237 ಕಿ.ಮೀ. ಉದ್ದ ಮಾನವ ಸರಪಳಿ ದಾಖಲೆ

KannadaprabhaNewsNetwork |  
Published : Sep 16, 2024, 01:55 AM IST
ಮಂಗಳೂರಿನಲ್ಲಿ ಮಾನವ ಸರಪಳಿಯಲ್ಲಿ ಪಾಲ್ಗೊಂಡ ಅತಿಥಿಗಳು | Kannada Prabha

ಸಾರಾಂಶ

ಜಿಲ್ಲಾ ಮಟ್ಟದ ಸಭಾ ಕಾರ್ಯಕ್ರಮ ಮಂಗಳೂರಿನ ಕದ್ರಿ ಪಾರ್ಕ್‌ ಬಳಿ ನಡೆಯಿತು. ಪಾರ್ಕ್‌ ರಸ್ತೆಯುದ್ದಕ್ಕೂ ನೂರಾರು ಮಂದಿ ಭಾಗವಹಿಸಿದ್ದರು. ಕೇರಳ ಚಂಡೆ, ಬ್ಯಾಂಡ್‌, ಗೊಂಬೆ ವೇಷಗಳು, ಕೊರಗರ ಡೋಲು, ಹುಲಿವೇಷ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ಹೆಚ್ಚಿಸಿದವು

ಕನ್ನಡಪ್ರಭ ವಾರ್ತೆ ಮಂಗಳೂರು

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಭಾನುವಾರ ರಾಜ್ಯ ಸರ್ಕಾರದ ವತಿಯಿಂದ ಬೀದರ್‌ನಿಂದ ಚಾಮರಾಜನಗರದವರೆಗೆ 2500 ಕಿಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಭಾಗವಾಗಿ ಕರಾವಳಿಯಲ್ಲಿ ಒಟ್ಟು 237 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಾಣವಾಯಿತು.

ದ.ಕ. ಜಿಲ್ಲೆಯಲ್ಲಿ 130 ಕಿಮೀ ಉದ್ದಕ್ಕೆ ಮಾನವ ಸರಪಳಿ ರಚಿಸಿ ಸಂವಿಧಾನದ ಮಹತ್ವ ಸಾರಲಾಯಿತು.

ದ.ಕ. ಜಿಲ್ಲಾಡಳಿತದ ವತಿಯಿಂದ ಹೆಜಮಾಡಿ ಟೋಲ್‌ಗೇಟ್‌ನಿಂದ ಸುಳ್ಯದ ಸಂಪಾಜೆ ಗೇಟ್‌ವರೆಗೆ 84 ಸಾವಿರಕ್ಕೂ ಹೆಚ್ಚು ಮಂದಿ ಸಂವಿಧಾನದ ಪೀಠಿಕೆಯ ಪ್ರಮಾಣ ಸ್ವೀಕರಿಸಿ, ಮಾನವ ಸರಪಳಿ ರಚಿಸಿ ದೇಶದ ಸಮಗ್ರತೆ ಮತ್ತು ಏಕತೆ ಸಾರಿದರು. ಈ ಐತಿಹಾಸಿಕ ಮಾನವ ಸರಪಳಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಲಿದೆ.

ಪಕ್ಷ ಭೇದವಿಲ್ಲದೆ ಭಾಗಿ: ಮೂಲ್ಕಿ- ಸುರತ್ಕಲ್‌- ಬೈಕಂಪಾಡಿ- ನಂತೂರು- ಪಡೀಲ್‌- ಬಿ.ಸಿ.ರೋಡ್‌- ಪುತ್ತೂರು- ಸುಳ್ಯ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮಾನವ ಸರಪಳಿ ಮೂಡಿಬಂತು. ಶಾಲೆ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಪಕ್ಷಭೇದ ಮರೆತು ಜನಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು. ಅಲ್ಲಲ್ಲಿ ತಿರಂಗಾ ಧ್ವಜಗಳು, ಕೇಸರಿ- ಬಿಳಿ- ಹಸಿರಿನ ಬಂಟಿಂಗ್ಸ್‌, ಬಲೂನುಗಳು ರಾರಾಜಿಸಿದವು.

ಬೆಳಗ್ಗೆ 9.30ರ ಹೊತ್ತಿಗೇ ನಿಗದಿಪಡಿಸಿದ ಸ್ಥಳದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಜಮಾಯಿಸಿದ್ದರು. 9.37ಕ್ಕೆ ನಾಡಗೀತೆ ಹಾಡಲಾಯಿತು. 9.41ರಿಂದ ಅತಿಥಿಗಳು ಸಂಕ್ಷಿಪ್ತ ಭಾಷಣ ಮಾಡಿದರು. 9.55ರಿಂದ ಸಂವಿಧಾನದ ಪೀಠಿಕೆ ಪ್ರಮಾಣ, 9.57ರಿಂದ 9.59ರವರೆಗೆ ಏಕಕಾಲದಲ್ಲಿ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು.

ಸಂಸ್ಕೃತಿ ಅನಾವರಣ: ಜಿಲ್ಲಾ ಮಟ್ಟದ ಸಭಾ ಕಾರ್ಯಕ್ರಮ ಮಂಗಳೂರಿನ ಕದ್ರಿ ಪಾರ್ಕ್‌ ಬಳಿ ನಡೆಯಿತು. ಪಾರ್ಕ್‌ ರಸ್ತೆಯುದ್ದಕ್ಕೂ ನೂರಾರು ಮಂದಿ ಭಾಗವಹಿಸಿದ್ದರು. ಕೇರಳ ಚಂಡೆ, ಬ್ಯಾಂಡ್‌, ಗೊಂಬೆ ವೇಷಗಳು, ಕೊರಗರ ಡೋಲು, ಹುಲಿವೇಷ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ಹೆಚ್ಚಿಸಿದವು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ಸಂವಿಧಾನದ ಪೀಠಿಕೆ ಪ್ರಮಾಣವಚನ ಬೋಧಿಸಿದರು. ಎರಡೂ ಕೈಗಳನ್ನು ಮೇಲಕ್ಕೆತ್ತಿ ಜೈ ಹಿಂದ್‌, ಜೈ ಕರ್ನಾಟಕ ಘೋಷಣೆ ಕೂಗಲಾಯಿತು. ಇತ್ತೀಚೆಗೆ ರಿಕ್ಷಾ ಅಡಿಗೆ ಬಿದ್ದಿದ್ದ ತಾಯಿಯನ್ನು ರಕ್ಷಿಸಿದ ಬಾಲಕಿ ವೈಭವಿಗೆ ಅತಿಥಿಗಳ ನಡುವೆ ಸ್ಥಾನ ನೀಡಲಾಗಿತ್ತು. ನಂತರ ಅತಿಥಿಗಳು ಸೇರಿದಂತೆ ಪ್ರತಿಯೊಬ್ಬರೂ ಮಾನವ ಸರಪಳಿಯಲ್ಲಿ ಭಾಗಿಯಾದರು. ಬಳಿಕ ವಿವಿಧ ಕಲಾ ತಂಡಗಳ ಪ್ರತಿಭಾ ಪ್ರದರ್ಶನದೊಂದಿಗೆ ಮೆರವಣಿಗೆ ಮೂಲಕ ಸಾಗಿ ಕದ್ರಿ ಪಾರ್ಕ್‌ನಲ್ಲಿ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು.

ಕರ್ತವ್ಯ, ಹಕ್ಕು ಮರೆಯದಿರೋಣ: ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಪ್ರಜಾಪ್ರಭುತ್ವ ದಿನದಂದು ಇಂಥ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದು ಅಭಿನಂದನೀಯ. ನಮ್ಮ ಪ್ರಜಾಪ್ರಭುತ್ವ, ಸಂಸ್ಕೃತಿಯ ನೆಲೆಗಟ್ಟಿನಲ್ಲಿ ದೇಶದ ಭವಿಷ್ಯವನ್ನು ಕಟ್ಟಬೇಕಾಗಿದೆ. ಇದರೊಂದಿಗೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು, ಹಕ್ಕುಗಳನ್ನು ಪಡೆಯುವ ಕಾರ್ಯ ಆಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಂವಿಧಾನದ ಆಶಯದಂತೆ ಎಲ್ಲರೂ ಭ್ರಾತೃತ್ವ ಭಾವದಿಂದ ಒಗ್ಗಟ್ಟಾಗಿ ಬದುಕಬೇಕು ಎಂದು ಹೇಳಿದರು.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಉಪಮೇಯರ್‌ ಸುನೀತಾ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಎ.ಸಿ. ವಿನಯರಾಜ್‌, ಸಂಗೀತಾ ನಾಯಕ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂಪಿ., ಅಪರ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌, ಜಿಪಂ ಸಿಇಒ ಡಾ.ಆನಂದ್‌, ಐಜಿಪಿ ಅಮಿತ್‌ ಸಿಂಗ್‌, ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಮತ್ತಿತರರು ಇದ್ದರು.

ಬಿಗಿ ಬಂದೋಬಸ್ತ್‌, ಸಂಚಾರ ಮಾರ್ಪಾಡುಮಾನವ ಸರಪಳಿ ಹಾದುಹೋಗುವ ಹೆದ್ದಾರಿ ಉದ್ದಕ್ಕೂ ಪ್ರತಿ 100 ಮೀ.ಗೆ ಒಬ್ಬರಂತೆ ವಿಭಾಗ ಅಧಿಕಾರಿ, ಪ್ರತಿ 1 ಕಿ.ಮೀ.ಗೆ ಒಬ್ಬರಂತೆ ಪ್ರದೇಶ ಅಧಿಕಾರಿ, ಪ್ರತಿ 5 ಕಿ.ಮೀ. ಒಬ್ಬರಂತೆ ತಾಲೂಕು ಅಧಿಕಾರಿಯನ್ನು ನೇಮಿಸಲಾಗಿತ್ತು. ಬಿಗಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಮಾನವ ಸರಪಳಿ ಉದ್ದಕ್ಕೂ ಕೆಲಕಾಲ ಸಂಚಾರ ಬದಲಾವಣೆ ಮಾಡಲಾಗಿತ್ತು. ಮಳೆಯೂ ಬಿಡುವು ನೀಡಿದ್ದು ಮಾನವ ಸರಪಳಿ ಯಶಸ್ಸಿಗೆ ಕಾರಣವಾಯಿತು. ಮಂಗಳೂರಿನಲ್ಲಿ 35 ಸಾವಿರ ಮಂದಿ, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ 18,200, ಸುಳ್ಯದಲ್ಲಿ 10 ಸಾವಿರ, ಪುತ್ತೂರಲ್ಲಿ 21,000 ಸೇರಿದಂತೆ ಜಿಲ್ಲೆಯಲ್ಲಿ 84,200 ಮಂದಿ ಮಾನವ ಸರಪಳಿಯಲ್ಲಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ