ಜಕ್ಕಲಿ, ಬೂದಿಹಾಳ ಗ್ರಾಮದಲ್ಲಿ ಗಾಳಿ ಮಳೆ ಆರ್ಭಟಕ್ಕೆ 22 ವಿದ್ಯುತ್ ಕಂಬಗಳು ಧರೆಗೆ

KannadaprabhaNewsNetwork |  
Published : Apr 23, 2026, 02:15 AM IST
ಮಳೆ, ಗಾಳಿಗೆ ವಿದ್ಯುತ್‌ ಕಂಬ ಮುರಿದು ಬಿದ್ದಿರುವುದು. | Kannada Prabha

ಸಾರಾಂಶ

ಮಂಗಳವಾರ ಸಂಜೆ ಸುರಿದ ಭಾರಿಮಳೆಗೆ ಜಕ್ಕಲಿ ಗ್ರಾಮದ ಮೂರ್ನಾಲ್ಕು ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ಬೆಳೆ ನೆಲಕ್ಕುರುಳಿದ್ದು, ರೈತರು ಕಂಗಾಲಾಗಿದ್ದಾರೆ.

ನರೇಗಲ್ಲ: ಸಮೀಪದ ಜಕ್ಕಲಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ 22 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಊರಿನ ಒಳಗೆ ಹಾಗೂ ಹೊರವಲಯದಲ್ಲಿ 50ಕ್ಕೂ ಹೆಚ್ಚು ಮರಗಳು ಉರುಳಿವೆ. ದ್ಯಾಮವ್ವ ದೇವಸ್ಥಾನದ ಮುಂದಿನ ಬೇವಿನ ಮರ ಹಾಗೂ ಅಂದಪ್ಪ ಕಟ್ನಳ್ಳಿ ಅವರ ಮನೆ ಮುಂದಿನ ತೆಂಗಿನ ಮರದ ಟೊಂಗೆಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ ಮಾಡಿವೆ. ಗ್ರಾಮ ಪಂಚಾಯಿತಿ ಚಾವಣಿ ಹಾರಿಹೋಗಿವೆ.

ಬಾಳೆ ನೆಲಸಮ: ಮಂಗಳವಾರ ಸಂಜೆ ಸುರಿದ ಭಾರಿಮಳೆಗೆ ಜಕ್ಕಲಿ ಗ್ರಾಮದ ಮೂರ್ನಾಲ್ಕು ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ಬೆಳೆ ನೆಲಕ್ಕುರುಳಿದ್ದು, ರೈತರು ಕಂಗಾಲಾಗಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯಾಲಯದ ಚಾವಣಿ ಸಹ ಗಾಳಿಗೆ ಹಾರಿ ದೂರ ಬಿದ್ದಿವೆ. ಶಿವಪ್ಪ ಕೆಳಗಡಿ ಅವರ ಮನೆ ಮುಂದೆಯೂ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ತಾಲೂಕು ದಂಡಾಧಿಕಾರಿ ಕೆ. ನಾಗರಾಜ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಡಿಒ ಬಿ.ಎನ್. ಬಚ್ಚೇನಹಳ್ಳಿ, ಗ್ರಾಮಲೆಕ್ಕಾಧಿಕಾರಿ ಜಗದೀಶ ತೊಗರಿಕಟ್ಟಿ, ಹೆಸ್ಕಾಂ ಅಧಿಕಾರಿ ಸರ್ವಿ, ಗ್ರಾಮಸ್ಥರಾದ ಮುತ್ತಪ್ಪ ಪಲ್ಲೇದ, ವೀರೇಶ ಅಂಗಡಿ, ಜಗದೀಶ ಪಲ್ಲೇದ, ಮಹೇಶ ಹಡಪದ, ಸಂಗಮೇಶ ಮೆಣಸಗಿ, ಪ್ರಮೋದ ಯಾವಗಲ್ಲ, ಮುತ್ತು ಮೇಟಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ತ್ವರಿತ ಪರಿಹಾರ: ಗಾಳಿ ಮಳೆಯ ರಭಸಕ್ಕೆ ಹಲವಾರು ಗಿಡ ಮರಗಳು ನೆಲಕಚ್ಚಿದ್ದು, ವಿದ್ಯುತ್ ಕಂಬಗಳು ನೆಲಸಮವಾಗಿವೆ. ಸದ್ಯ ವಿದ್ಯುತ್ ವ್ಯತ್ಯಯವಾಗಿದೆ. ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಕ್ಕೆ ತ್ವರಿತ ಪರಿಹಾರ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ತಿಳಿಸಿದರು.ಮರ ಉರುಳಿ ರಡ್ಡೇರನಾಗನೂರ ರಸ್ತೆ ಬಂದ್

ನರಗುಂದ: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ರಭಸದ ಗಾಳಿ, ಮಳೆ ಸುರಿದಿದ್ದರಿಂದ ಭೈರನಹಟ್ಟಿಯಿಂದ ರಡ್ಡೇರನಾಗನೂರಗೆ ಹೋಗುವ ಒಳರಸ್ತೆಯಲ್ಲಿ ಜಾಲಿ ಮರ ಉರುಳಿ ಬುಧವಾರ ಸಂಪೂರ್ಣವಾಗಿ ಸಂಚಾರ ಬಂದಾಗಿತ್ತು. ಇದರಿಂದ ಪ್ರಯಾಣಿಕರು ಬೇರೆ ಮಾರ್ಗದಿಂದ ಸಂಚರಿಸುವಂತಾಯಿತು.ಜೋರಾದ ಗಾಳಿಗೆ ಹದಲಿಯಲ್ಲಿ 3 ವಿದ್ಯುತ್ ಕಂಬ, ಭೈರನಹಟ್ಟಿಯಲ್ಲಿ 6, ಸುರಕೋಡ ಗ್ರಾಮದಲ್ಲಿ 2 ಕಂಬಗಳು ನೆಲಕ್ಕುರುಳಿವೆ. ಈ ಗ್ರಾಮಗಳಲ್ಲಿ ಮಂಗಳವಾರ ಇಡೀ ರಾತ್ರಿ ವಿದ್ಯುತ್ ವ್ಯತ್ಯಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಜೋರಾದ ಮಳೆ ಗಾಳಿಗೆ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯ ಕೊಠಡಿಯ ಚಾವಣಿಗೆ ಹಾಕಲಾಗಿದ್ದ ತಗಡುಗಳು ಹಾರಿ ಹೋಗಿವೆ. ಅರಿಷಣಗೋಡಿ ಗ್ರಾಮದ ದನದ ಶೆಡ್‌ನ ತಗಡುಗಳು ಹಾರಿ ಬಿದ್ದಿವೆ. ಚಿಕ್ಕನರಗುಂದ ಗ್ರಾಮದಲ್ಲಿ 2 ಮನೆ, 1 ದನದ ಶೆಡ್‌, 1 ಶಾಲೆಯ ತಗಡು ಹಾರಿ ಹೋಗಿವೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಧರ್ಮದ ಅನುಸರಣೆಗೆ ಇರುವ ವಿಘ್ನಗಳು ನಿವಾರಣೆಯಾಗಲಿ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ ಖಂಡನೀಯ: ಈರಣ್ಣ ನವಲಗುಂದ