ಪಂಚ ಗ್ಯಾರಂಟಿ ಯೋಜನೆಯಿಂದ ಜಿಲ್ಲೆಗೆ ₹2336 ಕೋಟಿ: ಎಸ್.ಆರ್. ಪಾಟೀಲ

KannadaprabhaNewsNetwork | Published : Apr 24, 2025 11:46 PM

ಸಾರಾಂಶ

ಬೆಳಗಾವಿ ಕಂದಾಯ ವಿಭಾಗದ ಎಲ್ಲ 7 ಜಿಲ್ಲೆಗಳಲ್ಲಿ ಮತ್ತು ತಾಲೂಕುಗಳಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳಿಗೆ ಕಚೇರಿ ಆರಂಭಿಸಲಾಗಿದೆ.

ಹಾವೇರಿ: ಐದು ಗ್ಯಾರಂಟಿ ಯೋಜನೆಗಳ ಮೂಲಕ ಜಿಲ್ಲೆಯ ಜನತೆಗೆ ಸರ್ಕಾರವು ₹2336 ಕೋಟಿ ಖರ್ಚು ಮಾಡಿದೆ. ಬಡತನ ರೇಖೆಗಿಂತ ಕೆಳವರ್ಗದ ಜನರು ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದು ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ತಿಳಿಸಿದರು.ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಯ ಹಣದಿಂದ ಕೆಲವರು ಆಡು, ಎತ್ತು ಹಾಗೂ ಸ್ಟೇಷನರಿ ಅಂಗಡಿಗಳನ್ನು ತೆರೆಯುವುದರ ಮೂಲಕ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇದು ಅವರ ಆರ್ಥಿಕ ಜೀವನ ಮಟ್ಟ ಸುಧಾರಣೆಗೆ ಅನುಕೂಲವಾಗಿದೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರ್ಕಾವು ತನ್ನ ಮಹತ್ವಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹರಿಗೆ ಯೋಜನೆಗಳ ಸವಲತ್ತು ಸಮರ್ಪಕವಾಗಿ ದೊರೆಯುವಂತೆ ಮಾಡುವಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ಕಂದಾಯ ವಿಭಾಗದ ಎಲ್ಲ 7 ಜಿಲ್ಲೆಗಳಲ್ಲಿ ಮತ್ತು ತಾಲೂಕುಗಳಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳಿಗೆ ಕಚೇರಿ ಆರಂಭಿಸಲಾಗಿದ್ದು, ಕಚೇರಿಗಳಿಗೆ ಬರುವ ಯೋಜನೆಯ ಫಲಾನುಭವಿಗಳ ಸಮಸ್ಯೆಗಳನ್ನು ಅಧಿಕಾರಿಗಳ ಸಮನ್ವಯದೊಂದಿಗೆ ಪರಿಹರಿಸುವ ಕೆಲಸ ಮಡಲಾಗುತ್ತದೆ ಎಂದರು.

ಶಕ್ತಿ ಯೋಜನೆ ಆರಂಭವಾದಾಗಿನಿಂದ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 10.86 ಕೋಟಿ ಮಹಿಳಾ ಪ್ರಯಾಣಿಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಉಚಿತವಾಗಿ ಸಂಚಾರ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ ₹315.33 ಕೋಟಿ ಖರ್ಚು ಮಾಡಿದೆ ಎಂದರು. ಗೃಹಜ್ಯೋತಿ ಯೋಜನೆ: ಜಿಲ್ಲೆಯಲ್ಲಿ ಯೋಜನೆ ಆರಂಭವಾದಾಗಿನಿಂದ ಮಾರ್ಚ್ ಅಂತ್ಯದವರೆಗೆ ಒಟ್ಟು 4 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಎಲ್ಲ ಫಲಾನುಭವಿಗಳಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ₹217.51 ಕೋಟಿ ಖರ್ಚು ಮಾಡಿದೆ. ಯುವನಿಧಿ ಯೋಜನೆ ಆರಂಭವಾದಾಗಿನಿಂದ ಮಾರ್ಚ್‌ವರೆಗೆ ಒಟ್ಟು 7113 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 5103 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. 1975 ಅರ್ಜಿಗಳು ಬಾಕಿ ಇದ್ದು, ಇವುಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಸರ್ಕಾರ ₹8.89 ಕೋಟಿ ಖರ್ಚು ಮಾಡಿದೆ ಎಂದರು. ಗೃಹಲಕ್ಷ್ಮಿಯರಿಗೆ ₹760 ಕೋಟಿ ಖರ್ಚು: ಜಿಲ್ಲೆಯಲ್ಲಿ ಯೋಜನೆ ಆರಂಭವಾದಾಗಿನಿಂದ ಮಾರ್ಚ್ ಅಂತ್ಯದ ವರೆಗೆ ಒಟ್ಟು 391340 ಅರ್ಜಿಗಳು ನೋಂದಣಿಯಾಗಿದ್ದು, ಅದರಲ್ಲಿ 380446 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. 10894 ಅರ್ಜಿಗಳು ಬಾಕಿ ಇದ್ದು, ಕಾರಣ ಫಲಾನುಭವಿಗಳ ಐಟಿ, ಜಿಎಸ್‌ಟಿ, ಮರಣ ಹಾಗೂ ಎನ್‌ಪಿಸಿಐ ಕೊರತೆ ಇದೆ. ಇವುಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಸರ್ಕಾರ ₹760.89 ಕೋಟಿ ಖರ್ಚು ಮಾಡಿದೆ. ಅನ್ನಭಾಗ್ಯ ಯೋಜನೆಯಲ್ಲಿ ಮಾರ್ಚ್ ಅಂತ್ಯದವರೆಗೆ ಒಟ್ಟು 397816 ಫಲಾನುಭವಿಗಳು ಪಡಿತರ ಚೀಟಿ ಹೊಂದಿದ್ದು, ಅದರಲ್ಲಿ 363888 ಕಾರ್ಡ್‌ಗಳು ನೋಂದಣಿಯಾಗಿದ್ದು, ₹327.63 ಕೋಟಿ ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಎಂ.ಎಂ. ಮೈದೂರು, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೆಗಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ್ ನೀರಲಗಿ ಇತರರು ಉಪಸ್ಥಿತರಿದ್ದರು.

Share this article