ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆ ಜಾರಿಗಾಗಿ ಹುಡ್ಕೋ (ಹೌಸಿಂಗ್ ಅಂಡ್ ಅರ್ಬನ್ ಡೆವಲಪ್ ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ) 21 ಸಾವಿರ ಕೋಟಿ ಸಾಲ ನೀಡಲು ಮುಂದಾಗಿದೆ.
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಬೆನ್ನ ಹಿಂದೆಯೇ ಹುಡ್ಕೋ 21 ಸಾವಿರ ಕೋಟಿ ಸಾಲಸೌಲಭ್ಯ ಒದಗಿಸಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.ಕಳೆದ ಎರಡು ದಶಕಗಳಿಂದಾಗಿ ಟೌನ್ ಶಿಪ್ ಯೋಜನೆ ಸ್ಥಗಿತಗೊಂಡಿತ್ತು. ಇದೀಗ ಹುಡ್ಕೋದ ಸಾಲವನ್ನು ಭೂ ಸ್ವಾಧೀನ ಹಾಗೂ ಮೂಲಸೌಕರ್ಯ ಕಲ್ಪಿಸಲು ಬಳಸಿಕೊಂಡು ಟೌನ್ ಶಿಪ್ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಸಹಕಾರಿಯಾಗಲಿದೆ.
ಈಗಾಗಲೇ ಹುಡ್ಕೋ 74 ಕಿ.ಮೀ. ಉದ್ದದ ಬೆಂಗಳೂರು ಫೆರಿಫರಲ್ ವರ್ತುಲ ರಸ್ತೆಗೆ ಶೇಕಡ 9ರ ಬಡ್ಡಿ ದರದಲ್ಲಿ 27 ಸಾವಿರ ಕೋಟಿ ಸಾಲ ನೀಡಲು ಒಪ್ಪಿಕೊಂಡಿತ್ತು. ಇದೀಗ ಟೌನ್ ಶಿಪ್ ನಿರ್ಮಾಣಕ್ಕೂ 21 ಸಾವಿರ ಕೋಟಿ ಸಾಲ ಒದಗಿಸಲು ಮುಂದಾಗಿದೆ.ಟೌನ್ ಶಿಪ್ ಗಾಗಿ 2014ರ ಭೂ ಸ್ವಾಧೀನ ಕಾಯ್ದೆ ಅನುಸಾರ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಸುಮಾರು 10 ಸಾವಿರ ಕೋಟಿ ರುಪಾಯಿ ಖರ್ಚಾಗುವ ಸಾಧ್ಯತೆಗಳಿವೆ. ಭೂ ಮಾಲೀಕರು ಹಣದ ಬದಲಾಗಿ ನಿವೇಶನ ಕೇಳಿದರೆ ಮೌಲ್ಯದಲ್ಲಿ ಏರುಪೇರು ಆಗಬಹುದು.
ಬಿಡದಿ ಟೌನ್ ಶಿಪ್ ನಿರ್ಮಾಣ ಮಾತ್ರವಲ್ಲದೆ ಅಕ್ಕಪಕ್ಕದ ಪ್ರದೇಶಗಳನ್ನು ಸಂಪೂರ್ಣವಾಗಿ ಅಭಿವೃದ್ದಿ ಪಡಿಸುವ ಸಲುವಾಗಿಯೇ ಕಳೆದ ನವೆಂಬರ್ ನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಯಿತು.ಈಗ ಟೌನ್ ಶಿಪ್ ಗಾಗಿ ಗುರುತಿಸಿರುವ ಭೂಮಿಯಲ್ಲಿ 2 ಸಾವಿರ ಎಕರೆ ಸರ್ಕಾರಿ ಹಾಗೂ 7291 ಎಕರೆ ಖಾಸಗಿ ಜಮೀನಿದೆ. ಈಗಾಗಲೇ 10,450 ಭೂ ಮಾಲೀಕರ 7291 ಎಕರೆ ಖಾಸಗಿ ಜಮೀನನ್ನು ವಶ ಪಡಿಸಿಕೊಳ್ಳಲು ಪ್ರಾಥಮಿಕ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದೆ.
ಉಳಿದ 2 ಸಾವಿರ ಎಕರೆ ಸರ್ಕಾರಿ ಭೂಮಿ ಯಾವ ಇಲಾಖೆಗಳಿಗೆ ಸೇರಿದಿಯೋ ಅದನ್ನು ಶೇಕಡ50ರಷ್ಟು ಸರ್ಕಾರಿ ದರವನ್ನು ಸಂಬಂಧಿಸಿದ ಇಲಾಖೆಗಳಿಗೆ ಸಂದಾಯ ಮಾಡಲು ನಿರ್ಧರಿಸಲಾಗಿದೆ.
ಕಳೆದ 9 ತಿಂಗಳಲ್ಲಿ ಟೌನ್ ಶಿಪ್ ಗಾಗಿ ಸ್ವಾಧೀನ ಪಡಿಸಿಕೊಳ್ಳಲಿರುವ ಭೂಮಿಯ ಡ್ರೋನ್ ಸರ್ವೆ ಮಾಡಲಾಗಿದೆ. ಜಮೀನಿನ ಮಾಲೀಕರು ಹಾಗೂ ಜಮೀನುಗಳಲ್ಲಿರುವ ಮರಗಳನ್ನು ಗುರುತಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಒಂದು ವರ್ಷದಲ್ಲಿ ಮುಗಿಸುವ ಜೊತೆಗೆ 30 ಸಾವಿರ ಎಕರೆಯನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿ ಪಡಿಸಲು , ರಸ್ತೆ ಸಂಪರ್ಕ ಕಲ್ಪಿಸಲು ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ ಎಂದು ಪ್ರಾಧಿಕಾರದ ಆಯುಕ್ತ ಪಿ.ರಾಜೇಂದ್ರ ಚೋಳನ್ ಪ್ರತಿಕ್ರಿಯೆ ನೀಡಿದ್ದಾರೆ.ಬಾಕ್ಸ್ ..........
ಬಿಡದಿ ಟೌನ್ ಶಿಪ್ ಬೆಂಗಳೂರುನಿಂದ 25 ಕಿ.ಮೀ ದೂರದಲ್ಲಿದೆ. ಈ ಟೌನ್ ಶಿಪ್ 5 ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖವಾಗಿ ಕನಕಪುರ, ಮೈಸೂರು, ನೈಸ್ , ಎಸ್ ಟಿಆರ್ ಆರ್ ರಿಂಗ್ ರಸ್ತೆ , ಫೆರಿಫರಲ್ ರಿಂಗ್ ರಸ್ತೆ (ಪಿಆರ್ ಆರ್) ರಸ್ತೆಗಳಿಂದ ಟೌನ್ ಶಿಪ್ ಗೆ ಸಂಪರ್ಕ ಕಲ್ಪಿಸ ಬಹುದಾಗಿದೆ.ಎರನಡೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಿರುವ ಮೂರು ಸ್ಥಳಗಳ ಪೈಕಿ ಎರಡು ಸ್ಥಳಗಳು ಟೌನ್ ಶಿಪ್ ಹತ್ತಿರವಾಗಿವೆ. ಹಾಗೊಂದು ವೇಳೆ ಟೌನ್ ಶಿಪ್ ನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಿದಲ್ಲಿ ಬೆಂಗಳೂರಿನಲ್ಲಿರುವ ಐಟಿಬಿಟಿಯಂತಹ ಅನೇಕ ಕಂಪನಿಗಳು ಅಲ್ಲಿ ಸ್ಥಾಪನೆ ಮಾಡಲು ಉತ್ತೇಜನೆ ನೀಡಿದಂತಾಗಿದೆ.
27ಕೆಆರ್ ಎಂಎನ್ 15.ಜೆಪಿಜಿಟೌನ್ ಶಿಪ್ ನಕ್ಷೆ.