21ರಂದು ನವಲಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ

KannadaprabhaNewsNetwork |  
Published : Jul 13, 2024, 01:35 AM IST
ಪೋಟೊ: 12ಎಸ್ಎಂಜಿಕೆಪಿ03ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. | Kannada Prabha

ಸಾರಾಂಶ

ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಬರಗಾಲ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜು.21ರಂದು ಧಾರವಾಡ ಜಿಲ್ಲೆ ನವಲಗುಂದದಲ್ಲಿ ರೈತ ಸಂಘದಿಂದ 44ನೇ ರೈತ ಹುತಾತ್ಮ ದಿನಾಚರಣೆ ಆಯೋಜಿಸಲಾಗಿದ್ದು, ಅಂದು ರೈತರ ಸಮಸ್ಯೆಗಳ ಕುರಿತು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳು ಸಾಕಷ್ಟಿವೆ. ಪ್ರಮುಖವಾಗಿವೆ. ಉತ್ತರ ಕರ್ನಾಟಕ ಭಾಗದ ರೈತರ ನೀರಾವರಿ ಮಹಾದಾಯಿ ಯೋಜನೆ ಎರಡು ದಶಕಗಳು ಕಳೆದರು ಜಾರಿಯಾಗಿಲ್ಲ. ಈ ಯೋಜನೆಯನ್ನು ವಿಶೇಷವಾಗಿ ಪರಿಗಣಿಸಿ ಕೂಡಲೇ ಸರ್ಕಾರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಅದೇಕೋ ತೆಗೆದುಕೊಂಡಿಲ್ಲವೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈ ಮೊದಲು ಮಾತುಕೊಟ್ಟಂತೆ ಮೂರು ಕೃಷಿ ಕಾಯ್ದೆ ಕೂಡಲೇ ವಾಪಾಸ್ಸು ತೆಗೆದುಕೊಳ್ಳಬೇಕು, ರೈತರಲ್ಲದ ಖಾಸಗಿ ವ್ಯಕ್ತಿಗಳು ರೈತರ ಜಮೀನುಗಳನ್ನು ಕೊಂಡರೇ ಮುಂದೆ ಕೃಷಿಯೇ ನಿಂತುಹೋಗಬಹುದಾದ ಅಪಾಯವಿದೆ ಎಂದು ಹೇಳಿದರು.

ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಬರಗಾಲ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಕನಿಷ್ಟ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಇನ್ನೂ ಶಾಸನಬದ್ಧಗೊಳಿಸಿಲ್ಲ. ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ಕೆಲವು ಬ್ಯಾಂಕ್‍ಗಳು ಹಾಲಿನ ಸಹಾಯ ಧನ, ಬರಪರಿಹಾರ, ವಿಧವಾ ವೇತನ, ಪಿ.ಎಂ.ಕಿಸಾನ್ ಹಣ ಇವೆಲ್ಲವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದು ದೂರಿದರು.

ಇದರ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರೈತರ ಪಹಣಿ, ಮುಟೇಶನ್, ಸರ್ವೇ ಹದ್ದು ಬಸ್ತು, ಪೋಡಿ, ಸ್ಟ್ಯಾಂಡ್ ಡ್ಯೂಟಿ ಮುಂತಾದವುಗಳ ಮೇಲೆ ತೆರಿಗೆ ಹೆಚ್ಚಿಸಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತರ ಈ ಎಲ್ಲಾ ಸಮಸ್ಯೆಗಳನ್ನು ರೈತ ಹುತಾತ್ಮ ದಿನಾಚರಣೆಯಂದು ಚರ್ಚಿಸಲಾಗುವುದು ಮತ್ತು ಮುಂದಿನ ಹೋರಾಟವನ್ನು ಅಲ್ಲಿ ನಿರ್ಧರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಜ್ಞಾನೇಶ್, ಜಗದೀಶ್, ಇಟ್ಟೂರು ರಾಜು, ಸಿ.ಚಂದ್ರಪ್ಪ, ಹಾರ್ನಹಳ್ಳಿ ರುದ್ರೇಶ್ ಮುಂತಾದವರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌