ಕಾರವಾರ: ಆತ್ಮಲಿಂಗ ಪ್ರತಿಷ್ಠಾಪನೆ, ಭೂಕೈಲಾಸ, ಯಕ್ಷಗಾನ, ಲಂಕೆಗೆ ಸೇತುವೆ ನಿರ್ಮಾಣ ... ಹೀಗೆ ಗಣೇಶೋತ್ಸವದಲ್ಲಿ ಗಣಪತಿಯ ಎದುರು ಒಂದೊಂದು ಕಡೆ ಒಂದೊಂದು ಸನ್ನಿವೇಶ. ಸಾವಿರಾರು ಜನರು ಶ್ರದ್ಧೆ ಭಕ್ತಯಿಂದ ವೀಕ್ಷಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಚೌತಿಯ ಸಡಗರ, ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ 1400ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಣಪ ವಿರಾಜಮಾನನಾಗಿದ್ದಾನೆ. ಒಂದೊಂದು ಕಡೆ ಒಂದೊಂದು ಬಣ್ಣ, ಬಗೆ ಬಗೆಯ ಸನ್ನಿವೇಶ, ಬೇರೆ ಬೇರೆ ಭಂಗಿ ಹೀಗೆ ಕಲಾವಿದರ ಕೈಚಳಕದಲ್ಲಿ ಮೈವೆತ್ತಿದ ಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಇನ್ನು ಮನೆ ಮನೆಗಳಲ್ಲೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ಬೆಂಗಳೂರು, ಗೋವಾ, ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ಇರುವ ಜಿಲ್ಲೆಯ ಮೂಲದ ಜನತೆ ಆಗಮಿಸಿದ್ದಾರೆ. ಕುಟುಂಬದೊಟ್ಟಿಗೆ ಮನೆ ಮನೆಗಳಲ್ಲೂ ಸಂಭ್ರಮ ಕಳೆಗಟ್ಟಿದೆ. ಚಕ್ಕುಲಿ, ವಡೆ, ಮೋದಕ, ಪಂಚಕಜ್ಜಾಯ, ಲಡ್ಡು, ಅತಿರಸ... ಹೀಗೆ ಬಗೆ ಬಗೆಯ ತಿಂಡಿಗಳ ಸಮಾರಾಧನೆ ನಡೆಯುತ್ತಿದೆ. ಆಪ್ತರು ಬಂಧುಗಳ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯಗಳ ಹಾಗೂ ಸಿಹಿ ತಿಂಡಿಗಳ ವಿನಿಮಯವೂ ಜೋರಾಗಿದೆ.
ಗಣೇಶನ ದೇಗುಲಕ್ಕೆ ಭಕ್ತರ ದಂಡು
ಇಡಗುಂಜಿ ವಿನಾಯಕ ದೇವಾಲಯ, ಅಮದಳ್ಳಿ ವೀರ ಗಣಪತಿ, ಉಪ್ಪಿನಪಟ್ಟಣ ಸಿದ್ಧಿವಿನಾಯಕ ದೇವಾಲಯ, ಗೋಕರ್ಣದ ಮಹಾಗಣಪತಿ ದೇವಾಲಯಗಳಲ್ಲಿ ಚೌತಿಯ ದಿನ ಸಾವಿರಾರು ಜನರು ಆಗಮಿಸಿ ಗಣಪತಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ. ಇಡಗುಂಜಿ ವಿನಾಯಕ ದೇವಾಲಯಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.