ಕೆಆರ್‌ಐಡಿಎಲ್‌ ನಿರ್ಲಕ್ಷ್ಯದಿಂದ 21 ಶಾಲಾ ಕೊಠಡಿಗಳು ಅಪೂರ್ಣ

KannadaprabhaNewsNetwork | Published : Jul 17, 2024 12:56 AM
Follow Us

ಸಾರಾಂಶ

ಕಣವಿಹಳ್ಳಿಯಲ್ಲಿ 6, ಶೃಂಗಾರತೋಟ- 3, ಬಾಗಳಿ -3, ಹೊಂಬಳಗಟ್ಟಿ -3, ತಾವರಗೊಂದಿ -1, ನಿಚ್ಚವನಹಳ್ಳಿ -1, ದುಗ್ಗಾವತ್ತಿ -2, ಅಣಮೇಗಳತಾಂಡಾ-1, ಹೊನ್ನೇನಹಳ್ಳಿ -1 ಹೀಗೆ 21 ಶಾಲಾ ಕೊಠಡಿಗಳ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿಂದ ಕೈಗೊಂಡ 21 ಶಾಲಾ ಕೊಠಡಿಗಳ ಕಾಮಗಾರಿ ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಂಟಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ತಲಾ ₹10.6 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಕೆಆರ್‌ಐಡಿಎಲ್‌ಗೆ ವಹಿಸಲಾಗಿತ್ತು.

ಕಣವಿಹಳ್ಳಿಯಲ್ಲಿ 6, ಶೃಂಗಾರತೋಟ- 3, ಬಾಗಳಿ -3, ಹೊಂಬಳಗಟ್ಟಿ -3, ತಾವರಗೊಂದಿ -1, ನಿಚ್ಚವನಹಳ್ಳಿ -1, ದುಗ್ಗಾವತ್ತಿ -2, ಅಣಮೇಗಳತಾಂಡಾ-1, ಹೊನ್ನೇನಹಳ್ಳಿ -1 ಹೀಗೆ 21 ಶಾಲಾ ಕೊಠಡಿಗಳ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ.

ಈಗಲೂ ಕಾಮಗಾರಿ ಪುನರಾರಂಭವಾಗುತ್ತಿಲ್ಲ. ಇದರಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಲ್ಲಿದೆ. ಸದ್ಯ ಮಳೆಗಾಲವಿರುವುದರಿಂದ ಇನ್ನೂ ಸಮಸ್ಯೆ ಹೆಚ್ಚಾಗುತ್ತಲಿದೆ.

ಇದರಿಂದ ಪೋಷಕರು, ಶಿಕ್ಷಕರು, ಜನಪ್ರತಿನಿಧಿಗಳು ಬೇಸತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ತ್ವರಿತ ಕಾಮಗಾರಿ ಪೂರ್ಣಗೊಳಿಸಿ ಎಂದು ಒತ್ತಾಯಿಸುತ್ತಿದ್ದರೂ ಕೆಆರ್‌ಐಡಿಎಲ್‌ ನವರು ಗಮನ ಕೊಡುತ್ತಿಲ್ಲ.

ಇಷ್ಟೊಂದು ಕಾಮಗಾರಿ ಬಾಕಿ ಇರುವುದರಿಂದ ಹೊಸ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ಕೊಟ್ಟಿಲ್ಲ.

ಸ್ಥಳಾಂತರಕ್ಕೆ ಚಿಂತನೆ

ಹೊಸ ಕಾಮಗಾರಿಗಳು ಸಿಗದ ಕಾರಣ ಕೆಆರ್‌ಐಡಿಎಲ್‌ ಇಲ್ಲಿಯ ಉಪವಿಭಾಗದ ಕಚೇರಿಯನ್ನು ರದ್ದುಗೊಳಿಸಿ ಹೂವಿನ ಹಡಗಲಿ ಕಚೇರಿಗೆ ವಿಲೀನಗೊಳಿಸಲು ಈ ಸಂಸ್ಥೆಯ ಮೇಲಧಿಕಾರಿಗಳು ವ್ಯವಸ್ಥಾಪಕ ನಿರ್ದೆಶಕರಿಗೆ ಪತ್ರ ಬರೆದಿದ್ದಾರೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಈ ಹಿಂದೆ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿ ಹೊಸಪೇಟೆಗೆ ಸ್ಥಳಾಂತರಗೊಂಡಿತ್ತು, ಕೆಆರ್‌ಐಡಿಎಲ್‌ ಸಹ ಸ್ಥಳಾಂತರ ಗೊಂಡರೆ ಪುನಃ ಇಲ್ಲಿಗೆ ಮಂಜೂರಾತಿ ಆಗುವುದು ಕಷ್ಟದ ಕೆಲಸ. ಆದ್ದರಿಂದ ಈಗ ಅಪೂರ್ಣಗೊಂಡಿರುವ ಶಾಲಾ ಕೊಠಡಿಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಹೊಸ ಕಾಮಗಾರಿಯನ್ನು ಪಡೆದು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಂಡರೆ ಹರಪನಹಳ್ಳಿಗೂ ಕ್ಷೇಮ, ಅಧಿಕಾರಿ ವರ್ಗಕ್ಕೂ ಕ್ಷೇಮ. ಆದ್ದರಿಂದ, ಕೆಆರ್‌ಐಡಿಎಲ್‌ ಅಧಿಕಾರಿಗಳು ಈ ಕುರಿತು ತ್ವರಿತವಾಗಿ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಅನುದಾನ ಕೊರತೆ

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಬಾಕಿ ಅನುದಾನ ಬರಬೇಕಿದೆ, ಅನುದಾನದ ಕೊರತೆಯಿಂದ ಶಾಲಾ ಕೊಠಡಿಗಳ ಕಾಮಗಾರಿ ಸ್ಥಗಿತಗೊಂಡಿವೆ. ಈ ಬಗ್ಗೆ ನಮ್ಮ ಎಂ.ಡಿ. ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಬಳಿ ಚರ್ಚೆ ಆಗಿದೆ, ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದೇವೆ.

ಪಿ. ದಾವೂದ್‌ ಭಾಷಾ, ಪ್ರಭಾರಿ ಎಇಇ, ಕೆಆರ್‌ ಐಡಿಎಲ್‌, ಹರಪನಹಳ್ಳಿ ಪೂರ್ಣಗೊಳಿಸಲಿ

ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಕೊಠಡಿಗಳಂತಹ ಮೂಲ ಸೌಕರ್ಯ ಅತ್ಯಗತ್ಯ, ಆದ್ದರಿಂದ ನಿರ್ಲಕ್ಷ್ಯ ವಹಿಸದೆ ಕೆಆರ್‌ ಐಡಿಎಲ್‌ ನವರು ಶಾಲಾ ಕೊಠಡಿಗಳನ್ನು ಬೇಗ ಪೂರ್ಣಗೊಳಿಸಬೇಕು.

ಬಸವರಾಜ ಸಂಗಪ್ಪನವರ, ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾದ್ಯಕ್ಷ , ಹರಪನಹಳ್ಳಿ