ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಪಹಲ್ಗಾಮ ದಾಳಿಗೆ ಕಾರಣ: ಕೋಲಕಾರ

KannadaprabhaNewsNetwork | Published : Apr 26, 2025 12:47 AM

ಸಾರಾಂಶ

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭಯೋತ್ಪಾದಕ ಕೃತ್ಯ ಹೇಯ ಹಾಗೂ ಖಂಡನೀಯವಾಗಿದ್ದು, ಅಮಾಯಕರ ಸಾವಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಇಲ್ಲಿನ ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಚೇರಮನ್ ಎ.ಡಿ. ಕೋಲಕಾರ ಹೇಳಿದರು.

ಗಜೇಂದ್ರಗಡ: ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭಯೋತ್ಪಾದಕ ಕೃತ್ಯ ಹೇಯ ಹಾಗೂ ಖಂಡನೀಯವಾಗಿದ್ದು, ಅಮಾಯಕರ ಸಾವಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಇಲ್ಲಿನ ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಚೇರಮನ್ ಎ.ಡಿ. ಕೋಲಕಾರ ಹೇಳಿದರು.

ಪಟ್ಟಣದ ಕೆ.ಕೆ. ಸರ್ಕಲ್‌ನಲ್ಲಿ ಶುಕ್ರವಾರ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪಹಲ್ಗಾಮ್ ದಾಳಿ ಖಂಡಿಸಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಭಯೋತ್ಪಾದಕರ ಪಾಪಕೃತ್ಯದಿಂದ ಅಮಾಯಕ ೨೮ ಜನ ಮೃತಪಟ್ಟಿದ್ದಾರೆ. ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ. ಇದು ಮಾನವನ ಮೇಲೆ ನಡೆದ ದಾಳಿ ಮಾತ್ರವಲ್ಲ, ಭಾರತದ ಬಹುತ್ವ, ಶಾಂತಿ ಸಹಬಾಳ್ವೆಯ ಮೌಲ್ಯಗಳ ಮೇಲೆ ನಡೆಸಿದ ದಾಳಿಯಾಗಿದ್ದು, ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಂಜುಮಾನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ, ಈ ದಾಳಿಯು ಕೇಂದ್ರ ಸರ್ಕಾರದ ನಿರ್ಲಕ್ಷ್ಯ. ಪ್ರಧಾನ ಮಂತ್ರಿಗಳು, ಗೃಹ ಸಚಿವರು ನೈತಿಕ ಹೊಣೆಯನ್ನು ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ದಾಳಿಯಲ್ಲಿ ಪ್ರಾಣ ಕಳೆದುಕೊಂಡು ಆತಂಕದಲ್ಲಿರುವ ಕುಟುಂಬಗಳಿಗೆ ಸೂಕ್ತ ಭದ್ರತೆ ಜತೆಗೆ ಸರ್ಕಾರ ಪರಿಹಾರ ನೀಡಬೇಕು ಎಂದ ಅವರು, ಸಾಮಾಜಿಕ ಜಾಲತಾಣ ದೃಶ್ಯ ಮಾಧ್ಯಮಗಳಲ್ಲಿ ಈ ದಾಳಿಯನ್ನು ಗುರಿಯಾಗಿಸಿಕೊಂಡು ಮುಸ್ಲಿಂ ಸಮಾಜದ ಬಗ್ಗೆ ಹಸಿ-ಹಸಿ ಸುಳ್ಳುಗಳನ್ನು ಭಿತ್ತಿ ಸಮುದಾಯದ ತೇಜೋವಧೆ ಮಾಡಿ, ದೇಶದ ಕೋಮು ಸೌಹಾರ್ದತೆ ಹಾಳು ಮಾಡುತ್ತಿರುವ ಕೆಲ ಪಟ್ಟಭದ್ರ ಕೋಮುವಾದಿ ಶಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪುರಸಭೆ ಸದಸ್ಯ ರಾಜು ಸಾಂಗ್ಲಿಕರ ಮಾತನಾಡಿ, ಬಹುತ್ವ ಭಾರತವನ್ನು ಒಡೆದು ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತಲು, ಈ ದೇಶವನ್ನು ವಿಭಜಿಸುವುದೇ ಅವರ ಗುರಿಯಾಗಿದ್ದು ಕೂಡಲೇ ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದರು.ಈ ವೇಳೆ ಜಾಮೀಯಾ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಕೆ.ಕೆ. ವೃತ್ತದಲ್ಲಿ ಪ್ರತಿಭಟನಾ ಸಭೆಯಾಯಿತು. ಬಳಿಕ ತಹಸೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಸ್ವೀಕರಿಸಿದರು.ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಹಸನಸಾಬ ತಟಗಾರ, ಕಾರ್ಯದರ್ಶಿ ಫಯಾಜ್ ತೋಟದ, ಎಂ.ಬಿ. ಕಂದಗಲ್ಲ, ದಾದು ಹಣಗಿ, ಸುಭಾನಸಾಬ ಆರಗಿದ್ದಿ, ಮಾಸುಮಲಿ ಮದಗಾರ, ಸಮೀರ ಅತ್ತಾರ, ಇಮ್ರಾನ ಅತ್ತಾರ, ಭಾಷಾ ಮುದಗಲ್ಲ, ಖಾಸಿಂಸಾಬ ಮುಚ್ಚಾಲಿ, ಮುಸ್ತಾಕ ಹಕ್ಕಿ, ಹೈದರ ಹುನಗುಂದ ಸೇರಿ ಇತರರು ಇದ್ದರು.

Share this article