ಆಳ್ವಾಸ್‌ನಲ್ಲಿ 22ನೇ ವರ್ಷದ ಬೃಹತ್ ಇಫ್ತಾರ್ ಕೂಟ

KannadaprabhaNewsNetwork | Published : Mar 17, 2025 12:32 AM

ಸಾರಾಂಶ

ವಿದ್ಯಾಗಿರಿಯ ಕೃಷಿಸಿರಿ ಆವರಣದಲ್ಲಿ ಬೃಹತ್ ಇಫ್ತಾರ್ ಕೂಟ ಶನಿವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲಾದ 22ನೇ ವರ್ಷದ ಇಫ್ತಾರ್ ಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸ್ಥಳೀಯರ ಸಹಿತ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇಫ್ತಾರ್ ಬಳಿಕ ಸಾಮೂಹಿಕ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ವಿದ್ಯಾಗಿರಿಯ ಕೃಷಿಸಿರಿ ಆವರಣದಲ್ಲಿ ಬೃಹತ್ ಇಫ್ತಾರ್ ಕೂಟ ಶನಿವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲಾದ 22ನೇ ವರ್ಷದ ಇಫ್ತಾರ್ ಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸ್ಥಳೀಯರ ಸಹಿತ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇಫ್ತಾರ್ ಬಳಿಕ ಸಾಮೂಹಿಕ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಮ್ಜಾನ್ ಸಂದೇಶ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ, ಡಾ ಮೋಹನ ಆಳ್ವರ ನೇತೃತ್ವದಲ್ಲಿ ಆಳ್ವಾಸ್ ಸಂಸ್ಥೆ ನಡೆಸುತ್ತಿರುವ ಇಫ್ತಾರ್ ಕೂಟ ಸಮಾಜಕ್ಕೆ ಮಾದರಿ. ಕೆಡುಕನ್ನು ಕೆಡುಕಿನಿಂದ ನಿವಾರಿಸಲು ಅಸಾಧ್ಯ. ಅದನ್ನು ಒಳಿತು, ಪ್ರೀತಿಯ ಸಂದೇಶದ ಮೂಲಕ ನಿವಾರಿಸಬೇಕು. ಈ ನಿಟ್ಟಿನಲ್ಲಿ ಇದು ಸಮಾಜಕ್ಕೆ ಶಕ್ತಿಯುತ ಸಂದೇಶ ನೀಡುವ ಕಾರ‍್ಯಕ್ರಮ ಎಂದರು.ಬೀದರ್‌ನ ಶಾಯಿನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ ಅಧ್ಯಕ್ಷ ಅಬ್ದುಲ್ ಖಾದಿರ್ ಶಾಯಿನ್, ಮುಸಲ್ಮಾನರ ಸಂಪ್ರದಾಯದಂತೆ ಇಫ್ತಾರ್ ಕೂಟ ಆಯೋಜಿಸಲಾಗಿದೆ. ದೇಶದ ಜನರು ಸೌಹಾರ್ದದಿಂದ ಬದುಕಬೇಕು. ಎಲ್ಲ ಭಾಷೆ, ಜಾತಿ, ಧರ್ಮದ ಜನರನ್ನು ಪರಸ್ಪರ ಗೌರವಿಸಬೇಕು ಎಂದರು.ಮಹಿಳೆಯರಿಗೆ ಹಾಗೂ ಪುರುಷರಿಗೆ ನಮಾಝ್ ಮಾಡಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಉಡುಪಿ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಲ್, ಟ್ರಸ್ಟಿ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಉದ್ಯಮಿ ಭಾರತ್ ಮುಸ್ತಫ, ವಿಜಯಪುರದ ರೋಯಲ್ ಶಾಲೆಯ ನಿರ್ದೇಶಕ ಮೊಹಮ್ಮದ್ ಇಂಡಿ, ಆಳ್ವಾಸ್ ಫಿಝೇರಿಯಾ ಹಾಗೂ ಬಿಸಿಸಿ ಮಾಲಕ ಎಂ.ಎಸ್. ಜೈನುದ್ದೀನ್ ಹಾಗೂ ಇನ್ನಿತರರು ಇದ್ದರು.

ಉದ್ಯಮಿ ಅಬೂಲಾಲ ಪುತ್ತಿಗೆ ನಿರೂಪಿಸಿದರು.

--------------------------

ಎಲ್ಲ ಮತ, ಧರ್ಮ ಸೌಹಾರ್ದತೆ ಸಾರಿದೆ: ಡಾ. ಆಳ್ವ

ಮನಸ್ಸನ್ನು ಕಟ್ಟುವ, ಎಲ್ಲ ಮಾನವ ಸಮುದಾಯವನ್ನು ಒಟ್ಟು ಸೇರಿಸುವ ಕೆಲಸ ನಮ್ಮೆಲ್ಲರದ್ದಾಗಬೇಕು. ಸೌಹರ್ದತೆ ಬದುಕು ನಮ್ಮದಾಗಬೇಕು. ಇಂತಹ ಔತಣಕೂಟ ಆಯೋಜನೆಯಿಂದ ನಮ್ಮಲ್ಲಿ ಸಾರ್ಥಕ್ಯ ಮನೋಭಾವ ಮೂಡುತ್ತಿದೆ. ಇದೊಂದು ಪ್ರೀತಿ ಹಂಚುವ ಕಾರ‍್ಯಕ್ರಮ ಎಂದು ಆಳ್ವಾಸ್‌ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹೇಳಿದರು.

Share this article