ಹಾವೇರಿ: ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು. ೭೭ ಕೇಂದ್ರಗಳಲ್ಲಿ ನಡೆದ ಪ್ರಥಮ ಭಾಷೆ ಪರೀಕ್ಷೆಗೆ ೨೨೦ ವಿದ್ಯಾಥಿಗಳು ಗೈರು ಹಾಜರಾಗಿದ್ದರು.
ಜಿಲ್ಲೆಯ ಎಲ್ಲ ೭೭ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಲ್ಲಿಯೇ ಕುಳಿತು ಎಲ್ಲ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗುವ ದೃಶ್ಯಗಳನ್ನು ವೀಕ್ಷಿಸಲಾಯಿತು.
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿಯೇ ಬಿಸಿಯೂಟ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಸನ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಜಿಲ್ಲೆಯಲ್ಲಿ ಸೋಮವಾರ ಪ್ರಥಮ ಭಾಷೆ ಪರೀಕ್ಷೆ ಸುಗಮವಾಗಿ ನಡೆದಿದೆ. ಒಟ್ಟು ೨೨೦ ವಿದ್ಯಾರ್ಥಿಗಳು ಗೈರಾಗಿದ್ದರು. ಎಲ್ಲೂ ನಕಲು ನಡೆದಿರುವ ಪ್ರಕರಣ ನಡೆದಿಲ್ಲ, ರಾಣಿಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಅಭಿಷೇಕ ಎಂಬಾತನ ಹಾಜರಾತಿ ಕೊರತೆಯಿಂದಾಗಿ ಪ್ರವೇಶ ಪತ್ರ ಬಂದಿಲ್ಲ, ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.