಸಿ ಅಭಿಯಾನದಲ್ಲಿ 10ಸಾವಿರಕ್ಕೂ ಅಧಿಕ ಯುವಕ, ಯುವತಿಯರು ಓಟದಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದ್ದರು. ಎಂ.ಬಿ.ಪಾಟೀಲರ ಮಹದಾಸೆಯಂತೆ ಹಸಿರು ವಿಜಯಪುರಕ್ಕಾಗಿ ಓಡು ವಿಜಯಪುರ ಓಡು ಯಶಸ್ವಿಯಾಗಿ ಜರುಗಿತು.ಡಿಸೆಂಬರ್‌ 29 ಕೆಪಿಎಸ್‌ಸಿ ಪರೀಕ್ಷಾ ಗೊಂದಲ: ಡಿ. 29ರಂದು ನಡೆದ ಕೆಪಿಎಸ್‌ಸಿ ನಡೆಸುವ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ, ಗ್ರೂಪ್ ಬಿ ಪರೀಕ್ಷೆಯಲ್ಲಿ ಒಎಂಆರ್‌ ಸೀಟ್ ಹಾಗೂ ನೋಂದಣಿ ಸಂಖ್ಯೆ ಸಿರೀಸ್ ಅದಲುಬದಲಾಗಿ ಮತ್ತೆ ಎಡವಟ್ಟು ನಡೆಯಿತು. ಈ ವೇಳೆ ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ಬಳಿಕ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಪರೀಕ್ಷೆ ಬರೆಯಿಸಿದರು.ಸಿದ್ದೇಶ್ವರ ಶ್ರೀಗಳ ಗುರುನಮನ: ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಗಳು ಪರಿಸರದಲ್ಲಿ ಲೀನವಾಗಿ ಎರಡು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಜ್ಞಾನಯೋಗಾಶ್ರಮದಲ್ಲಿ ಡಿ.25ರಿಂದ ಜನೆವರಿ 2ರ ವರೆಗೆ 9 ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಭಕ್ತರೊಂದಿಗೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಗುರುನಮನ ಸಲ್ಲಿಸಿದರು.

Share this article