ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸವೇಶ್ವರ ಸಂಸ್ಥಾನದ ಮಹಾಮನೆಯಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಇಡೀ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಹುಶಿಸ್ತೀಯ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದ ಡಾ. ಅಪ್ಪಾಜಿ ಅವರಿಗೆ ನಮನ ಸಲ್ಲಿಸಿದ ಧಾರ್ಮಿಕ ಮುಖಂಡರು ಅಪ್ಪಾಜಿಯವರ ಶಿಕ್ಷಣ ದಾಸೋಹ ಪ್ರೇಮವನ್ನು ಕೊಂಡಾಡಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹರಸೂರು ಗ್ರಾಮ ಕಲ್ಮಠದ ಕರಿಸಿದ್ದೇಶ್ವರ ಶಿವಾಚಾರ್ಯರು, ಬೆಳಗುಂಪಿ ಮಠದ ಅಭಿನವ ಪರ್ವತೇಶ್ವರ ಮಹಾಸ್ವಾಮಿಗಳು, ಚೌಡಾಪುರಿ ಮಠದ ಡಾ. ರಾಜಶೇಖರ ಶಿವಾಚಾರ್ಯರು ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.ಅಪ್ಪಾಜಿ ಅವರ ಉತ್ತರಾಧಿಕಾರಿ ಹಾಗೂ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮಾತನಾಡಿದರು.
ಸಹೋದರಿಯರಾದ ಮಹೇಶ್ವರಿ, ಶಿವಾನಿ, ಭವಾನಿ ಸೇರಿಕೊಂಡು ಡಾ. ಶರಣಬಸವಪ್ಪ ಅಪ್ಪಾಜಿ, ಡಾ. ರಾಜಶೇಖರ ಶಿವಾಚಾರ್ಯರು, ಕರಿಸಿದ್ದೇಶ್ವರ ಶಿವಾಚಾರ್ಯರು ಮತ್ತು ಅಭಿನವ ಪರ್ವತೇಶ್ವರ ಮಹಾಸ್ವಾಮಿಗಳಿಗೆ ಗುರುವಂದನಾ ಪಾದಪೂಜೆ ಸಲ್ಲಿಸಿದರು.
ಶರಣಬಸವ ವಿವಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್.ಜಿ.ಡೊಳ್ಳೇಗೌಡರ್, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್.ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಜಗನ್ನಾಥ ಡಿಗ್ಗಿ, ಜಗದೇವಿ ಡಿಗ್ಗಿ ಇದ್ದರು.