ಲಕ್ಷ್ಮೇಶ್ವರ: 2017ರ ಫೆಬ್ರವರಿ 5ರಂದು ನಡೆದ ಗಲಭೆಯಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯನ್ನು ಸುಟ್ಟ ಪ್ರಕರಣದಲ್ಲಿ ತಾಲೂಕಿನ 23 ಜನರು ಅಪರಾಧಿಗಳೆಂದು ಘೋಷಣೆ ಮಾಡಿ ಗದಗ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.
2017ರ ಫೆ. 5ರಂದು ಬಟ್ಟೂರ ಗ್ರಾಮದ ಶಿವಪ್ಪ ಡೋಣಿ ಎಂಬವರನ್ನು ಅಕ್ರಮ ಮರಳು ಸಾಗಾಟ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಠಾಣೆಗೆ ಕರೆತಂದು ಥಳಿಸಿದ್ದರು. ಅವರು ಮೃತಪಟ್ಟಿದ್ದರು. ಜನರು ಪಟ್ಟಣದ ಪೊಲೀಸ್ ಠಾಣೆಗೆ ಅವರ ಶವ ತಂದು ಪ್ರತಿಭಟನೆ ನಡೆಸಿದ್ದರು. ಆ ವೇಳೆ ಉದ್ರಿಕ್ತರ ಗುಂಪು ಠಾಣೆಯೊಳಗೆ ನುಗ್ಗಿ ದಾಂದಲೆ ನಡೆಸಿ, ಪೊಲೀಸ್ ಜೀಪಿಗೆ ಹಾಗೂ ಹಲವು ಬೈಕ್‌ಗಳಿಗೆ ಬೆಂಕಿ ಹಚ್ಚಿ, ಕಚೇರಿಯ ಕಡತಗಳಿಗೆ ಹಾಗೂ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 112 ಜನರು ಆರೋಪಿಗಳೆಂದು ಪೊಲೀಸರು ಎಫ್ಐಆರ್ ಸಲ್ಲಿಸಿದ್ದರು.ಆ 112 ಜನರಲ್ಲಿ 8 ಜನ ಮೃತಪಟ್ಟಿದ್ದು, ಓರ್ವ ಬಾಲಾಪರಾಧಿಯಾಗಿದ್ದಾನೆ. ಉಳಿದ 103 ಜನರ ಮೇಲೆ ತನಿಖೆ ಕೈಗೊಳ್ಳಲಾಗಿತ್ತು. ಗದಗ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಇದರಲ್ಲಿ 23 ಜನರು ಅಪರಾಧಿಗಳೆಂದು, ಉಳಿದ 80 ಜನರು ನಿರಾಪರಾಧಿಗಳೆಂದು ತೀರ್ಪು ಪ್ರಕಟಿಸಿದೆ. ಶಿಕ್ಷೆಯ ಪ್ರಮಾಣ ಹಾಗೂ ದಂಡದ ವಿವರವನ್ನು ಮಾ. 24ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಆದೇಶಿಸಿದ್ದಾರೆ.
ಸುದೀರ್ಘ 8 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ 23 ಜನರು ಅಪರಾಧಿಗಳೆಂದು ತೀರ್ಪು ಪ್ರಕಟಿಸಿದ್ದು, ಅಂತಿಮ ಆದೇಶ ಏನಾಗಿರುತ್ತದೆ ಎಂಬ ಕುತೂಹಲ ತಾಲೂಕಿನಲ್ಲಿ ಸಂಚಲನ ಉಂಟು ಮಾಡಿದೆ.