22 ಕೆರೆ ಏತ ಯೋಜನೆ ವಿಫಲ: ಕಳಪೆ ಕಾಮಗಾರಿ

KannadaprabhaNewsNetwork |  
Published : Jul 26, 2024, 01:43 AM IST
25ಕೆಡಿವಿಜಿ4-ಬೆಂಗಳೂರಿನ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲೆಯ 22 ಕೆರೆಗಳ ಏತ ನೀರಾವರಿ ಯೋಜನೆ ಕುರಿತಂತೆ ವಿವರಿಸುತ್ತಿರುವುದು. | Kannada Prabha

ಸಾರಾಂಶ

ಬೆಂಗಳೂರಿನ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲೆ 22 ಕೆರೆಗಳ ಏತ ನೀರಾವರಿ ಯೋಜನೆ ಕುರಿತಂತೆ ವಿವರಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ತುಂಗಭದ್ರಾ ನದಿಯಿಂದ ದಾವಣಗೆರೆ ಜಿಲ್ಲೆಯ 22 ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆಯು ವಿಫಲವಾಗಿದ್ದು, ಕೆರೆಗಳಿಗೆ ನೀರು ಬರದ ಹಿನ್ನೆಲೆ ಹೊಸದಾಗಿ ಪೈಪ್‌ಲೈನ್ ಕಾಮಗಾರಿ ಕೈಗೊಂಡು, ಕೆರೆಗಳಿಗೆ ನೀರುಣಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಜಲ ಸಂಪನ್ಮೂಲ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಒತ್ತಾಯಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದ 3ನೇ ಮಹಡಿ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಡಿಸಿಎಂ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯಲ್ಲಿ ಭದ್ರಾ ಮತ್ತು ತುಂಗಭದ್ರಾ ಅಚ್ಚು ಪ್ರದೇಶದ ವ್ಯಾಪ್ತಿ ಶಾಸಕರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಿಲ್ಲೆ ಏತ ನೀರಾವರಿ ಯೋಜನೆಗಳ ಕುರಿತಂತೆ ಮಾತನಾಡಿದ ಅವರು, ಎಲ್ ಆ್ಯಂಡ್‌ ಟಿ ಕಂಪನಿ ಕಳಪೆ ಕಾಮಗಾರಿಯಿಂದಾಗಿ ತುಂಗಭದ್ರಾ ನದಿಯಿಂದ ಜಿಲ್ಲೆ 22 ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆ ವಿಫಲವಾಗಿದೆ ಎಂದರು.

ಕಳಪೆ ಪೈಪ್‌ಲೈನ್ ಕಾಮಗಾರಿ ಕೈಗೊಂಡ ಎಲ್ ಆ್ಯಂಡ್ ಟಿ ಕಂಪನಿ ಅಸಡ್ಡೆಯಿಂದಾಗಿ ಇಂದು 22 ಕೆರೆಗಳ ವ್ಯಾಪ್ತಿ ರೈತರಿಗೆ ಸಂಕಷ್ಟ ಬಂದೊದಗಿದೆ. ಕೆರೆಗಳಿಗೆ ನೀರು ಸಹ ತುಂಬುತ್ತಿಲ್ಲ. ತಕ್ಷಣವೇ ನದಿಯಿಂದ ಕೆರೆಗಳವರೆಗೆ ಹೊಸದಾಗಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೈಗೊಂಡು, ರೈತರಿಗೆ ಅನುಕೂಲ ಮಾಡಿಕೊಡಬೇಕು. ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯಸ್ವಾಮೀಜಿಗಳ ಕನಸಿನ ಯೋಜನೆಯಾಗಿದೆ. ಈ ಯೋಜನೆ ಕಾಮಗಾರಿಯನ್ನು ಪ್ರತಿಷ್ಟಿತ ಎಲ್ ಆ್ಯಂಡ್ ಟಿ ಕಂಪನಿಗೆ ಟೆಂಡರ್ ನೀಡಲಾಗಿತ್ತು ಎಂದು ತಿಳಿಸಿದರು.

ಪ್ರತಿಷ್ಟಿತ ಕಂಪನಿಯಾಗಿದ್ದರೂ ಕಾಮಗಾರಿ ಕಳಪೆ ಮಾಡಲಾಗಿದೆ. ಕಳೆದ ವರ್ಷದ ಭೀಕರ ಬರದಿಂದಾಗಿ ರೈತರು ಅಡಕೆ ತೋಟ ಉಳಿಸಿಕೊಳ್ಳಲು ಹರಸಾಹಸಪಡಬೇಕಾಯಿತು. ಕುಡಿವ ನೀರಿಗೂ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಹಾಹಾಕಾರ ಉಂಟಾಗಿತ್ತು. ಹಾಗಾಗಿ ನೀರಾವರಿ ನಿಗಮದಲ್ಲಿ ಉಳಿದಿರುವ ₹18 ಕೋಟಿ ಜೊತೆಗೆ ಹೆಚ್ಚುವರಿ ₹50 ಕೋಟಿ ಅನುದಾನ ನೀಡಿ, 22 ಕೆರೆಗಳ ಯೋಜನೆ ವ್ಯಾಪ್ತಿಯಲ್ಲಿ ಹೊಸದಾಗಿ ಪೈಪ್‌ ಲೈನ್ ಅಳವಡಿಸಿ, ಕೆರೆ ತುಂಬಿಸಿ, ಅನುಕೂಲ ಮಾಡಿಕೊಡಬೇಕು ಎಂದು ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಕಳಪೆ ಕಾಮಗಾರಿಯಿಂದಾಗಿ ಕೆರೆಗಳಿಗೆ ನೀರು ತಲುಪುತ್ತಿಲ್ಲ. ಈ ಹಿನ್ನೆಲೆ ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಹೊಸದಾಗಿ ಪೈಪ್ ಲೈನ್ ಕಾಮಗಾರಿ ಕೈಗೊಂಡು, ರೈತರಿಗೆ ನೆರವಾಗಬೇಕು. ಇದಕ್ಕೆ ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಬೇಕು. ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ತಕ್ಷಣವೇ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂಗೆ ಆಗ್ರಹಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳು ದಾವಣಗೆರೆ ಜಿಲ್ಲೆ ಯೋಜನೆಗೆ ಸಂಬಂಧಿಸಿದಂತೆ ಹೊಸ ಕಾಮಗಾರಿ ಕೈಗೊಳ್ಳಲು ನೀಲಿ ನಕ್ಷೆ ಹಾಗೂ ಯೋಜನಾ ವೆಚ್ಚ ತಯಾರಿಸಲು ಕ್ರಮ ಕೈಗೊಳ್ಳಿ. ಈ ಸಲ ಉತ್ತಮ ಮುಂಗಾರು ಆರಂಭದಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯ ತುಂಬುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಶೀಘ್ರವೇ ಕರೆದು, ಕರೆದು, ಮಳೆಗಾಲದ ಬೆಳೆಗೆ ನೀರು ಬಿಡುಗಡೆಗೆ ದಿನಾಂಕ ನಿಗದಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ