22ರಿಂದ 3 ದಿನಗಳ ಬಳ್ಳಾರಿಯಲ್ಲಿ ಶ್ರೀರಾಮ ರಂಗ ಸಂಭ್ರಮ: ಪ್ರಭುದೇವ

KannadaprabhaNewsNetwork | Published : Jan 20, 2024 2:05 AM

ಸಾರಾಂಶ

ಜ. 24ರಂದು ಹೈದರಾಬಾದ್‌ನ ಖ್ಯಾತ ನಾಟಕ ಕಂಪನಿಯಾದ ಸುರಭಿ ನಾಟ್ಯ ಮಂಡಳಿಯಿಂದ "ಶ್ರೀರಾಮ ರಾಜ್ಯಂ " ತೆಲುಗು ನಾಟಕ ಪ್ರದರ್ಶನಗೊಳ್ಳಲಿದೆ.

ಬಳ್ಳಾರಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಇಲ್ಲಿನ ರಂಗತೋರಣ ಸಂಸ್ಥೆಯು ಮೂರು ದಿನಗಳ "ಶ್ರೀರಾಮ ರಂಗ ಸಂಭ್ರಮ " ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಅವರು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ದಿನವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಶ್ರೀರಾಮನ ಪ್ರತಿಷ್ಠಾನದ ಮಹೋನ್ನತ ದಿನಗಳಲ್ಲಿ ರಂಗತೋರಣದಿಂದ ನಾಟಕ, ಬಯಲಾಟ, ಸಂಗೀತ, ನೃತ್ಯ, ಕೋಲಾಟ, ಉಪನ್ಯಾಸ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ರಾಘವ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 5.30ರಿಂದ ಆಯೋಜಿಸಲಾಗಿದೆ. ಶ್ರೀರಾಮ ಮಹಿಮೆ ಕುರಿತು ನಿತ್ಯ ವಿಶೇಷ ಉಪನ್ಯಾಸಗಳು ಜರುಗಲಿವೆ ಎಂದು ತಿಳಿಸಿದರು.

ಜ. 22ರಂದು ಮುದ್ದಟನೂರು ಎಚ್‌. ತಿಪ್ಪೇಸ್ವಾಮಿ ಅವರ ನಿರ್ದೇಶನ, ಮಂಜು ಸಿರಿಗೇರಿ ಸಹ ನಿರ್ದೇಶನದಲ್ಲಿ ಧಾತ್ರಿ ರಂಗಸಂಸ್ಥೆಯಿಂದ "ರಾಮ ರಾವಣ ಯುದ್ಧ " ಬಯಲಾಟ ಪ್ರದರ್ಶನವಿರಲಿದೆ. ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷ ಕೆ. ಚನ್ನಪ್ಪ, ಹಿರಿಯ ವಕೀಲ ವಿ. ಜನಾರ್ದನ ಹಾಗೂ ಬಯಲಾಟ ನಿರ್ದೇಶಕ ಈ. ಹನುಮಾವಧೂತ ಪಾಲ್ಗೊಳ್ಳುವರು. ರಂಗತೋರಣ ಅಧ್ಯಕ್ಷ ಪ್ರೊ. ಆರ್. ಭೀಮಸೇನ ಉಪನ್ಯಾಸ ನೀಡುವರು.

ಜ. 23ರಂದು ರಾಷ್ಟ್ರಕವಿ ಕುವೆಂಪು ರಚನೆಯ "ಲಂಕಾ ದಹನ " ತೊಗಲುಗೊಂಬೆ ಪ್ರದರ್ಶನವಿದೆ. ಬೆಳಗಲ್ಲು ಪ್ರಕಾಶ್ ನಿರ್ದೇಶನದಲ್ಲಿ ರಾಮಾಂಜಿನೇಯ ತೊಗಲುಗೊಂಬೆ ಮೇಳ ತಂಡ ಪ್ರದರ್ಶನ ನೀಡಲಿದೆ. ಸಮಾರಂಭದ ಅತಿಥಿಗಳಾಗಿ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ ಹಾಗೂ ವಿಮ್ಸ್‌ನ ಪ್ರಾಧ್ಯಾಪಕ ಡಾ. ಎನ್. ಕೊಟ್ರೇಶ್ ಭಾಗವಹಿಸುವರು. ಧಾರವಾಡದ ವಕೀಲ ಅನೂಪ್ ದೇಶಪಾಂಡೆ ಉಪನ್ಯಾಸ ನೀಡುವರು.

ಜ. 24ರಂದು ಹೈದರಾಬಾದ್‌ನ ಖ್ಯಾತ ನಾಟಕ ಕಂಪನಿಯಾದ ಸುರಭಿ ನಾಟ್ಯ ಮಂಡಳಿಯಿಂದ "ಶ್ರೀರಾಮ ರಾಜ್ಯಂ " ತೆಲುಗು ನಾಟಕ ಪ್ರದರ್ಶನಗೊಳ್ಳಲಿದೆ. ಮುದ್ದಟನೂರು ಎಚ್. ತಿಪ್ಪೇಸ್ವಾಮಿ ನಿರ್ದೇಶನ, ಮಂಜು ಸಿರಿಗೇರಿ ಸಹ ನಿರ್ದೇಶನದಲ್ಲಿ ನಾಟಕ ಮೂಡಿಬರಲಿದೆ. ಸಮಾರಂಭದ ಅತಿಥಿಗಳಾಗಿ ತೆಲುಗು ಸಂಸ್ಕೃತಿ ಸಂಘದ ಗಾದೆಂ ಗೋಪಾಲಕೃಷ್ಣ, ಉದ್ಯಮಿ ಭೀಮಸೇನಿ ಭಾಸ್ಕರ, ಎಪಿಎಂಸಿ ವರ್ತಕ ಪಿ. ಪಾಲನ್ನ ಭಾಗವಹಿಸುವರು. ಹೈದರಾಬಾದ್‌ನ ಸಾಮಾಜಿಕ ಸಮರಸತಾ ವೇದಿಕೆಯ ಅಪ್ಪಾಲ ಪ್ರಸಾದ ಉಪನ್ಯಾಸ ನೀಡುವರು. ಇದಲ್ಲದೆ ಪದ್ಮಾವತಿ, ಪ್ರಕೃತಿ ರೆಡ್ಡಿ, ಸುನೀತಾ ಕೊಳಗಲ್ಲು ಅವರಿಂದ ಗಾಯನ, ವೀಣಾ ವಾದನ ಇರಲಿದೆ. ಶ್ರೀನಿಧಿ ಆರ್ಟ್ಸ್, ಸೂರ್ಯಕಲಾ ಟ್ರಸ್ಟ್ ಹಾಗೂ ಮೂನ್ ವಾಕರ್ಸ್ ತಂಡಗಳಿಂದ ನೃತ್ಯ ಪ್ರದರ್ಶನ ಜರುಗಲಿವೆ ಎಂದು ಪ್ರಭುದೇವ ಕಪ್ಪಗಲ್ ವಿವರಿಸಿದರು. ಶ್ರೀರಾಮ ರಂಗ ಸಂಭ್ರಮ ಸಂಚಾಲಕ ಅಡವಿಸ್ವಾಮಿ ಹಾಗೂ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಎಚ್‌. ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

Share this article