ಗ್ರಾಹಕರಿಗೆ ವಿದ್ಯುತ್ ನೀಡಲು ಮೆಸ್ಕಾಂ ಹರ ಸಾಹಸ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಳೆದ 12 ದಿನದಿಂದ ಸುರಿದ ಮಳೆ, ಗಾಳಿಗೆ 237 ವಿದ್ಯುತ್ ಕಂಬ, 5 ಟ್ರಾನ್ಸ್ ಫಾರಂ ಉರುಳಿ ಬಿದ್ದಿದ್ದು ಗ್ರಾಹಕರಿಗೆ ವಿದ್ಯುತ್ ನೀಡಲು ಮೆಸ್ಕಾಂ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.
ನಾಗರಮಕ್ಕಿ, ಸಿದ್ದನಕೊಡಿಗೆ, ಮಾಳೂರು ದಿಣ್ಣೆ, ಕಳ್ಳಿಕೊಪ್ಪ, ಜೈಲ್ ಬಿಲ್ಡಿಂಗ್ ಸಮೀಪದ ಟಿಸಿ ಸೇರಿ 5 ಟಿಸಿಗಳು ಹಾಳಾಗಿದೆ. ಇದರ ಜೊತೆಗೆ ವಗಡೆಕಲ್ಲು, ಗದ್ದೇಮನೆ, ನಾಗರಮಕ್ಕಿ, ಮಾವಿನಕೊಡಿಗೆ, ರಾವೂರು, ಗುಡ್ಡೇಹಳ್ಳ ಚಿಟ್ಟಿ ಕೊಡಿಗೆ, ಸಾರ್ಯ, ವರ್ಕಾಟೆ, ಕಾನೂರು, ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ಹಂತುವಾನಿ ಸೇರಿದಂತೆ ವಿವಿಧ ಗ್ರಾಮ ಗಳಲ್ಲಿ ಕಳೆದ 12 ದಿನಗಳಲ್ಲಿ 237 ವಿದ್ಯುತ್ ಕಂಬಗಳು ಗಾಳಿಯಿಂದ ಹಾಗೂ ಮರಗಳು ತಂತಿ ಮೇಲೆ ಬಿದ್ದ ಕಾರಣ ಕಂಬಗಳು ಧರೆಗೆ ಉರುಳಿದೆ.ಉರುಳಿ ಬಿದ್ದು 237 ವಿದ್ಯುತ್ ಕಂಬಗಳ ಪೈಕಿ ಈಗಾಗಲೇ 190 ಕಂಬಗಳನ್ನು ಮೆಸ್ಕಾಂ ಸಿಬ್ಬಂದಿ ಸರಿಪಡಿಸಿದ್ದಾರೆ. ಇನ್ನೂ 47 ವಿದ್ಯುತ್ ಕಂಬಗಳು ಸರಿಪಡಿಸಬೇಕಾಗಿದೆ. ಉರುಳಿ ಬಿದ್ದಿದ್ದ ಎಲ್ಲಾ ಟಿಸಿಗಳನ್ನು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ ಗೌತಮ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಗ್ರಾಹಕರ ತೊಂದರೆ: ಗಾಳಿ, ಮಳೆಯಿಂದಾಗಿ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಗ್ರಾಹಕರು ಪರದಾಡಿದರು. ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿತ್ತು. ಪ್ರತಿ ದಿನ 1-2 ಗಂಟೆ ವಿದ್ಯುತ್ ಬಂದು ಹೋಗುತ್ತಿದ್ದು ವಿದ್ಯುತ್ ಬಂದ ತಕ್ಷಣ ಪಂಪ್ ಸೆಟ್ ಆನ್ ಮಾಡಿ ಓವರ್ ಟ್ಯಾಂಕುಗಳಲ್ಲಿ ನೀರು ತುಂಬಿಸಿ ಕೊಳ್ಳುತ್ತಿದ್ದಾರೆ. ಅನೇಕರು ಮನೆಗಳಿಗೆ ಸೋಲಾರ್, ಇನ್ ವೋಲ್ಟರ್ ಅಳವಡಿಸಿಕೊಂಡಿದ್ದರೂ ಬಿಸಿಲು ಇಲ್ಲದೆ, ವಿದ್ಯುತ್ ಇಲ್ಲದೆ ಸೋಲಾರ್ ಗಳು ಹಾಗೂ ಇನ್ ವೋಲ್ಟರ್ ನೆಲಕಚ್ಚುತ್ತಿದೆ. ಮೊಬೈಲ್ ಚಾರ್ಜ್ ಸಹ ಆಗಲು ವಿದ್ಯುತ್ ಇಲ್ಲವಾಗಿದೆ. ಮೆಸ್ಕಾಂ ಸಿಬ್ಬಂದಿ ಒಂದೊಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ, ತಂತಿ ಸರಿಪಡಿಸಿ ವಿದ್ಯುತ್ ನೀಡುತ್ತಿದ್ದಾರೆ. ಆದರೆ, ಗಾಳಿ ಮಳೆಗೆ ಮತ್ತೆ, ಮತ್ತೆ ಮರದ ಗೆಲ್ಲುಗಳು ತಂತಿ ಮೇಲೆ ಬಿದ್ದು ವಿದ್ಯುತ್ ತಂತಿಗಳು ತುಂಡಾಗುತ್ತಿದ್ದು ಅವರ ಶ್ರಮ ವ್ಯರ್ಥವಾಗುತ್ತಿದೆ.--- ಬಾಕ್ಸ್ ---
ನರಸಿಂಹರಾಜಪುರ ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ತ್ವರಿತವಾಗಿ ಗ್ರಾಹಕರಿಗೆ ವಿದ್ಯುತ್ ನೀಡಲು ತೊಂದರೆಯಾಗುತ್ತಿದೆ. 30 ಲೈನ್ ಮ್ಯಾನ್ ಗಳ ಹುದ್ದೆ ಮಂಜೂರಾಗಿದ್ದರೂ ಕೇವಲ 7 ಲೈನ್ ಮ್ಯಾನ್ ಗಳು ಕೆಲಸ ಮಾಡುತ್ತಿದ್ದಾರೆ. ಮುತ್ತಿನಕೊಪ್ಪ, ನರಸಿಂಹರಾಜಪುರ, ಅಳೇಹಳ್ಳಿಯವರೆಗೆ 30 ಕಿ.ಮೀ. ವ್ಯಾಪ್ತಿಯಲ್ಲಿ 7 ಜನ ಲೈನ್ ಮ್ಯಾನ್‌ಗಳು ಕರ್ತವ್ಯ ನಿರ್ವಹಿಸಬೇಕಾಗಿದೆ. ಮಳೆಗಾಲದಲ್ಲೇ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳುವುದರಿಂದ ಲೈನ್ ಮ್ಯಾನ್ ಗಳು ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ. ಕೆಲವು ವರ್ಷಗಳ ಹಿಂದೆ ಮಳೆಗಾಲದ ವಿದ್ಯುತ್ ನಿರ್ವಹಣೆಗೆ ವಿಶೇಷ ಪಡೆ ಇರುತ್ತಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ. ಮಳೆಗಾಲದಲ್ಲಿ ಸಾಲುಗಟ್ಟಿ ವಿದ್ಯುತ್ ಕಂಬಗಳು ಉರುಳಿದಾಗ ವಿದ್ಯುತ್ ಗುತ್ತಿಗೆದಾರರಿಗೆ ಇದರ ನಿರ್ವಹಣೆ ಕಂಟ್ರಾಕ್ಟ್ ನೀಡಲಾಗುತ್ತಿತ್ತು. ಆದರೆ,ಈಗ ಗುತ್ತಿಗೆ ದಾರರು ಸಾಕೇಂತಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಯಾರೂ ಗುತ್ತಿಗೆ ಹಿಡಿಯುತ್ತಿಲ್ಲ. ಇದರಿಂದ ಲೈನ್ ಮ್ಯಾನ್ ಗಳೇ ಹೊಸ ಕಂಬ ಹಾಕಬೇಕಾಗಿದೆ. ಸರ್ಕಾರ ಹಿಂದೆ ಇದ್ದ ರೀತಿಯಲ್ಲೇ ಮಳೆಗಾಲದಲ್ಲಿ ವಿದ್ಯುತ್ ನಿರ್ವಹಣೆ ಮಾಡಲು ವಿಶೇಷ ತಂಡ ನೀಡಿದರೆ ಬಾಳೆಹೊನ್ನೂರು, ನರಸಿಂಹರಾಜಪುರ, ಮುತ್ತಿನಕೊಪ್ಪ ಮೆಸ್ಕಾಂ ಕಚೇರಿಗಳ ವ್ಯಾಪ್ತಿಯಲ್ಲಿ ತ್ವರಿತಗತಿಯಲ್ಲಿ ಗ್ರಾಹಕರಿಗೆ ವಿದ್ಯುತ್ ನೀಡಬಹುದಾಗಿದೆ ಎನ್ನುತ್ತಾರೆ ಮೆಸ್ಕಾಂ ಇಲಾಖೆ ಅಧಿಕಾರಿಗಳು.