ಸವಣೂರು: ಕ್ಷೇತ್ರದಲ್ಲಿ ಅವಕಾಶ ದೊರೆತರೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ನೀಡಿದ್ದ ಮಾತಿನಂತೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶೀರ್ವಾದದಿಂದ ಕ್ಷೇತ್ರದಲ್ಲಿ 21 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿರುವುದಾಗಿ ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಹೇಳಿದರು.
ಸವಣೂರಿಗೆ ಮಹಿಳಾ ಕಾಲೇಜು, ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ಹಾಗೂ ಮಾದಾಪುರದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಆರಂಭಿಸಲಾಗುವದು ಎಂದು ಪ್ರತಿಜ್ಞೆ ಮಾಡಿರುವಂತೆ ಈ ಎಲ್ಲ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಸರ್ಕಾರದ ಪಂಚ ಗ್ಯಾರಂಟಿಗಳು, ಕೆಪಿಎಸ್ ಶಾಲೆಗಳು ಹಾಗೂ 8 ಸಾವಿರ ಹಕ್ಕುಪತ್ರ ವಿತರಣೆಯಲ್ಲಿ ಜಾತಿ-ಧರ್ಮದ ಭೇದ ಮಾಡಿಲ್ಲ ಎಂದ ಶಾಸಕರು, ಹುರುಳಿಕುಪ್ಪಿ ಗ್ರಾಮವು ಸರ್ವಧರ್ಮ ಸಮನ್ವಯದ ಮಾದರಿ ಗ್ರಾಮವಾಗಿದ್ದು, ಉರ್ದು ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಪರಿವರ್ತಿಸಬೇಕೆಂಬ ಗ್ರಾಮಸ್ಥರ ಆಶಯ ಶ್ಲಾಘನೀಯ ಎಂದು ಬಣ್ಣಿಸಿದರು. ಗ್ರಾಮದಲ್ಲಿ 30 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಂಜನೇಯ ದೇವಸ್ಥಾನದ ಕಾಮಗಾರಿ ಭಕ್ತರ ಸಹಕಾರದಿಂದ ಮುಂದುವರಿದಿದೆ ಎಂದ ಅವರು, ಕ್ರೀಡಾಪಟುಗಳ ಗ್ರಾಮ ಎಂದೇ ಗುರುತಿಸಿಕೊಂಡಿರುವ ಹುರುಳಿಕುಪ್ಪಿಗೆ ಕ್ರೀಡಾಂಗಣ ನಿರ್ಮಿಸಲು ಮನವಿ ಸಲ್ಲಿಸುವುದಾಗಿ ಹೇಳಿದರು. ಹಾವೇರಿ ಜಿಲ್ಲೆಯನ್ನು ಶಿಕ್ಷಣದ ಕಾಶಿಯನ್ನಾಗಿಸುವ ಗುರಿ ಹೊಂದಿದ್ದು, ಪ್ರಜಾಸೇವಾ ಮೂಲಕ ಜನತಾ ದರ್ಶನ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.ಅಂಗನವಾಡಿ ಹಾಗೂ ಶಾಲಾ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ, ಹಾವೇರಿ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಈ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎನ್ನಲಾಗುತ್ತಿತ್ತು. ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕರ್ಜಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಕ್ಕಳ ಪ್ರವೇಶಕ್ಕಾಗಿ ಪಾಲಕರಿಂದ ವ್ಯಕ್ತವಾಗುತ್ತಿರುವ ಭಾರಿ ಬೇಡಿಕೆಯೇ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಎಂದು, ಬಡವರು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು, ಅದಕ್ಕಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಸಚಿವರು, ಶಿಕ್ಷಣದಿಂದಲೇ ತಾವು ಜನಸೇವೆ ಮಾಡಲು ಸಾಧ್ಯವಾಗಿದೆ ಎಂದು ತಮ್ಮ ಸ್ವಂತ ಅನುಭವ ಹಂಚಿಕೊಂಡರು. ತಮ್ಮ ಕ್ಷೇತ್ರದಲ್ಲಿ ಲಾ, ಬಿ.ಎಡ್., ಡಿ.ಎಡ್. ಮತ್ತು ಸೈನ್ಸ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 4 ಸಾವಿರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು. ಸರ್ಕಾರಿ ಭೂಮಿಯನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಸರ್ವೆ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಕೋರುವುದಾಗಿ ಭರವಸೆ ನೀಡಿದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಯ್ಯ ಶಾಸ್ತ್ರಿಗಳು ಮತ್ತು ಪಂಚಯ್ಯ ಹಿರೇಮಠ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎರಡು ಅಂಗನವಾಡಿ ಕಟ್ಟಡಗಳು ಹಾಗೂ ಶಿಕ್ಷಣ ಇಲಾಖೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಸೇರಿದಂತೆ ಒಟ್ಟು ಮೂರು ನೂತನ ಕಟ್ಟಡಗಳನ್ನು ಶಾಸಕ ಯಾಶೀರಖಾನ ಪಠಾಣ ಉದ್ಘಾಟಿಸಿದರು.