ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಕನಕಗಿರಿ
ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ₹೨೧೦ ಕೋಟಿ ಬಿಡುಗಡೆಯಾಗಿದ್ದು, ವಾರದೊಳಗಾಗಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕು ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ತಾಂಡಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕ್ಷೇತ್ರಕ್ಕೆ ₹೩೪ ಕೋಟಿ, ಪಂಚಾಯತ್ ರಾಜ್ ಇಲಾಖೆಯಡಿ ₹೨೦ ಕೋಟಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ₹೩೫ ಕೋಟಿ, ಚರ್ಚಿನಗುಡ್ಡ ಕ್ರಾಸ್‌ನಿಂದ ವಡಕಿ-ಕನಕಗಿರಿಯವರೆಗಿನ ರಸ್ತೆ ಅಭಿವೃದ್ಧಿಗೆ ₹೨೫ ಕೋಟಿ, ಲೋಕೋಪಯೋಗಿ ಇಲಾಖೆಯಿಂದ ₹೧೫ ಕೋಟಿ ರಸ್ತೆ ಅಭಿವೃದ್ಧಿ ಹಾಗೂ ಸುಧಾರಣೆಗಾಗಿ ಮಂಜೂರಾಗಿದ್ದು, ಟೆಂಡರ್ ಮುಗಿದ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಅಲ್ಲದೇ ತಾಲೂಕಿನ ಇಂಗಳದಾಳ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ₹೧೩.೬೭ ಲಕ್ಷ, ಮುಸಲಾಪೂರ ಗ್ರಾಮದ ಭೋವಿ ಕಾಲನಿಯಲ್ಲಿ ಸಿಸಿರಸ್ತೆ ಅಭಿವೃದ್ಧಿಗೆ ₹೨೧.೦೭ ಲಕ್ಷ ಹಾಗೂ ಬೊಮ್ಮಸಾಗರ ತಾಂಡಾದ ಸಿಸಿ ರಸ್ತೆ ನಿರ್ಮಾಣಕ್ಕೆ ₹೨೧.೦೭ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಇಲ್ಲವಾದರೆ ಕಪ್ಪು ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.ತಹಸೀಲ್ದಾರ ವಿಶ್ವನಾಥ ಮುರುಡಿ, ಪಿಡಿಒ ನಾಗೇಶ ಪೂಜಾರ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಸಿದ್ದಪ್ಪ ನಿರ್ಲೂಟಿ, ರಮೇಶ ನಾಯಕ ಹುಲಿಹೈದರ, ಬಸವಂತಗೌಡ ಚಿಕ್ಕಮಾದಿನಾಳ, ಶಾಂತಪ್ಪ ಬಸರಿಗಿಡ, ಹನುಮೇಶ ಹಡಪದ, ಸತ್ಯಪ್ಪ ಭೋವಿ, ವಿರೂಪಾಕ್ಷ ಆಂದ್ರ, ಪಂಪಾಪತಿ ತರ್ಲಕಟ್ಟಿ, ಶರಣಪ್ಪ ಸೋಮಸಾಗರ, ಮೌನೇಶತಾತ ಹಿರೇಮಾದಿನಾಳ ಸೇರಿದಂತೆ ಇತರರಿದ್ದರು.ಮೃತ ಗ್ರಾಪಂ ನೌಕರ ಮನೆಗೆ ಭೇಟಿ:ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತಾಲೂಕಿನ ಗೌರಿಪುರ ಗ್ರಾಪಂ ನೌಕರ ವಿಜಯಕುಮಾರ ನಿವಾಸಕ್ಕೆ ಸಚಿವ ತಂಗಡಗಿ ಭೇಟಿ ನೀಡಿ ಸಾಂತ್ವನ ಹೇಳಿದರು. ವಿಜಯ್ ಪತ್ನಿಗೆ ಗ್ರಾಪಂ ಕಚೇರಿಯಲ್ಲಿ ಕೆಲಸ ನೀಡಲು ಕ್ರಮ ಕೈಗೊಳ್ಳುವಂತೆ ತಾಪಂ ಇಒ ರಾಜಶೇಖರಗೆ ಸೂಚಿಸಿದರು. ಮೃತ ನೌಕರನ ಸಹೋದರಿಗೂ ಅಂಗನವಾಡಿ ಅಥವಾ ಗಣಕಯಂತ್ರ ಹುದ್ದೆ ನೀಡಲು ತಹಸೀಲ್ದಾರಗೆ ಸೂಚನೆ ನೀಡಿದರು.