ಕನ್ನಡಪ್ರಭ ವಾರ್ತೆ ಕಮಲನಗರ
ತಾಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಯಶಸ್ವಿಯಾಗಿ ರಾಜ್ಯ ಮಟ್ಟದಲ್ಲಿ ಗೆಲವು ಸಾಧಿಸಿ ಬರುವ ತಂಡಕ್ಕೆ 21000 ರು. ಬಹುಮಾನ ನೀಡಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ ಘೋಷಿಸಿದರು.ಅವರು ಕಮಲನಗರ ಪಟ್ಟಣದ ಮಹಾತ್ಮಾ ಗಾಂಧಿ ಶಾಲೆಯ ಮೈದಾನದಲ್ಲಿ ಜಿಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಮ್ಮಿಯಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿನ ಕ್ರೀಯಾಶೀಲತೆ ಕುಂದಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಇದಕ್ಕೆ ಅತೀಯಾದ ಮೊಬೈಲ್ ಬಳಕೆ ಕಾರಣವಾಗುತ್ತಿದೆ ಎಂದು ಶಾಸಕ ಚವ್ಹಾಣ ಕಳವಳ ವ್ಯಕ್ತ ಪಡಿಸಿದರು.
ನಮ್ಮ ತಾಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಸರಿಯಾದ ವೇದಿಕೆಗಳು ಸಿಗಬೇಕಾಗಿದೆ, ಈ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ ಎಂದು ಸಲಹೆ ನೀಡಿದರು.ವಲಯ ಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿದವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗುತ್ತಿರಿ, ಇಲ್ಲಿ ನಿಮ್ಮ ಪ್ರತಿಭೆ ಪ್ರದರ್ಶನ ಮಾಡಿ ಜಿಲ್ಲಾ, ರಾಜ್ಯ ಮಟ್ಟದ ವರೆಗೆ ಹೋಗಬೇಕು, ಪ್ರಶಸ್ತಿಗಾಗಿ ಸೆಣಸುವುದರ ಜೊತೆಗೆ ಕ್ರೀಡಾಸ್ಫೂರ್ತಿಯಿಂದ ಆಟವಾಡಿ ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಮಹೇಶ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ನಿಕಂಠರಾವ ಕಾಂಬಳೆ, ಮಾಲುಜಿ ಶಿಂಧೆ , ಜೊಯಲ್ ಜಯರಾಜ, ಶಿವಾಜಿ ಬೆಂಜರವಾಡೆ, ಪಿ.ಡಿ.ಒ ರಾಜಕುಮಾರ ತಂಬಾಕೆ, ಪ್ರಿನ್ಸಿಪಾಲ ಡಾ.ಬಿ.ಆರ್. ಅಂಬೆಡ್ಕರ್ ವಸತಿ ನಿಲಯ ಕಮಲನಗರ ರಾಜೆಂದ್ರ ನಿಟ್ಟುರೆ, ಚನ್ನಬಸವ ಘಾಳೆ, ಸೂರ್ಯಕಾಂತ ಬಿರಾದಾರ, ಬಸವರಾಜ ಪಾಟೀಲ್, ರಮೇಶ ಬಿರಾದಾರ, ಸಂಗೀತಾ ಸಜ್ಜನಶೇಟ್ಟಿ, ಗ್ರಾಮದ ಮುಖಂಡರಾದ ಶಿವಾನಂದ ವಡ್ಡೆ, ಶಿವರಾಜ ಝುಲ್ಫೆ, ಮುಖ್ಯಗುರು ಮಡಿವಾಳಪ್ಪಾ ಮಹಾಜನ, ಮಹಾದೇವ ಮಡಿವಾಳ, ಕ್ರೀಡಾ ಕೂಟದ ಆಯೋಜಕರಾದ ಕಂಟೆಪ್ಪಾ ಭವರಾ ಸೇರಿದಂತೆ ಇನ್ನಿತರರು ಇದ್ದರು.ಕಮಲನಗರ ಹೋಬಳಿಯಲ್ಲಿ 18 ತಂಡಗಳಿದ್ದು, ಖೋಖೋ, ಕಬಡ್ಡಿ, ಲಾಂಗ ಜಂಪ್, ಹೈ ಜಂಪ್, ರನ್ನಿಂಗ್, ಮುಂತಾದ ಆಟಗಳು ಸ್ಪರ್ಧೆಗಳ ಏರ್ಪಡಿಸಲಾಗಿತ್ತು.