ಉಳ್ಳಾಲ ನಗರಕ್ಕೆ ೨೪ ಗಂಟೆ ನೀರು: ಪ್ರಾಯೋಗಿಕ ಹಂತ ಪರಿಶೀಲಿಸಿದ ಖಾದರ್

KannadaprabhaNewsNetwork | Published : Sep 9, 2024 1:30 AM

ಸಾರಾಂಶ

ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಉಳ್ಳಾಲ ನಗರಕ್ಕೆ ಬೇಕಾದಂತಹ ೭೦ ಲಕ್ಷ ಲೀ. ಟ್ಯಾಂಕಿಗೆ ಫಜೀರು ಟ್ರೀಟ್ ಮೆಂಟ್ ಪ್ಲ್ಯಾಂಟ್‌ನಿಂದ ಬಿಡುಗಡೆಗೊಳಿಸಿದ ಪ್ರಾಯೋಗಿಕ ಹಂತದ ನೀರು ಬರುವುದನ್ನು ಯುಟಿ ಖಾದರ್‌ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಥಮ ಹಂತದ ಪ್ರಾಯೋಗಿಕ ಟ್ರಯಲ್ ರೌಂಡ್ ಶನಿವಾರ ಆರಂಭಿಸಲಾಗಿದೆ. ಗುಣಮಟ್ಟ ಪರಿಶೀಲಿಸಿದ ನಂತರ ಮೊದಲ ಹಂತದ ಯೋಜನೆಗೆ ಮುಖ್ಯಮಂತ್ರಿ ಕ್ಷೇತ್ರಕ್ಕೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಉಳ್ಳಾಲ ನಗರಕ್ಕೆ ಬೇಕಾದಂತಹ ೭೦ ಲಕ್ಷ ಲೀ. ಟ್ಯಾಂಕಿಗೆ ಫಜೀರು ಟ್ರೀಟ್ ಮೆಂಟ್ ಪ್ಲ್ಯಾಂಟ್‌ನಿಂದ ಬಿಡುಗಡೆಗೊಳಿಸಿದ ಪ್ರಾಯೋಗಿಕ ಹಂತದ ನೀರು ಬರುವುದನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು.ಕಳೆದ ಚುನಾವಣೆ ಸಂದರ್ಭ ಮಾತು ಕೊಟ್ಟಂತೆ ಮುಂದಿನ ಕೆಲ ತಿಂಗಳುಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಆಗಲಿದೆ. ೧೯೮ ಕೋಟಿ ರು. ಯೋಜನೆಯಡಿ ಸಜಿಪದಲ್ಲಿ ವಾಟರ್ ಜ್ಯಾಕ್ಯುವೆಲ್ ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ನೀರು ಲಿಫ್ಟ್ ಮಾಡಿ ಕೊಣಾಜೆ-ಫಜೀರು ಮಧ್ಯಭಾಗದಲ್ಲಿರುವ ಆಧುನಿಕ ತಾಂತ್ರೀಕೃತ ಟ್ರೀಟ್ ಮೆಂಟ್‌ಗೆ ನೀರು ಬರುತ್ತದೆ. ಅಲ್ಲಿಂದ ಪೈಪ್ ಲೈನ್ ಮುಖಾಂತರ ಎಲ್ಲ ಗ್ರಾಮ ಹಾಗೂ ನಗರ ಮಟ್ಟಕ್ಕೆ ನೀರು ತಲುಪಲಿದೆ ಎಂದರು.

ವಿದ್ಯುತ್ ಅಧಿಕ ಕೆ.ವಿಗೆ ಪರಿವರ್ತನೆ:

ಈಗಾಗಲೇ ಇರುವ ೩೦ ಕೆ.ವಿ. ವಿದ್ಯುತ್ ಅನ್ನು ೧೩೨ ಕೆ.ವಿ.ಯಾಗಿ ಪರಿವರ್ತನೆಗೆ ಯೋಜನೆ ರೂಪಿಸಲಾಗಿದೆ. ಕೊಣಾಜೆ ಮತ್ತು ಕೋಟೆಕಾರು ಸಬ್ ಸ್ಟೇಷನ್ ಈಗಾಗಲೇ ತೆರೆಯಲಾಗಿದೆ. ಮುಡಿಪುವಿನಿಂದ ಅಂಡರ್ ಗ್ರೌಂಡ್ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುವುದು. ಈ ಹಿಂದೆ ಕಾವೂರಿನಿಂದ ವಿದ್ಯುತ್ ಸರಬರಾಜು ಆಗಿ ಓವರ್ ಲೋಡ್ ಸಮಸ್ಯೆಗಳು ಅಧಿಕವಾಗಿತ್ತು. ಪರ್ಯಾಯವಾಗಿ ಜೆಪ್ಪಿನಮೊಗರುವಿನಿಂದ ವಿದ್ಯುತ್ ಪಡೆಯುವ ಯೋಜನೆಯನ್ನೂ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಳರೋಗಿ ದಾಖಲಾತಿ ಆರಂಭ:ಉಳ್ಳಾಲ ಸಮುದಾಯ ಕೇಂದ್ರ ಆಸ್ಪತ್ರೆಗೆ ದಿನಕ್ಕೆ ೪೦೦ ಹೊರರೋಗಿಗಳು ಬರುತ್ತಾರೆ. ಇದೀಗ ಒಳರೋಗಿಗಳ ದಾಖಲಾತಿಯೂ ಆರಂಭವಾಗಿದೆ. ಯುನಾನಿ, ಆಯುರ್ವೇದ, ಯೋಗ ಎಲ್ಲಾ ಥೆರಪಿಸ್ಟ್‌ಗಳ ಆಗಮನವಾಗಿದೆ. ದಂತ ಚಿಕಿತ್ಸೆಯೂ ಆರಂಭವಾಗಿದೆ. ಶೀಘ್ರದಲ್ಲೇ ಉಚಿತ ಡಯಾಲಿಸಿಸ್ ಸೆಂಟರ್ ಕೂಡಾ ಆರಂಭಿಸಲಾಗುವುದು ಎಂದು ಖಾದರ್‌ ಹೇಳಿದರು.ಫಜೀರು ಭಾಗದಲ್ಲಿ ೨ ಎಕರೆ ಜಾಗವನ್ನು ಗುರುತಿಸಲಾಗಿದ್ದು, ಎಲ್ಲರ ಬೇಡಿಕೆಯಾಗಿದ್ದ ಅಗ್ನಿ ಶಾಮಕ ದಳದ ಕಚೇರಿಯೂ ಒಂದು ತಿಂಗಳ ತಿಂಗಳ ಒಳಗಡೆ ಕಾರ್ಯಾಚರಿಸಲಿದೆ ಎಂದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸ್ವಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ ನಗರಸಭೆ ಸದಸ್ಯರಾದ ಬಾಝಿಲ್ ಡಿಸೋಜ, ಗೀತಾ ಬಾಯಿ, ಅಬ್ದುಲ್ ಅಝೀಝ್ ಉಳ್ಳಾಲ್, ಐಯೂಬ್ ಮಂಚಿಲ, ಯು.ಎ. ಇಸ್ಮಾಯಿಲ್, ಅಬ್ದುಲ್ ಜಬ್ಬಾರ್, ಅಝ್ಗರ್ ಅಲಿ, ಮೊಹಮ್ಮದ್ ಮುಕ್ಕಚ್ಚೇರಿ, ಖಲೀಲ್ ಉಳ್ಳಾಲ್, ನಾಮನಿರ್ದೇಶಿತ ಸದಸ್ಯ ರವಿ, ನೀರು ಕರ್ನಾಟಕ ಅರ್ಬನ್ ವಾಟರ್ ಬೋರ್ಡಿನ ಅಧಿಕಾರಿ ರೇಣುಕಾ, ನಗರಸಭೆ ಪ್ರಭಾರ ಪೌರಾಯುಕ್ತ ಮತ್ತು ಮತ್ತಿತರರಿದ್ದರು.

Share this article