- ಅಫಜಲ್ಪುರ ತಾಲೂಕಿನಲ್ಲಿ ಶೇ.76.8ರಷ್ಟು ಬಿತ್ತನೆ ಪೂರ್ಣ
ಕನ್ನಡಪ್ರಭ ವಾರ್ತೆ ಅಫಜಲ್ಪುರತಾಲೂಕಿನಲ್ಲಿ ಹದವಾಗಿ ಸುರಿಯುತ್ತಿರುವ ಮಳೆ ಬೆಳೆಗಳಿಗೆ ಪೂರಕವಾಗಿದ್ದು, ಮುಂಗಾರು ಹಂಗಾಮಿನಲ್ಲಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು, ಉತ್ತಮ ಹವಾಮಾನದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ತಾಲೂಕಿನ ಶೇ.76.8ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಉದ್ದು, ಹೆಸರು, ತೊಗರಿ, ಹತ್ತಿ, ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಕಳೆ ಕೀಳುವ ಮತ್ತು ಎಡೆ ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.ಮಣ್ಣೂರ, ರಾಮನಗರ, ಶಿವೂರ, ಕುಡಗನೂರ, ಬಾಬಾನಗರ, ದಯಾನಂದನಗರ, ಕರಜಗಿ, ಮಾಶಾಳ, ನಂದರ್ಗಾ, ದಿಕ್ಸಂಗಾ, ತೆಲ್ಲೂಣಗಿ, ಹಿರೇಜೇವರ್ಗಿ, ಭಂಕಲಗಾ, ಅಳ್ಳಗಿ ಬಿ, ಭೋಸಗಾ, ದುದ್ದುಣಗಿ, ಮಂಗಳೂರ, ಹಿರಿಯಾಳ, ಉಡಚಣ, ಅಫಜಲ್ಪುರ, ಅತನೂರ, ಚವಡಾಪುರ, ದೇವಲ ಗಾಣಗಾಪುರ, ಘತ್ತರಗಾ, ಇಂಚಗೇರಾ, ಹವಳಗಾ, ಬಳೂರ್ಗಿ, ಬಡದಾಳ, ರೇವೂರ ಬಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ
ಬೆಳೆಗಳು ಹುಲುಸಾಗಿ ಬೆಳೆಯುತ್ತಿವೆ. ಅಲ್ಲಲ್ಲಿ ಹೆಸರು ಬೆಳೆಗೆ ಕೀಟಗಳ ಉಪಟಳ ಆರಂಭವಾಗಿದೆ ಎಂದು ತಾಲೂಕಿನ ರೈತರು ತಿಳಿಸಿದರು.ಬೆಳೆ ವಿಮೆ ನೋಂದಣಿಗೆ ಸಲಹೆ:
ರೈತರು ಬೆಳೆ ನೋಂದಣಿ ಮಾಡಿಸಬೇಕು. ಪ್ರಕೃತಿ ವಿಕೋಪಗಳಿಂದ ಬೆಳೆ ಕೈಗೆಟುಕದೆ ಹೋದರೆ, ವಿಮಾ ಕಂಪನಿ ರೈತರಿಗೆ ಪರಿಹಾರ ನೀಡುತ್ತದೆ. ರೈತರು ಬೆಳೆ ವಿಮೆ ನೋಂದಣಿಗೆ ಎಫ್‌ಐಡಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಬೆಳೆ ವಿಮೆ ನೋಂದಣಿಗೆ ಸೂರ್ಯಕಾಂತಿಗೆ ಆ.15, ಹೆಸರು ಬೆಳೆಗೆ ಜು.15 ಹಾಗೂ ಉಳಿದೆಲ್ಲ ಬೆಳೆಗಳಿಗೆ ಜು.31 ಕೊನೆಯ ದಿನ. ರೈತರು ಕೊನೆ ದಿನದವರೆಗೆ ಕಾಯದೇ ಈಗಲೇ ವಿಮೆ ನೋಂದಣಿ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಹೇಳಿದರು.