ಕನ್ನಡಪ್ರಭ ವಾರ್ತೆ ವಿಜಯಪುರ
ಕಳೆದ ಒಂದು ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದ ಕಳ್ಳತನ ಹಾಗೂ ದರೋಡೆ ಸೇರಿ ಒಟ್ಟು ಅಪರಾಧ ಪ್ರಕರಣಗಳಲ್ಲಿ ಬರೋಬ್ಬರಿ 225 ಪ್ರಕರಣಗಳನ್ನು ಬೇಧಿಸಿದ ಜಿಲ್ಲಾ ಪೊಲೀಸರು 345 ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಚಿನ್ನಾಭರಣ, ಬೆಳ್ಳಿ ಆಭರಣ, ನಗದು, ಕಾರುಗಳು, ಟಿಪ್ಪರ ಅಥವಾ ಭಾರೀ ವಾಹನ, ಟ್ರ್ಯಾಕ್ಟರ್, ಬೈಕ್‌ಗಳು ಸೇರಿ ₹ 7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಪತ್ತೆ ಮಾಡಿದ ಸ್ವತ್ತನ್ನು ವಾರಸುದಾರರಿಗೆ ಹಸ್ತಾಂತರಿಸಿದರು. 2024-25ರ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿನ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ, 225 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.ಈ ವೇಳೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಕಳೆದೊಂದು ವರ್ಷದಲ್ಲಿ ₹7 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ. ಆದರ್ಶನಗರ, ಬಬಲೇಶ್ವರ, ಆಲಮಟ್ಟಿ, ಕೊಲ್ಹಾರ, ಹೊರ್ತಿ, ಸಿಂದಗಿ, ಗಾಂಧಿಚೌಕ, ವಿಜಯಪುರ ಗ್ರಾಮೀಣ ಠಾಣೆ ಸೇರಿದಂತೆ ಜಿಲ್ಲೆಯ ಹಲವು ಠಾಣೆಗಳಲ್ಲಿನ ಪ್ರಕರಣಗಳನ್ನು ಬೇಧಿಸಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸ್ವತ್ತಿನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಪರಾಧ ಪತ್ತೆ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಎಸ್‌ಪಿ ನಿಂಬರಗಿ ತಿಳಿಸಿದರು.
ಈ ವೇಳೆ ಹೆಚ್ಚುವರಿ ಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ತುಳಜಪ್ಪ ಸುಲ್ಫಿ ಸೇರಿದಂತೆ ವಿವಿಧ ವಿಭಾಗಗಳ, ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.-----
ಕೋಟ್ಅಪರಾಧ ಪ್ರಕರಣ ಪತ್ತೆ ಹಚ್ಚುವದಕ್ಕಿಂದ ಅಪರಾಧ ತಡೆಗಟ್ಟುವುದು ಮುಖ್ಯ. ಹಾಗಾಗಿ ಸಾರ್ವಜನಿಕರು ತಮ್ಮ ಮನೆಗಳಿಗೆ, ಅಂಗಡಿಗಳಿಗೆ ಸಿಸಿ ಟಿವಿಗಳನ್ನು ಅಳವಡಿಸಿಕೊಳ್ಳಬೇಕು. ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡಬೇಕು. ರಾತ್ರಿ ವೇಳೆ ಮನೆಗಳ ಸುತ್ತಮುತ್ತಲೂ ಲೈಟಿಂಗ್ ಹಾಕಿಕೊಳ್ಳಬೇಕು. ಬೇರೆಡೆ ಗಮನ ಸೆಳೆದು ಹಿರಿಯರಿಗೆ ಮೋಸ ಮಾಡುವುದು ಹೆಚ್ಚಾಗಿದೆ. ಆದ್ದರಿಂದ ಜನರು ಯಾವುದು ಆಸೆ ಆಮೀಷಗಳಿಗೆ ಬಲಿಯಾಗಬಾರದು.
- ಲಕ್ಷ್ಮಣ ನಿಂಬರಗಿ, ಪೊಲೀಸ್ ವರಿಷ್ಠಾಧಿಕಾರ----------
ಬಾಕ್ಸ್‌ಕಳ್ಳರಿಂದ ಏನೇನು ಜಪ್ತಿ ಮಾಡಲಾಗಿದೆ?ಬಂಗಾರ ಹಾಗೂ ಬೆಳ್ಳಿ ಕಳ್ಳತನದ 97 ಪ್ರಕರಣ ಪತ್ತೆಯಾಗಿದ್ದು, 152 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 5145.02 ಗ್ರಾಂ ಬಂಗಾರದ ಆಭರಣಗಳು ಹಾಗೂ 1723 ಗ್ರಾಂ ಬೆಳ್ಳಿ ಆಭರಣಗಳು ಸೇರಿ ಒಟ್ಟು ₹ 2,39,85,110 ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ. ಅಲ್ಲದೇ, 73 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಪತ್ತೆಯಾಗಿದ್ದು, 102 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 251 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳ ಒಟ್ಟು ಮೌಲ್ಯ ₹ 1,06,72,000 ಎಂದು ಅಂದಾಜಿಸಲಾಗಿದೆ. 14 ನಾಲ್ಕು ಚಕ್ರದ ವಾಹನಗಳನ್ನು ಪತ್ತೆ ಹಚ್ಚಲಾಗಿದ್ದು, 19 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12 ವಿವಿಧ ಕಂಪನಿಯ ನಾಲ್ಕು ಚಕ್ರದ 14 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹1,32,41,000 ಎನ್ನಲಾಗಿದೆ. ಇನ್ನು, ಟಿಪ್ಪರ್ ಕಳ್ಳತನ ಪ್ರಕರಣದ 5 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಟಿಪ್ಪರ್ ಜಪ್ತಿ ಮಾಡಿದ್ದು ಅವುಗಳ ಒಟ್ಟು ಮೌಲ್ಯ ₹ 19,00,000. ನಗದು ಕಳ್ಳತನ ಪ್ರಕರಣಗಳಲ್ಲಿ 19 ಪ್ರಕರಣ ಪತ್ತೆಯಾಗಿದ್ದು, 31 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹1,91,89,404 ಹಣ ಜಪ್ತಿ ಮಾಡಲಾಗಿದೆ. ಇತರೆ 21 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 36 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 143 ಇತರೆ ವಸ್ತುಗಳ ಒಟ್ಟು ಮೌಲ್ಯ ₹ 12,42,250 ಆಗಿದೆ.ಒಟ್ಟು ₹7,02,29,764 ಮೌಲ್ಯದ ವಸ್ತುಗಳನ್ನು ಪ್ರಾಪರ್ಟಿ ಪರೇಡ್ ಮೂಲಕ ವಾರಸುದಾರರಿಗೆ ₹3,46,08,100 ಕಿಮ್ಮತ್ತಿನ ವಸ್ತುಗಳನ್ನು ಹಿಂದಿರುಗಿಸಲಾಗಿದೆ. ಬಾಕಿ ಉಳಿದ ₹ 3,56,21,664 ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಹಸ್ತಾಂತರಿಸಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.