215 ಪೌರಕಾರ್ಮಿಕರ ನೇಮಕಾತಿ ಅಧಿಸೂಚನೆಯಲ್ಲಿ ಲೋಪ

KannadaprabhaNewsNetwork |  
Published : Nov 07, 2026, 02:15 AM IST
ಅಂಚಟಗೇರಿ | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 215 ಪೌರಕಾರ್ಮಿಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನ. 2ರಂದು ಪ್ರಕಟಿಸಿರುವ ಅಧಿಸೂಚನೆಯಲ್ಲಿ ಹಲವು ಲೋಪದೋಷಗಳಿದ್ದು, ಅವುಗಳನ್ನು ತಕ್ಷಣ ಸರಿಪಡಿಸಿ ಪರಿಷ್ಕೃತ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 215 ಪೌರಕಾರ್ಮಿಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನ. 2ರಂದು ಪ್ರಕಟಿಸಿರುವ ಅಧಿಸೂಚನೆಯಲ್ಲಿ ಹಲವು ಲೋಪದೋಷಗಳಿದ್ದು, ಅವುಗಳನ್ನು ತಕ್ಷಣ ಸರಿಪಡಿಸಿ ಪರಿಷ್ಕೃತ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಆಗ್ರಹಿಸಿದ್ದಾರೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಸರ್ವ ಸಮಾಜದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿರುವ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ದೊರೆಯಬೇಕು. ನೇಮಕಾತಿ ಸಂಪೂರ್ಣ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ತಿಳಿಸಿದ್ದಾರೆ.

ಪ್ರಸ್ತುತ ಅಧಿಸೂಚನೆಯಲ್ಲಿ ಎರಡು ವರ್ಷಗಳ ಅನುಭವ ಕಡ್ಡಾಯಗೊಳಿಸಿರುವುದು ಇದೇ ಮೊದಲ ಬಾರಿಗೆ. ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ನಿರುದ್ಯೋಗಿ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಷರತ್ತನ್ನು ಮರುಪರಿಶೀಲಿಸಿ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಅದೇ ರೀತಿ, ಅಧಿಸೂಚನೆಯಲ್ಲಿ ಕನಿಷ್ಠ ವಿದ್ಯಾರ್ಹತೆ ಸ್ಪಷ್ಟವಾಗಿ ನಮೂದಿಸಿಲ್ಲ. ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವುದನ್ನು ವಿದ್ಯಾರ್ಹತೆಯ ಮಾನದಂಡವಾಗಿ ಪರಿಗಣಿಸಿ ಸ್ಪಷ್ಟಪಡಿಸಬೇಕು. ಪ್ರಕಟಿತ ಮೀಸಲಾತಿ ರೋಸ್ಟರ್ ಪಟ್ಟಿಯನ್ನು ಸರ್ಕಾರದ ಮೀಸಲಾತಿ ನಿಯಮಗಳು ಹಾಗೂ ರೋಸ್ಟರ್ ಬಿಂದುಗಳಿಗೆ ಅನುಗುಣವಾಗಿ ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸರ್ವ ಸಮಾಜದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯಯುತ ಉದ್ಯೋಗಾವಕಾಶ ದೊರೆಯಬೇಕು. ಯಾವುದೇ ಅನಗತ್ಯ ಷರತ್ತುಗಳಿಂದ ಅರ್ಹರು ಉದ್ಯೋಗಾವಕಾಶದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಡಳಿತವು ಮನವಿಯನ್ನು ಗಂಭೀರವಾಗಿ ಪರಿಗಣಿಸಿದು ಸೂಕ್ತ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ